ದಾವಣಗೆರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಸಚಿವ ಎಸ್.ಆರ್. ಶ್ರೀನಿವಾಸ್

ದಾವಣಗೆರೆ,ಆ.09: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಣ್ಣ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಶ್ರೀನಿವಾಸ್ ಹೇಳಿದರು.
ಗುರುವಾರ ಜಿಪಂ ಸಭಾಂಗಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಿದ್ದತಾ ಸಭೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯೋತ್ಸವ ದಿನ ಅರ್ಥಪೂರ್ಣವಾಗಿ ನಡೆಯಲು ವಿವಿಧ ಇಲಾಖಾ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರ ಸಹಕಾರ ಅಗತ್ಯ. ಉಳಿದೆಲ್ಲ ಹಬ್ಬಗಳಿಗಿಂತ ರಾಷ್ಟ್ರೀಯ ಹಬ್ಬವಾದ ಸ್ವಾತಂತ್ರ್ಯೋತ್ಸವವನ್ನು ಸಡಗರ, ಸಂಭ್ರಮ ಸಂತೋಷದಿಂದ ಆಚರಿಸಲು ಸಕಲ ಸಿದ್ದತೆ ಮಾಡಿಕೊಳ್ಳುವಂತೆ ಸೂಚಿಸಿದರು.
ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನೇಮಕ ಮಾಡಿರುವುದು ಸಂತಸ ತಂದಿದೆ. ಎಲ್ಲರ ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸಿ ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಕಾರ್ಯಕ್ರಮ ಹಾಕಿಕೊಂಡಿದ್ದು, ಅವುಗಳ ಜಾರಿಗೆ ತಮ್ಮೆಲ್ಲರ ಸಹಕಾರ, ಸಲಹೆ-ಸೂಚನೆಗಳ ಅವಶ್ಯಕತೆ ಇದೆ ಎಂದರು.
ಜಿಲ್ಲಾಡಳಿತ ಹಾಗೂ ಇಲಾಖೆಗಳು ಉತ್ತಮವಾಗಿ ಕಾಲಮಿತಿಯೊಳಗೆ ಕರ್ತವ್ಯ ನಿರ್ವಹಿಸಬೇಕು. ಸಾರ್ವಜನಿಕರು ಯಾವುದೇ ಕೆಲಸಕ್ಕೆ ಅಲೆದಾಡುವುದು ಬೇಡ. ಸರ್ಕಾರದ ಯೋಜನೆ ಜನರಿಗೆ ತಲುಪಿಸುವುದು ನಮ್ಮ ಬದ್ದತೆಯಾಗಿರಬೇಕು. ಸರ್ಕಾರ ಮಟ್ಟದಲ್ಲಿ ಯಾವುದೇ ಕೆಲಸ ಆಗಬೇಕಿದ್ದರೆ ಮುಕ್ತವಾಗಿ ಚರ್ಚಿಸಿ ಅಥವಾ ಜಿಲ್ಲಾಧಿಕಾರಿಗಳ ಬಳಿ ಹೇಳಿ ಕೂಡಲೇ ಆ ಬಗ್ಗೆ ಪ್ರಯತ್ನಿಸಲಾಗುವುದು.
ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಭದ್ರಾ ಅಚ್ಚುಕಟ್ಟು ಭಾಗದ ಕೊನೆ ಭಾಗದಲ್ಲಿ ಈವರೆಗೂ ನೀರು ದೊರೆಕಿಲ್ಲ. ಡ್ಯಾಂ ತುಂಬುದಕ್ಕೂ ಮುಂಚೆಯೇ ನಾಲೆ ದುರಸ್ತಿ ಮಾಡಿ ಕೊನೆ ಭಾಗದವರಿಗೆ ನೀರು ತಲುಪುವಂತೆ ನೋಡಿಕೊಳ್ಳಬೇಕಾಗಿರುವುದು ಅಧಿಕಾರಿಗಳ ಜವಾಬ್ದಾರಿ ಎಂದರು.
ಇದಕ್ಕೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಪ್ರತಿಕ್ರಿಯಿಸಿ, ಅನಧಿಕೃತ ಪಂಪ್‍ಸೆಟ್‍ಗಳ ಹಾವಳಿ ಜಾಸ್ತಿ ಇದೆ. ಕೆಲವರು 100ರಿಂದ 200 ಹೆಚ್‍ಪಿ ಪಂಪ್‍ಸೆಟ್ ಹಾಕಿರುತ್ತಾರೆ. ಕಳೆದ ವರ್ಷ ಸುಮಾರು 2000 ಅನಧಿಕೃತ ಪಂಪ್‍ಸೆಟ್ ತೆರವುಗೊಳಿಸಲಾಗಿದೆ. ಮಲೆಬೆನ್ನೂರು ಭಾಗದಲ್ಲಿ ರೊಟೇಷನ್ ಪದ್ದತಿ ಇರುವುದರಿಂದ ಕೊನೆ ಭಾಗಗಳಿಗೆ ನೀರು ತಲುಪಲು ವಿಳಂಬವಾಗುತ್ತಿದೆ ಎಂದರು.
ಶಾಸಕ ರವೀಂದ್ರನಾಥ್ ಮಾತನಾಡಿ, ರು. 25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಗಾಜಿನಮನೆ ಕಾಮಗಾರಿ ಪೂರ್ಣಗೊಂಡಿಲ್ಲ. ಹೆಚ್ಚುವರಿಯಾಗಿ 5.25 ಕೋಟಿ ಅನುದಾನ ಬೇಕೆಂದು ಕೇಳುತ್ತಿದ್ದಾರೆ. ತಕ್ಷಣ ಸರ್ಕಾರದಿಂದ ಮಂಜೂರು ಮಾಡಿಸಿ ಗಾಜಿನ ಮನೆ ಉಪಯೋಗವಾಗುವಂತೆ ಮಾಡಿಕೊಡಬೇಕೆಂದು ಸಚಿವರಿಗೆ ಮನವಿ ಮಾಡಿದ ಅವರು, ನದಿ ಪಾತ್ರದಲ್ಲಿದ್ದರೂ ನಮಗೆ ಮರಳು ದೊರೆಯುತ್ತಿಲ್ಲ. ಆಶ್ರಯ ಮನೆ ನಿರ್ಮಿಸಲು ಬಡವರಿಗೆ ಮರಳು ಸಿಗುತ್ತಿಲ್ಲ. ಎಲ್ಲ ಹೊರ ಜಿಲ್ಲೆಗಳಿಗೆ ಹೋಗುತ್ತಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಹೊನ್ನಾಳಿ ಎರಡು ಮರಳಿನ ಬ್ಲಾಕ್ ಸರ್ಕಾರಿ ಕಾಮಗಾರಿಗಳಿಗೆ ಮರಳು ಉಪಯೋಗಿಸಿಕೊಳ್ಳಲು ಮೀಸಲಿಟ್ಟು, ಮರಳು ಸಾಗಿಸುವ ಲಾರಿಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಎಂ-ಸ್ಯಾಂಡ್ ಸಾಕಷ್ಟು ಪ್ರಮಾಣದಲ್ಲಿದ್ದರೂ ಜನರು ಆಸಕ್ತಿ ತೋರುತ್ತಿಲ್ಲ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಬೇಕೆಂದು ತಿಳಿಸಿದರು.
ಸಚಿವರು ಮಾತನಾಡಿ, ಕೈಗಾರಿಕಾ ಅಭಿವೃದ್ಧಿ ಮಂಡಳಿ ಸಣ್ಣ ಕೈಗಾರಿಕೆಗಳಿಗೆ ನೀಡುವ ನಿವೇಶನ ಅತಿ ದುಬಾರಿಯಾಗಿವೆ. ಒಂದು ಎಕರೆಗೆ ಒಂದರಿಂದ ಎರಡು ಕೋಟಿ ವರೆಗೆ ಬೆಲೆ ನಿಗದಿ ಮಾಡಿರುತ್ತೀರಿ. ಆದರೆ, ಅದರ ಪಕ್ಕದ ಜಮೀನುಗಳು ಎಕರೆಗೆ ರೂ. 10 ಲಕ್ಷ ಇರುತ್ತವೆ. ಹೀಗಿದ್ದಾಗ ಸಣ್ಣ ಕೈಗಾರಿಕೆ ಆರಂಭಿಸಲು ಉದ್ಯಮಿಗಳು ಹೇಗೆ ಮುಂದೆ ಬರುತ್ತಾರೆ? ಈ ಬಗ್ಗೆ ಎಲ್ಲಾ ಜಿಲ್ಲೆಗಳಿಂದ ಮಾಹಿತಿ ಕಲೆ ಹಾಕುತ್ತಿದ್ದೇನೆ. ಸಮಗ್ರವಾಗಿ ಪರಿಶೀಲಿಸಿ ಸಣ್ಣ ಕೈಗಾರಿಕೆ ಸ್ಥಾಪಿಸಲು ಹೆಚ್ಚು ಪ್ರೋತ್ಸಾಹ ನೀಡಲು ಕಾರ್ಯಕ್ರಮ ರೂಪಿಸಲಾಗುವುದೆಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದ್ಗಲ್ ಮಾಹಿತಿ ನೀಡಿ, ಶೇ. 76 ರಷ್ಟು ಬಿತ್ತನೆ ಇಲ್ಲಿಯವರೆಗೆ ಆಗಿದೆ. 3.24 ಲಕ್ಷ ಎಕರೆ ಪ್ರದೇಶದಲ್ಲಿ ವಿವಿಧ ಬೆಳೆಗಳಾದ ಮೆಕ್ಕೆಜೋಳ, ಭತ್ತ ಸೇರಿದಂತೆ ಹಲವು ಬೆಳೆಗಳ ನಾಟಿ ಕಾರ್ಯ ಮುಗಿದಿದೆ. ಜಿಲ್ಲೆಯ 15 ಹೋಬಳಿಗಳಲ್ಲಿ ಮಳೆ ಕೊರತೆ ಉಂಟಾಗಿದೆ ಎಂದರು.
ಸಭೆಯಲ್ಲಿ ಜಿಪಂ ಅಧ್ಯಕ್ಷೆ ಸವಿತಾ ಕಲ್ಲೇಶಪ್ಪ, ಶಾಸಕ ಪ್ರೊ.ಲಿಂಗಣ್ಣ, ಜಿಪಂ ಸಿಇಓ ಎಸ್. ಅಶ್ವತಿ, ಎಸ್ಪಿ ಆರ್. ಚೇತನ್ ಮತ್ತಿತರರಿದ್ದರು.







