'ದೇಶ ಪ್ರೇಮದ ಬಗ್ಗೆ ಇಂದು ಭಾಷಣ ಮಾಡುವವರು, ಅಂದು ಬ್ರಿಟೀಷರ ಜೊತೆ ಕೈ ಜೋಡಿಸಿದ್ದರು'
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಬೆಂಗಳೂರು, ಆ.9: ದೇಶದಲ್ಲಿ ದ್ವೇಷ ಹಾಗೂ ಅಸಹಿಷ್ಣುತೆಯ ಪ್ರಮಾಣ ಹೆಚ್ಚಾಗುತ್ತಿದ್ದು, ಪರಸ್ಪರ ಒಡಕು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಆದುದರಿಂದ, ಈ ದ್ವೇಷ ಹಾಗೂ ಅಹಿಸುಷ್ಣತೆಯ ಸಿದ್ಧಾಂತದ ವಿರುದ್ಧ ಚಳವಳಿ ಮಾಡುವ ಅಗತ್ಯವಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ.
ಗುರುವಾರ ನಗರದ ಪುರಭವನದಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಿದ್ದ ಕ್ವಿಟ್ ಇಂಡಿಯಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶದಲ್ಲಿ ಸಹಿಷ್ಣುತೆ ನೆಲೆಯೂರಬೇಕು. ಪ್ರತ್ಯೇಕತೆಯ ಕೂಗು ಹೆಚ್ಚಾದರೆ ಅದರ ಪರಿಣಾಮ ಏನಾಗಬಹುದು ಎಂಬುದನ್ನು ಊಹಿಸಲು ಸಾಧ್ಯವಿಲ್ಲ ಎಂದರು.
ಕಾಂಗ್ರೆಸ್ ಪಕ್ಷ ಇಲ್ಲದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ, ದೇಶವನ್ನು ಒಟ್ಟಿಗೆ ಹಿಡಿದು ಇಟ್ಟುಕೊಂಡಿರುವುದೇ ಕಾಂಗ್ರೆಸ್ ಪಕ್ಷ. ಕಾಂಗ್ರೆಸ್‌ನ ಬುನಾದಿಯ ಆಧಾರದಲ್ಲಿ ಸಂವಿಧಾನ ರಚನೆಯಾಗಿದೆ. ಜವಾಹರ್‌ಲಾಲ್ ನೆಹರು ಕ್ವಿಟ್ ಇಂಡಿಯಾ ಕರೆಯನ್ನು ನೀಡಿದರು. ಮಹಾತ್ಮಗಾಂಧೀಜಿ ಮಾಡು ಇಲ್ಲವೆ ಮಡಿ(ಡು ಆರ್ ಡೈ) ಕರೆ ನೀಡಿದರು. ಈ ಘೋಷಣೆಗಳೇ ಸ್ವಾತಂತ್ರ ಹೋರಾಟಕ್ಕೆ ಪ್ರೇರಣೆಯಾಯಿತು ಎಂದು ಅವರು ಹೇಳಿದರು.
ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಮುಸ್ಲಿಂ ಲೀಗ್, ಹಿಂದೂ ಮಹಾಸಭಾ ಸಭಾ, ಆರೆಸೆಸ್ಸ್ ಪಾಲ್ಗೊಂಡಿರಲಿಲ್ಲ. ದೇಶ ಪ್ರೇಮದ ಬಗ್ಗೆ ಇಂದು ಭಾಷಣ ಮಾಡುವ ಇವರು, ಅಂದು ಬ್ರಿಟೀಷರ ಜೊತೆ ಕೈ ಜೋಡಿಸಿದ್ದರು. ಯಾರು ದೇಶಪ್ರೇಮಿಗಳು, ಯಾರು ದೇಶದ್ರೋಹಿಗಳು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಬಿಹಾರದ ಚುನಾವಣೆಯಲ್ಲಿ ಬಿಜೆಪಿ ಸೋತರೆ ಪಾಕಿಸ್ತಾನದಲ್ಲಿ ಪಟಾಕಿ ಹೊಡೆಯುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿಕೆ ನೀಡುತ್ತಾರೆ. ನಿರ್ದಿಷ್ಟವಾದ ಭೋಜನ ಸ್ವೀಕರಿಸಿದರೆ ಕೊಲೆ ಮಾಡುತ್ತಾರೆ. ಸಮಾಜದಲ್ಲಿ ಒಡಕು ಮೂಡಿಸುವ, ದ್ವೇಷವನ್ನು ಹೆಚ್ಚಿಸುವ ಕೆಲಸ ನಡೆಯುತ್ತಿದೆ ಎಂದು ಪರೋಕ್ಷವಾಗಿ ಬಿಜೆಪಿ ಹಾಗೂ ಸಂಘಪರಿವಾರದ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.
ಧರ್ಮದ ಆಧಾರದಲ್ಲಿ ರಚನೆಯಾದ ಪಾಕಿಸ್ತಾನವು ನಂತರ ಎರಡು ಭಾಗಗಳಾಗಿ ವಿಭಜನೆಯಾಯಿತು. ಆದರೆ, ನಮ್ಮ ದೇಶವು ಜಾತ್ಯತೀತ ಸಿದ್ಧಾಂತದ ಆಧಾರದಲ್ಲಿ ರಚನೆಯಾಯಿತು. ಆದುದರಿಂದಲೇ ನಮ್ಮ ದೇಶವು ಇಂದಿಗೂ ಹಲವಾರು ಸವಾಲುಗಳನ್ನು ಎದುರಿಸಿಯೂ ಒಗ್ಗಟ್ಟಾಗಿಯೇ ಇದೆ. ಮಹಾತ್ಮಗಾಂಧಿ ನಾಯಕತ್ವ ಹಾಗೂ ಕಾಂಗ್ರೆಸ್‌ನ ಹೋರಾಟ ಇರದೆ ಇದ್ದಿದ್ದರೆ ಇಂದು ಒಂದೊಂದು ರಾಜ್ಯವು ಪ್ರತ್ಯೇಕ ದೇಶಗಳಾಗಿ ಬದಲಾಗುತ್ತಿದ್ದವು ಎಂದು ಅವರು ಹೇಳಿದರು.
ಬಿಜೆಪಿಯವರು ಹೋದಲ್ಲಿ, ಬಂದಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮಾಡುವುದಾಗಿ ಹೇಳುತ್ತಿರುತ್ತಾರೆ. ಆದರೆ, ಬಿಜೆಪಿ ಮುಕ್ತ ಭಾರತ ಮಾಡುವುದಾಗಿ ಕಾಂಗ್ರೆಸ್ ಎಂದಿಗೂ ಹೇಳುವುದಿಲ್ಲ. ದೇಶದಲ್ಲಿ ಒಂದೇ ಪಕ್ಷ ಇರಬೇಕು ಎನ್ನುವ ಬಿಜೆಪಿಯವರ ಮನಸ್ಥಿತಿ ಒಪ್ಪುವಂತದ್ದೆ, ಇವರದ್ದು ಮೂಲಭೂತವಾದಿಗಳ ಸಿದ್ಧಾಂತ. ದೇಶದಲ್ಲಿ ಸರ್ವಾಧಿಕಾರಿ ಆಡಳಿತ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದಿನೇಶ್ ಗುಂಡೂರಾವ್ ಕಿಡಿಗಾರಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಕ್ವಿಟ್ ಇಂಡಿಯಾ ಚಳವಳಿ ಮಾದರಿಯಲ್ಲಿ ಬಿಜೆಪಿಯವರೇ ಅಧಿಕಾರಿ ಬಿಟ್ಟು ತೊಲಗಿ ಎಂಬ ಕರೆಯೊಂದಿಗೆ ಹೋರಾಟ ನಡೆಸಬೇಕಿದೆ ಎಂದರು.
ದೇಶದ ಸ್ವಾತಂತ್ರಕ್ಕೆ ಕಾಂಗ್ರೆಸ್ ಕೊಡುಗೆ ಅಪಾರ. ನಮ್ಮ ನಾಯಕರಾದ ಇಂದಿರಾಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿ ತಮ್ಮ ಬಲಿದಾನ ನೀಡಿದ್ದಾರೆ. ದೇಶದ ಐಕ್ಯತೆ, ಸಮಗ್ರತೆಗಾಗಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸ್ವಾತಂತ್ರ ಹೋರಾಟಗಾರ ಎಸ್.ವಿ.ಮಂಜುನಾಥ್‌ರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್, ಮೇಯರ್ ಸಂಪತ್ ರಾಜ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.







