ಮೀಸಲಾತಿಗೆ ಆಗ್ರಹಿಸಿ ಮರಾಠರ ಪ್ರತಿಭಟನೆ: ಮಹಾರಾಷ್ಟ್ರ ಬಂದ್; ಜನಜೀವನ ಅಸ್ತವ್ಯಸ್ತ

ಮುಂಬೈ, ಆ.9: ಮಹಾರಾಷ್ಟ್ರದಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಗೆ ಒತ್ತಾಯಿಸುತ್ತಿರುವ ಮರಾಠ ಸಮುದಾಯದ ಸಂಘಟನೆ ‘ಸಕಲ ಮರಾಠ ಸಮಾಜ’ ಕರೆ ನೀಡಿರುವ (ನವಿ ಮುಂಬೈ ಹೊರತುಪಡಿಸಿ) ರಾಜ್ಯವ್ಯಾಪಿ ಬಂದ್ ಪ್ರತಿಭಟನೆಯಿಂದ ಗುರುವಾರ ಬಸ್ಸು ಮತ್ತಿತರ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾಥೂರ್, ಜಲ್ನಾ, ಸೋಲಾಪುರ ಮತ್ತು ಬುಲ್ಧಾನ ಜಿಲ್ಲೆಗಳಲ್ಲಿ ಪ್ರತಿಭಟನಾನಿರತರು ವಾಹನ ಸಂಚಾರಕ್ಕೆ ತಡೆಯೊಡ್ಡಿದರು . ನವಿ ಮುಂಬೈಯನ್ನು ಬಂದ್‌ನಿಂದ ಹೊರಗಿರಿಸಿದ್ದರೂ ಆ ಉಪನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಕಾರ್ಯಾಚರಿಸಲಿಲ್ಲ. ಅಗತ್ಯ ಸೇವೆಗಳನ್ನು ಬಂದ್‌ನ ವ್ಯಾಪ್ತಿಯಿಂದ ಹೊರಗಿರಿಸಿದ್ದರೂ ರಾಜ್ಯದ ಕೆಲವು ಭಾಗಗಳಲ್ಲಿ ತರಕಾರಿ ಸರಬರಾಜಿಗೆ ಅಡ್ಡಿಯಾಗಿತ್ತು. ಬಂದ್‌ನಲ್ಲಿ ಪಾಲ್ಗೊಳ್ಳುವಂತೆ ತಮ್ಮನ್ನು ಯಾರೂ ಬಲವಂತಗೊಳಿಸಿಲ್ಲ. ಆದರೆ ಬಂದ್‌ನ ಉದ್ದೇಶವನ್ನು ಗಮನಿಸಿ ತಾವೆಲ್ಲಾ ಸ್ವಯಂಪ್ರೇರಿತರಾಗಿ ಅಂಗಡಿ ಮುಚ್ಚಿ ಭಾಗವಹಿಸಿದ್ದೇವೆ ಎಂದು ಮುಂಬೈಯ ದಾದರ್ ಪ್ರದೇಶದ ವ್ಯಾಪಾರಿಗಳು ತಿಳಿಸಿದ್ದಾರೆ.
ಸತಾರದಲ್ಲಿ ಸರಕಾರಿ ಬಸ್ಸುಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಈ ನಗರದಲ್ಲಿ ಎಲ್ಲಾ ತರಕಾರಿ ಮಾರುಕಟ್ಟೆ ಹಾಗೂ ಪೆಟ್ರೋಲ್ ಬಂಕ್‌ಗಳೂ ಬಾಗಿಲು ಮುಚ್ಚಿದ್ದವು.
ರಾಜ್ಯದ ಹಲವೆಡೆ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿತ್ತು. ಪುಣೆ ಜಿಲ್ಲೆಯಲ್ಲಿ ಪ್ರತಿಭಟನಾಕಾರರು ಬೈಕ್ ರ್ಯಾಲಿ ನಡೆಸಿದರು. ಜಿಲ್ಲೆಯ ಶಿರೂರ್, ಖೇಡ್, ಬಾರಮಟ್ಟಿ, ಜುನ್ನಾರ್, ಮಾವಲ್, ದೌಂಡ್ ಹಾಗೂ ಭೋರ್ ತಾಲೂಕುಗಳಲ್ಲಿ ಮುಂಜಾಗರೂಕತಾ ಕ್ರಮವಾಗಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಲಾಥೂರ್‌ನಲ್ಲಿ ಬುಧವಾರ ಮಧ್ಯರಾತ್ರಿಯಿಂದಲೇ ರಸ್ತೆಗಳಲ್ಲಿ ತಡೆಗಳನ್ನು ನಿರ್ಮಿಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಲಾಗಿದೆ.
ನಾಶಿಕ್, ಬುಲ್ಧಾನ ಮತ್ತು ಸೋಲಾಪುರದಲ್ಲೂ ರಸ್ತೆ ತಡೆ ನಡೆಸಲಾಗಿದೆ. ಓಸ್ಮನಾಬಾದ್ ಮತ್ತು ಬುಲ್ಧಾನ ಜಿಲ್ಲೆಗಳಲ್ಲಿ ಸರಕಾರಿ ಬಸ್ಸುಗಳ ಸಂಚಾರವನ್ನು ಆಂಶಿಕವಾಗಿ ರದ್ದುಪಡಿಸಲಾಗಿತ್ತು. ದಕ್ಷಿಣ ಕೇಂದ್ರ ರೈಲ್ವೇಯ ನಾಂದೇಡ್ ವಿಭಾಗದಲ್ಲಿ ಮೂರು ಪ್ರಯಾಣಿಕ ರೈಲುಗಳ ಸಂಚಾರವನ್ನು ರದ್ದುಗೊಳಿಸಿದ ಕಾರಣ ಜನರು ತೊಂದರೆಗೊಳಗಾದರು. ಲೋನಾವಲ ರೈಲು ನಿಲ್ದಾಣದಲ್ಲಿ ಸುಮಾರು 200ರಷ್ಟು ಪ್ರತಿಭಟನಾಕಾರರು ರೈಲು ರೋಕೊ ನಡೆಸಿದರು. ಹಳೆಯ ಪುಣೆ-ಮುಂಬೈ ಹೆದ್ದಾರಿಯ ವಡಗಾನ್ ಮವಾಲ್‌ನಲ್ಲಿ ಪ್ರತಿಭಟನಾಕಾರರು ರಸ್ತೆ ನಡೆ ನಡೆಸಿ ವಾಹನ ಸಂಚಾರಕ್ಕೆ ತಡೆಯೊಡ್ಡಿದರು. ಪಿಂಪ್ರಿಯ ಪುಣೆ-ಮುಂಬೈ ಹೆದ್ದಾರಿಯ ಅಂಬೇಡ್ಕರ್ ಚೌಕದಲ್ಲಿ ಪ್ರತಿಭಟನಾಕಾರರು ಧರಣಿ ಮುಷ್ಕರ , ಪನ್ವೇಲ್‌ನ ತಹಶೀಲ್ದಾರ್ ಕಚೇರಿಯ ಎದುರುಗಡೆ ಮರಾಠ ಕ್ರಾಂತಿ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿದರು.
ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ರಾಜ್ಯದ ಪೊಲೀಸರು ಬಿಗಿ ಭದ್ರತಾ ವ್ಯವಸ್ಥೆ ಕೈಗೊಂಡಿದ್ದರು. ಕ್ಷಿಪ್ರ ಕಾರ್ಯಪಡೆಯ ಆರು ತುಕಡಿ ಹಾಗೂ ಸಿಐಎಸ್‌ಎಫ್ ಮತ್ತು ರಾಜ್ಯ ಮೀಸಲು ಪೊಲೀಸ್ ಪಡೆಯ ತಲಾ ಒಂದು ತುಕಡಿಯನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ . ಹಲವೆಡೆ ಪೊಲೀಸರಿಗೆ ನೆರವಾಗಲು ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾಠಿ ಚಾರ್ಜ್, ಅಶ್ರುವಾಯು ಪ್ರಯೋಗ
ಪುಣೆ ನಗರದಲ್ಲಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದಾಗ ಪೊಲೀಸರು ಅಶ್ರುವಾಯು ಪ್ರಯೋಗಿಸಿ ಲಾಠಿಚಾರ್ಜ್ ನಡೆಸಿದರು ಎಂದು ವರದಿಯಾಗಿದೆ. ಚಾಂದನಿ ಚೌಕ್ ಬಳಿಯ ಕಥ್ರಾಜ್-ದೆಹು ಬೈಪಾಸ್ ರಸ್ತೆಯಲ್ಲಿ ಗುಂಪು ಸೇರಿದ 1,000ಕ್ಕೂ ಹೆಚ್ಚು ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದರಲ್ಲದೆ ಕಲ್ಲೆಸೆತಕ್ಕೆ ಮುಂದಾದಾಗ ಪೊಲೀಸರು ಅಶ್ರುವಾಯು ಮತ್ತು ಲಾಠಿಚಾರ್ಜ್ ನಡೆಸಿ ಅವರನ್ನು ಚದುರಿಸಿದರು.
ಪುಣೆ ಜಿಲ್ಲಾಧಿಕಾರಿಗಳ ಕಚೇರಿಯೆದುರು ಗುಂಪು ಸೇರಿದ ಪ್ರತಿಭಟನಾಕಾರರು ಕಚೇರಿಯ ದೀಪಕ್ಕೆ ಹಾನಿ ಎಸಗಿದರಲ್ಲದೆ ಕ್ಯಾಬಿನ್‌ನ ಗಾಜನ್ನು ಒಡೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.







