ಭಾರತ ‘ಎ’ ತಂಡಕ್ಕೆ ಇನಿಂಗ್ಸ್ ಅಂತರದ ಜಯ

ಬೆಂಗಳೂರು, ಆ.7: ಎರಡೂ ಇನಿಂಗ್ಸ್‌ನಲ್ಲಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರೂಡಿ ಸೆಕೆಂಡ್ ತಲಾ 94 ರನ್ ಗಳಿಸಿದ ಹೊರತಾಗಿಯೂ ದಕ್ಷಿಣ ಆಫ್ರಿಕ ‘ಎ’ ತಂಡ ಭಾರತ ‘ಎ’ ತಂಡದ ವಿರುದ್ಧದ ಚತುರ್ದಿನ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 30 ರನ್‌ಗಳಿಂದ ಸೋಲುಂಡಿದೆ.
ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾಲ್ಕನೇ ದಿನವಾದ ಮಂಗಳವಾರ 4 ವಿಕೆಟ್ ನಷ್ಟಕ್ಕೆ 99 ರನ್‌ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ದಕ್ಷಿಣ ಆಫ್ರಿಕ ತಂಡ ರೂಡ್ ಸೆಕೆಂಡ್ ಏಕಾಂಗಿ ಹೋರಾಟದ ಮೂಲಕ ದಾಖಲಿಸಿದ 94 ರನ್(214 ಎಸೆತ, 15 ಬೌಂಡರಿ)ಕೊಡುಗೆಯ ನಡುವೆಯೂ ಭಾರತದ ವೇಗದ ಬೌಲರ್ ಸಿರಾಜ್(5-73) ದಾಳಿಗೆ ತತ್ತರಿಸಿ 308 ರನ್‌ಗೆ ಆಲೌಟಾಯಿತು.
ಮೋಡಕವಿದ ವಾತಾವರಣದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ತಂಡ ಇನಿಂಗ್ಸ್ ಅಂತರದ ಭರ್ಜರಿ ಜಯ ದಾಖಲಿಸಿತು. ಈ ಮೂಲಕ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಇಂದು ಅಗ್ರ ಕ್ರಮಾಂಕದ ಹಂಝಾ ಔಟಾಗದೆ 46 ರನ್‌ನಿಂದ ಸೆಕೆಂಡ್ (ಔಟಾಗದೆ 2) ಅವರೊಂದಿಗೆ ಇನಿಂಗ್ಸ್ ಆರಂಭಿಸಿದರು. ಸೆಕೆಂಡ್‌ರೊಂದಿಗೆ 5ನೇ ವಿಕೆಟ್‌ಗೆ 29 ರನ್ ಸೇರಿಸಿದ ಹಂಝಾ 63 ರನ್(126 ಎಸೆತ,11 ಬೌಂಡರಿ)ಗಳಿಸಿ ಗುರ್ಬಾನಿಗೆ(2-45)ವಿಕೆಟ್ ಒಪ್ಪಿಸಿದರು. ಸೆಕೆಂಡ್ ಹಾಗೂ ಶಾನ್ ವಾನ್‌ಬರ್ಗ್(50,175 ಎಸೆತ, 6 ಬೌಂಡರಿ)ಆರನೇ ವಿಕೆಟ್‌ಗೆ 306 ಎಸೆತಗಳಲ್ಲಿ 119 ರನ್ ಸೇರಿಸಿದರು. ಗುರ್ಬಾನಿ ಅವರು ವಾನ್‌ಬರ್ಗ್ ವಿಕೆಟ್ ಕಬಳಿಸಿ ಈ ಜೋಡಿಯನ್ನು ಬೇರ್ಪಡಿಸಿದರು. ಮಲುಸಿ ಸಿಬೊಟೊ 64 ನಿಮಿಷಗಳ ಕಾಲ ಕ್ರೀಸ್ ಆಕ್ರಮಿಸಿಕೊಂಡು 50 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿ ಪಂದ್ಯವನ್ನು ಡ್ರಾದತ್ತ ಕೊಂಡೊಯ್ಯಲು ವಿಫಲಯತ್ನ ನಡೆಸಿದರು. ಆದರೆ, ಉಳಿದ ಆಟಗಾರರು ಸಿಬೊಟೊಗೆ ಸಾಥ್ ನೀಡಲಿಲ್ಲ. ಸಿರಾಜ್ ಪಂದ್ಯದಲ್ಲಿ ಸತತ ಎರಡನೇ ಬಾರಿ ಐದು ವಿಕೆಟ್ ಗೊಂಚಲು ಪಡೆದರು.







