ಮಡಿಕೇರಿ: ಕುಟ್ಟ ಕೊಡವ ಸಮಾಜದಲ್ಲಿ ಸಂಭ್ರಮದ 'ಕಕ್ಕಡ ನಮ್ಮೆ' ಆಚರಣೆ

ಮಡಿಕೇರಿ ಆ.7 : ಕೊಡಗಿನ ಗಡಿಭಾಗ ಕುಟ್ಟದಲ್ಲಿ ಕುಟ್ಟ ಕೊಡವ ಸಮಾಜ ಹಾಗೂ ವಿವಿಧ ಮಹಿಳಾ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ 6 ನೇ ವರ್ಷದ 'ಕಕ್ಕಡ ನಮ್ಮೆ'ಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ ಪ್ರತಿಯೊಂದು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗಾಗಿ ಉಳಿಸಿ ಬೆಳೆಸುವ ಅಗತ್ಯವಿದೆ ಎಂದರು. ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಪ್ರತಿಬಿಂಬಿಸುವ ಮತ್ತು ಪರಿಚಯಿಸುವ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು, ಅಲ್ಲದೆ ಮಹಿಳೆಯರು ಒಟ್ಟಾಗಿ ಸೇರಿ ನಡೆಸುವ ಈ ರೀತಿಯ ವಿಶಿಷ್ಟ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವುದು ಅತಿ ಮುಖ್ಯವೆಂದರು. ಮಹಿಳೆಯರು ನಡೆಸುವ ಕಾರ್ಯಕ್ರಮಗಳಿಗೆ ಯಾವುದೇ ಸಂದರ್ಭದಲ್ಲಿ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದ ವೀಣಾಅಚ್ಚಯ್ಯ, 'ಕಕ್ಕಡ ನಮ್ಮೆ' ಪ್ರತಿ ವರ್ಷ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಟ್ಟ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಕಳೆದ ಆರು ವರ್ಷಗಳಿಂದ ಕಕ್ಕಡ ನಮ್ಮೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ದೇಶದ ಮೂಲೆ ಮೂಲೆಗೆ ಕೊಡಗಿನ ಸಂಸ್ಕೃತಿಯ ಪರಿಚಯವಾಗಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು. ಈ ವೈವಿಧ್ಯಮಯ ಕಾರ್ಯಕ್ರಮವನ್ನು ಕೊಡವರು ಮಾತ್ರವಲ್ಲದೆ ಎಲ್ಲರೂ ಒಗ್ಗೂಡಿ ಆಚರಿಸುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡವ ಸಮಾಜಗಳ ಒಕ್ಕೂಟದ ಪೊಮ್ಮಕ್ಕಡ ಕೂಟದ ಖಜಾಂಚಿ ಕಳ್ಳಿಚಂಡ ಶಾಲಿನಿ ಕಾರ್ಯಪ್ಪ, ಕುಟ್ಟ ಕೊಡವ ಸಮಾಜದ ಖಜಾಂಚಿ ಕೊಂಗಂಡ ಸುರೇಶ್, ಪ್ರಮುಖರಾದ ತೀತಿರ ಮಂದಣ್ಣ, ಚೆಕ್ಕೇರ ರಾಬಿನ್, ಮಚ್ಚಮಾಡ ಪ್ರಕಾಶ್, ಮಚ್ಚಮಾಡ ನವ್ಯ, ತೀತಿರ ಕಬೀರ್, ತೀತಿರ ಮೇಘ ತಿಮ್ಮಯ್ಯ, ಕಲ್ಕಂಡ ಅಪ್ಪಣ್ಣ, ಕೋಳೆರ ಲೀಲ, ಚೆಕ್ಕೇರ ದೇಚು, ಮಚ್ಚಮಾಡ ಪದ್ಮ, ಶರೀನ್ ಮತ್ತಿತರ ಪ್ರಮುಖರು ಹಾಜರಿದ್ದರು.
ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಯಿಂದಲೂ ಆಗಮಿಸಿದ್ದ ಮಹಿಳಾ ಸದಸ್ಯರುಗಳು ಕಕ್ಕಡದ ತಿನಿಸು, ಕೊಡಗಿನ ಖಾದ್ಯಗಳು ಸೇರಿದಂತೆ ವೈವಿಧ್ಯಮಯ ತಿಂಡಿ ತಿನಿಸುಗಳನ್ನು ಪ್ರದರ್ಶನಕ್ಕಿಟ್ಟು ಗಮನ ಸೆಳೆದರು. ನೆರೆದಿದ್ದವರು ರುಚಿ ರುಚಿಯಾದ ಖಾದ್ಯಗಳನ್ನು ಸವಿದರು. ಕಳೆದ ಆರು ವರ್ಷಗಳಿಂದ ಕಕ್ಕಡ ನಮ್ಮೆಯನ್ನು ಆಚರಿಸಲಾಗುತ್ತಿದ್ದು, ಆರಂಭದ ಎರಡು ವರ್ಷಗಳ ಕಾಲ ಕೊಡವ ಸಮಾಜದ ಸದಸ್ಯರುಗಳು ಮಾತ್ರ ಭಾಗವಹಿಸುತ್ತಿದ್ದರು. ಆದರೆ ಕಳೆದ ನಾಲ್ಕು ವರ್ಷಗಳಿಂದ ಸುತ್ತಮುತ್ತಲ ಊರಿನ ಎಲ್ಲಾ ಮಹಿಳಾ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತಿದ್ದಾರೆ ಎಂದು ಆಯೋಜಕರು ಇದೇ ಸಂದರ್ಭ ಮೆಚ್ಚುಗೆ ವ್ಯಕ್ತಪಡಿಸಿದರು.







