ಗಂಗಾವತಿ: ದಿನಗೂಲಿ ನೌಕರರ ಖಾಯಂಗೆ ಒತ್ತಾಯಿಸಿ ಪೌರಕಾರ್ಮಿರಿಂದ ಧರಣಿ

ಗಂಗಾವತಿ,ಆ.07: ಹೈ.ಕ.ಭಾಗದ ನಗರಸಭೆ ಪುರಸಭೆ ಮತ್ತು ಪಟ್ಟಣಪಂ.ಗಳಲ್ಲಿ ಹಂಗಾಮಿ, ದಿನಗೂಲಿ, ಸಮಾನವೇತನ ಮತ್ತು ಹೊರಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ನಗರಸಭೆ ಎದುರು ಪೌರಕಾರ್ಮಿಕರು ಧರಣಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಕಾರ್ಮಿಕ ಮುಖಂಡ ರಗಡಪ್ಪ ಮಾತನಾಡಿ, ಹಲವು ವರ್ಷಗಳಿಂದ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಸೇವಾಭದ್ರತೆ ಸೇರಿ ಹಲವು ಸೌಕರ್ಯ ನೀಡಲು ಸರಕಾರ ಕೂಡಲೇ ಖಾಯಂ ಮಾಡಬೇಕು. ಕಲಂ 371(ಜೆ) ಅನ್ವಯ ಪೌರಕಾರ್ಮಿಕರನ್ನು ಖಾಯಂ ಮಾಡಲು ಅವಕಾಶವಿದ್ದು, ಸರಕಾರ ಕೂಡಲೇ ಆದೇಶ ಹೊರಡಿಸಬೇಕು. ಹಲವು ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ನೀಡಬೇಕು. ಮೇಲ್ದರ್ಜೆಗೇರಿದ ಪಟ್ಟಣ ಪಂ. ಮತ್ತು ಪುರಸಭೆ ನೌಕರರನ್ನು ಪೌರಕಾರ್ಮಿಕರೆಂದು ಪರಿಗಣಿಸಬೇಕು. ಪೌರಕಾರ್ಮಿಕ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ರಮೇಶ, ತಿಮ್ಮಪ್ಪ, ಸೈಯದ್ ಮೀರಾ, ನಾಗರಾಜ, ಬಿ.ಬಸವರಾಜ, ಬಸಯ್ಯ ಹಿರೇಮಠ, ಸುಶೀಲಮ್ಮ, ಕಾಳಿ ಹುಲಿಗೆಮ್ಮ, ರಾಮಣ್ಣ ಕಳ್ಳಿಮನಿ ಸೇರಿ ಇತರೆ ಪೌರ ಕಾರ್ಮಿಕರಿದ್ದರು.





