ಪ್ರತ್ಯೇಕ ರಾಜ್ಯದ ಕೂಗು ಸಮಂಜಸವಲ್ಲ: ಎಸ್.ಎಚ್.ದೊರೆಸ್ವಾಮಿ
ಕನ್ನಡ ಸೇನೆ ವತಿಯಿಂದ ಸಂವಾದ ಕಾರ್ಯಕ್ರಮ
ಮಂಡ್ಯ, ಆ.7: ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ತಾರತಮ್ಯ ಕಾರಣಕ್ಕೆ ಪ್ರತ್ಯೇಕ ರಾಜ್ಯದ ಕೂಗು ಸಮಂಜಸವಲ್ಲ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ.ಎಚ್.ಎಸ್.ದೊರೆಸ್ವಾಮಿ ಹೇಳಿದ್ದಾರೆ.
ಕನ್ನಡ ಸೇನೆ ಸಂಘಟನೆ ವತಿಯಿಂದ ಅಖಂಡ ಕರ್ನಾಟಕ ಕುರಿತು ಮಂಗಳವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ರಾಜ್ಯದ ಏಕೀಕರಣಕ್ಕೆ ಸಾವಿರಾರು ಮಂದಿ ಶ್ರಮಿಸಿರುವುದನ್ನು ಮರೆಯಬಾರದು ಎಂದರು. ಅನುದಾನದಲ್ಲಿ ತಾರತಮ್ಯ ಆಗಿದೆ ಎಂದು ಸಣ್ಣ ನೆಪವೊಡ್ಡಿ ಪ್ರತ್ಯೇಕ ರಾಜ್ಯ ಕೊಡಿ ಎಂದು ಕೇಳುವುದು ತಪ್ಪು. ಆ ಭಾಗದ ಜನಪ್ರತಿನಿಧಿಗಳು ಹೆಚ್ಚು ಅನುದಾನ ತೆಗೆದುಕೊಂಡು ಹೋಗಿ ಅಭಿವೃದ್ಧಿ ಮಾಡಬೇಕು. ಕೆಲವು ಸ್ವಾಮೀಜಿಗಳೂ ರಾಜ್ಯದ ಏಕತೆಗೆ ಒತ್ತು ನೀಡಬೇಕು ಎಂದು ಅವರು ಸಲಹೆ ನೀಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಮೂಲ ಸೌಕರ್ಯಗಳನ್ನು ಒದಗಿಸಲಾಗದ ಸರಕಾರಗಳಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದ ಅವರು, ಆಹಾರ, ನೀರು, ವಸತಿ, ಶಿಕ್ಷಣ, ಉದ್ಯೋಗ ಮೂಲ ಸೌಕರ್ಯ ಒದಗಿಸಲು ಮುಂದಾಗಬೇಕು ಎಂದು ತಾಕೀತು ಮಾಡಿದರು.
ದೇಶದಲ್ಲಿ 35 ಸಾವಿರಕ್ಕೂ ಹೆಚ್ಚು ಜನರು ಹಸಿವಿನಿಂದ ಸಾವನ್ನಪ್ಪುತ್ತಿದ್ದಾರೆ ಎಂಬ ವರದಿಯಿದೆ. ಸರಕಾರಗಳು ಕ್ಯಾಂಟಿನ್, ಉಚಿತ ಪಡಿತರ ನೀಡುವುದಕ್ಕೆ ಆದ್ಯತೆ ನೀಡದೆ ಅನ್ನ ಬೆಳೆಯಲು ಹೆಚ್ಚು ಅವಕಾಶ ಕಲ್ಪಿಸಬೇಕಾಗಿದೆ. ಡಾ.ಸ್ವಾಮಿನಾಥನ್ ವರದಿ ಅನುಷ್ಠಾನಗೊಳಿಸಬೇಕು. ಸಾಲಮನ್ನಾಕ್ಕಿಂತ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ದರ ನಿಗದಿಗೆ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.
ಅಧಿಕಾರ ವಿಕೇಂದ್ರೀಕರಣಗೊಳ್ಳುತ್ತಿದೆ. ಆದರೆ, ಕೈಗಾರಿಕೆಗಳ ಸ್ಥಾಪನೆ ವಿಕೇಂದ್ರೀಕರಣಗೊಳ್ಳುತ್ತಿಲ್ಲ. ಗ್ರಾಮಾಂತರ ಪ್ರದೇಶದಕ್ಕೂ ಉದ್ದಿಮೆಗಳು ಬರಬೇಕು. ಈ ನಿಟ್ಟಿನಲ್ಲಿ ಸಂಘಟನೆಗಳು ಸಂಘಟಿತ ಹೋರಾಟಕ್ಕೆ ಅಣಿಯಾಗಬೇಕು ಎಂದು ಅವರು ಕರೆ ನೀಡಿದರು.
ಮಾಜಿ ಸಂಸದ ಹಾಗೂ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಾ.ಜಿ.ಮಾದೇಗೌಡ, ಸಾಹಿತಿ ಪ್ರೋ.ಎಂ.ಕರೀಮುದ್ದೀನ್, ಕನ್ನಡಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ರೈತ ಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ಜಯಕರ್ನಾಟಕ ಸಂಘಟನೆಯ ಎಸ್.ನಾರಾಯಣ, ದಲಿತ ಸಂಘರ್ಷ ಸಮಿತಿಯ ಎಂ.ಬಿ.ಶ್ರೀನಿವಾಸ್, ಮಹಾಂತಪ್ಪ, ಇತರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.