ಏಶ್ಯನ್ ಗೇಮ್ಸ್: ಹೊರಗುಳಿದ ವೇಟ್‌ಲಿಫ್ಟರ್ ಮಿರಾಬಾಯಿ ಚಾನು

ಹೊಸದಿಲ್ಲಿ, ಆ.7: ಬೆನ್ನುನೋವಿನಿಂದ ಸಂಪೂರ್ಣ ಚೇತರಿಸಿಕೊಳ್ಳಲು ವಿಫಲವಾಗಿರುವ ವಿಶ್ವ ಚಾಂಪಿಯನ್ ವೇಟ್‌ಲಿಫ್ಟರ್ ಸೈಖೊಮ್ ಮಿರಾಬಾಯಿ ಚಾನು ಪ್ರತಿಷ್ಠಿತ ಏಶ್ಯನ್ ಗೇಮ್ಸ್‌ನಿಂದ ಹೊರಗುಳಿದಿದ್ದಾರೆ.
‘‘ಹೌದು, ಮಿರಾಬಾಯಿ ಚಾನು ಏಶ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುವುದಿಲ್ಲ’’ ಎಂದು ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಶನ್(ಐಡಬ್ಲುಎಫ್)ಕಾರ್ಯದರ್ಶಿ ಸಹದೇವ್ ಯಾದವ್ ಸುದ್ದಿಸಂಸ್ಥೆಗೆ ದೃಢಪಡಿಸಿದ್ದಾರೆ.
ಈ ವರ್ಷಾಂತ್ಯದಲ್ಲಿ ನಡೆಯುವ ಒಲಿಂಪಿಕ್ಸ್ ಕ್ವಾಲಿಫೈಯರ್‌ಗೆ ಫಿಟ್ ಇರುವ ಉದ್ದೇಶದಿಂದ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಚಾನು ಆ.18 ರಿಂದ ಜಕಾರ್ತದಲ್ಲಿ ಆರಂಭವಾಗಲಿರುವ ಏಶ್ಯನ್ ಗೇಮ್ಸ್ ನಿಂದ ಹೊರಗುಳಿಯಲೇಬೇಕು ಎಂದು ರಾಷ್ಟ್ರೀಯ ಕೋಚ್ ವಿಜಯ್ ಶರ್ಮಾ ಶಿಫಾರಸು ಮಾಡಿದ ಬೆನ್ನಿಗೇ ಈ ನಿರ್ಧಾರಕ್ಕೆ ಬರಲಾಗಿದೆ.
ಚಾನು ಮೇ ತಿಂಗಳಿಂದ ಬೆನ್ನುನೋವಿನಿಂದ ಬಳಲುತ್ತಿದ್ದು ಇನ್ನಷ್ಟೇ ಪೂರ್ಣಪ್ರಮಾಣದ ವೇಟ್ ಲಿಫ್ಟಿಂಗ್ ತರಬೇತಿಯಲ್ಲಿ ಪಾಲ್ಗೊಳ್ಳಬೇಕಾಗಿದೆ.
‘‘ಒಲಿಂಪಿಕ್ಸ್ ಕ್ವಾಲಿಫೈಯರ್ ಟೂರ್ನಿ ಹತ್ತಿರವಾಗುತ್ತಿದೆ. ಇದು ಏಶ್ಯನ್ ಗೇಮ್ಸ್‌ಗಿಂತಲೂ ಪ್ರಮುಖವಾಗಿದೆ. ಒಲಿಂಪಿಕ್ಸ್ ಕ್ವಾಲಿಫೈಯರ್‌ಗೆ ಮೊದಲು ಗಾಯದ ಭೀತಿಯಿಂದ ಬಚಾವಾಗಲು ಚಾನು ಟೂರ್ನಿಯಿಂದ ದೂರವುಳಿಯುವುದೇ ಉತ್ತಮ’’ ಎಂದು ಶರ್ಮಾ ಫೆಡರೇಶನ್‌ಗೆ ಸಲಹೆ ನೀಡಿದ್ದಾರೆ.
ಮಣಿಪುರದ ವೇಟ್‌ಲಿಫ್ಟರ್ ಚಾನು ಮುಂಬರುವ ಏಶ್ಯನ್ ಗೇಮ್ಸ್‌ನಿಂದ ದೂರ ಉಳಿದಿರುವುದು ಭಾರತಕ್ಕೆ ತೀವ್ರ ಹಿನ್ನಡೆವುಂಟು ಮಾಡಿದೆ. ಚಾನು ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸುವ ಓರ್ವ ಪ್ರಬಲ ಸ್ಪರ್ಧಿಯಾಗಿದ್ದರು.
‘‘ನನಗೆ ಮೇ 25 ರಿಂದ ಬೆನ್ನುನೋವು ಕಾಣಿಸಿಕೊಂಡಿದೆ. ದಿಲ್ಲಿ ಹಾಗೂ ಮುಂಬೈ ಸಹಿತ ಹಲವು ನಗರಗಳಿಗೆ ಚಿಕಿತ್ಸೆಗಾಗಿ ತೆರಳಿದ್ದೆ. ಆದರೆ, ನನ್ನ ಬೆನ್ನುನೋವಿಗೆ ಕಾರಣವೇನೆಂದು ವೈದ್ಯರಿಗೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ವೈದ್ಯರು ನಡೆಸಿದ್ದ ಎಲ್ಲ ಪರೀಕ್ಷೆಗಳು ಸಕಾರಾತ್ಮಕವಾಗಿವೆ. ಎಕ್ಸ್ ರೇನಲ್ಲೂ ಏನೂ ಸಮಸ್ಯೆ ಕಂಡುಬಂದಿಲ್ಲ’’ಎಂದು ಮಿರಾಬಾಯಿ ಚಾನು ಹೇಳಿದ್ದಾರೆ.
ನ.1 ರಿಂದ ವಿಶ್ವ ಚಾಂಪಿಯನ್‌ಶಿಪ್ ಅಶ್ಗಬಾಟ್‌ನಲ್ಲಿ ಆರಂಭವಾಗಲಿದ್ದು, ಇದು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಇರುವ ಮೊದಲ ಟೂರ್ನಿಯಾಗಿದೆ.







