ಧರ್ಮಾಧಾರಿತ ರಾಜಕೀಯ ಪಕ್ಷಗಳನ್ನು ನಿಷೇಧಿಸಿ: ಎಚ್.ಎಸ್.ದೊರೆಸ್ವಾಮಿ

ಬೆಂಗಳೂರು, ಆ.9: ಧಾರ್ಮಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಬರುವ ಎಲ್ಲ ರಾಜಕೀಯ ಪಕ್ಷಗಳನ್ನು ನಿಷೇಧ ಮಾಡಬೇಕು. ಆ ಮೂಲಕ ಸಮಾಜದ ಸ್ವಾಸ್ಥವನ್ನು ಕಾಪಾಡಬೇಕು ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅಭಿಪ್ರಾಯಿಸಿದ್ದಾರೆ.
ಗುರುವಾರ ನಗರದ ಶಾಸಕರ ಭವನದಲ್ಲಿ ಆಗಸ್ಟ್ ಕ್ರಾಂತಿ ಟ್ರಸ್ಟ್ ವತಿಯಿಂದ ಕ್ವಿಟ್ ಇಂಡಿಯಾ ಚಳವಳಿ ನೆನಪಿನಲ್ಲಿ ಆಯೋಜಿಸಿದ್ದ ‘ಕವಲು ದಾರಿಯಲ್ಲಿ ಪ್ರಜಾಪ್ರಭುತ್ವ’ ಕುರಿತ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಧರ್ಮ, ಜಾತಿಯ ಹೊರತಾದ ರಾಜಕೀಯ ಪಕ್ಷಗಳು ಹುಟ್ಟಿಕೊಳ್ಳಬೇಕು ಎಂದು ಹೇಳಿದರು.
ಯಾವುದೇ ಪಕ್ಷವಾಗಲಿ ಹಿಂದು, ಮುಸ್ಲಿಂ, ಕ್ರೈಸ್ತ ಎಂದು ರಾಜಕೀಯ ಮಾಡುವವರು ಅಧಿಕಾರ ನಡೆಸಲು ಅರ್ಹರಲ್ಲ. ಪಕ್ಷಗಳು ಧರ್ಮ ಆಧಾರಿತ ವ್ಯಕ್ತಿಗಳನ್ನು ಹುಟ್ಟಿ ಹಾಕಬಾರದು. ಧರ್ಮದಾರಿತ ವ್ಯಕ್ತಿಗಳನ್ನು ಹುಟ್ಟಿಹಾಕುವ ಪಕ್ಷಗಳು ಪ್ರಜಾಪ್ರಭುತ್ವದಲ್ಲಿ ಉಳಿಯಲು ಅನರ್ಹವಾದುವು. ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿದ್ದೇವೆ ಎಂಬ ಕಾರಣಕ್ಕೆ ಆ ಪಕ್ಷಗಳು ಇನ್ನೂ ಇಲ್ಲಿವೆ. ಅಲ್ಲದೆ, ಚುನಾವಣಾ ಆಯೋಗ ಒಪ್ಪಿದೆ ಎಂಬ ಕಾರಣಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿವೆ. ಬಹುಮತ ಪಡೆಯುತ್ತಿವೆ. ಅಧಿಕಾರದಲ್ಲಿರುವುದರಿಂದ ಅನಿವಾರ್ಯವಾಗಿ ನಾವು ಅದನ್ನು ಒಪ್ಪಬೇಕಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದೇಶದಲ್ಲಿ ಮನುಷ್ಯ, ಮನುಷ್ಯರನ್ನೇ ಪ್ರಾಣಿಗಳಿಗಿಂತ ಕ್ರೂರವಾಗಿ ಕೊಲ್ಲುತ್ತಿದ್ದಾರೆ. ಇದಕ್ಕೆ ಇತ್ತೀಚಿಗೆ ನಡೆದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ, ಗೋ ಸಾಗಾಣಿಕೆ ಹೆಸರಿನಲ್ಲಿ ಅಮಾಯಕರ ಹತ್ಯೆಗಳು ಉದಾಹರಣೆಯಾಗಿವೆ ಎಂದ ದೊರೆಸ್ವಾಮಿ, ಕಾನೂನನ್ನು ಯಾರೂ ಕೈಗೆತ್ತಿಕೊಳ್ಳಬಾರದು. ಅಂತಹ ಅಧಿಕಾರ ಯಾರಿಗೂ ಇಲ್ಲ ಎಂದರು.
ಹಲವಾರು ಜಾತಿ, ಧರ್ಮಗಳೊಂದಿಗೆ ವೈವಿದ್ಯತೆಯ ಏಕತೆಯಲ್ಲಿ ಜೀವಿಸುತ್ತಿರುವ ಯಾರೂ ಹಿಂಸೆಯನ್ನು ಒಪ್ಪಬಾರದು. ಒಂದು ವೇಳೆ ಹಿಂಸೆಯನ್ನು ಮುಂದುವರಿಸಿಕೊಂಡು ಹೋದರೆ ಯಾವುದೇ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಕಾನೂನು ವ್ಯವಸ್ಥೆ ಹಾಳಾಗುತ್ತದೆ. ಒಂದು ಸಮಸ್ಯೆ ಪರಿಹಾರಕ್ಕಾಗಿ, ಮತ್ತೊಂದು ಸಮಸ್ಯೆಯನ್ನು ಸೃಷ್ಟಿ ಮಾಡಿಕೊಂಡಂತಾಗುತ್ತದೆ ಎಂದು ಸಲಹೆ ನೀಡಿದರು.
ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ಮೋದಿ ಕರ್ನಾಟಕವನ್ನು ನಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತೇವೆ ಎಂದು ಕನಸು ಕಂಡರು. ನಾವೆಲ್ಲಾ ಹಿಂದೂಗಳೇ ಆಗಿದ್ದರೂ ನಾವು ಹಿಂದೂಗಳಲ್ಲ ಎನ್ನುವ ರೀತಿಯಲ್ಲಿ ಮಾತನಾಡುತ್ತಿದ್ದೇವೆ. ಅದರ ಪ್ರಯೋಜನವನ್ನು ಅವರು ಪಡೆಯುತ್ತಿದ್ದಾರೆ. ನಾವು ಶೇ.90 ರಷ್ಟು ನಿಜವಾದ ಹಿಂದೂಗಳು. ನೀವು ಕೇವಲ ಶೇ.10 ರಷ್ಟು ಮಾತ್ರ ಹಿಂದೂಗಳು ಎಂದು ದೊರೆಸ್ವಾಮಿ ಟೀಕಿಸಿದರು.
ಟ್ರಸ್ಟ್ ಸಮನ್ವಯಕಾರ ಆಲಿ ಬಾಬಾ ಮಾತನಾಡಿ, 70 ವರ್ಷಗಳ ಹಿಂದೆ ನಮಗೆ ಸಿಕ್ಕಿದ ಸ್ವಾತಂತ್ರ ಕೇವಲ ಭಾಷಣಗಳಿಗೆ ಸೀಮಿತವಾಗಿದೆ. ಇಂದಿಗೂ ದೌರ್ಜನ್ಯ, ದಬ್ಬಾಳಿಕೆ ಮುಂದುವರೆದಿದೆ. ಬಡವ-ಶ್ರೀಮಂತ, ಉಳ್ಳವರು-ಇಲ್ಲದವರು ಎಂಬ ತಾರತಮ್ಯವಿದೆ. ಬಿಳಿ ಜನರು ಬಿಟ್ಟು ಹೋದ ಸ್ಥಳಕ್ಕೆ ಕಪ್ಪು ಬಣ್ಣದ ನಮ್ಮವರೇ ಬಂದು ಕೂತು ನಮ್ಮನ್ನು ಆಳುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಿ.ಆರ್.ಪಾಟೀಲ್, ಸಾಹಿತಿ ಮಂಗ್ಳೂರು ವಿಜಯ, ಅಪ್ಪ ಸಾಹೇಬ್ ಹೆರನಾಳ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







