ಟೆಕ್ಕಿ ಕುಮಾರ್ ಅಜಿತಾಬ್ ನಾಪತ್ತೆ ಪ್ರಕರಣ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಬೆಂಗಳೂರು, ಆ.9: ಟೆಕ್ಕಿ ಕುಮಾರ್ ಅಜಿತಾಬ್ ನಾಪತ್ತೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ರಾಜ್ಯ ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟ್, ತೀರ್ಪು ಕಾಯ್ದಿರಿಸಿದೆ.
ಅಜಿತಾಬ್ ತಂದೆ ಅಶೋಕ್ ಕುಮಾರ್ ಸಿನ್ಹಾ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಗುರುವಾರ ಪೂರ್ಣಗೊಳಿಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಪೀಠ, ತೀರ್ಪು ಕಾಯ್ದಿರಿಸಿತು.
ವಿಚಾರಣೆ ವೇಳೆ ಸಿಐಡಿ ಪೊಲೀಸರ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪೊನ್ನಣ್ಣ ವಾದ ಮಂಡಿಸಿದರು. ಪ್ರಕರಣವನ್ನು ಸರಕಾರ ಸಹ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಸಿಐಡಿ ತನಿಖಾಧಿಕಾರಿಗಳು ಪ್ರಕರಣ ಕುರಿತು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಿದ್ದಾರೆ. ಆ ತನಿಖಾ ವರದಿಯನ್ನು ಕಾಲ ಕಾಲಕ್ಕೆ ಕೊರ್ಟ್‌ಗೆ ಸಲ್ಲಿಸಿದ್ದು, ಅದರ ವಿವರಗಳನ್ನು ಕೋರ್ಟ್ ಸಹ ಪರಿಶೀಲಿಸಿದೆ. ತನಿಖಾಧಿಕಾರಿಗಳು ಸಮರ್ಥ ತನಿಖೆ ನಡೆಸಿರುವುದರಿಂದ ಅವರ ಮೇಲೆ ಭರವಸೆಯಿಟ್ಟು ಮತ್ತಷ್ಟು ಕಾಲಾವಕಾಶ ನೀಡಿದರೆ, ತನಿಖೆಯನ್ನು ತಾರ್ಕಿಕ ಅಂತ್ಯ ಕಾಣಿಸಬಹುದು ಎಂದು ಕೋರ್ಟ್ ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ತನಿಖಾ ವರದಿಯನ್ನು ನಾವು ಗಮನಿಸಿದ್ದೇವೆ. ತನಿಖಾಧಿಕಾರಿಗಳು ಶಿಮ್ಲಾ, ಹೊಸದಿಲ್ಲಿ, ಉತ್ತರಪ್ರದೇಶಗಳಿಗೆ ತೆರಳಿ ತನಿಖೆ ನಡೆಸಿದ್ದಾರೆ ಎಂದು ತಿಳಿಸಿತು. ನಂತರ ಅರ್ಜಿ ಕುರಿತ ತೀರ್ಪು ಕಾಯ್ದಿರಿಸಿತು.
ಅಜಿತಾಬ್ 2017ರ ಡಿಸೆಂಬರ್‌ನಲ್ಲಿ ನಾಪತ್ತೆಯಾಗಿದ್ದಾನೆ. ಘಟನೆ ನಡೆದು 8 ತಿಂಗಳು ಕಳೆದಿದೆ. ಆತನ ಬಗ್ಗೆಯಾಗಲಿ ಹಾಗೂ ಆತ ಮಾರಾಟ ಮಾಡಲು ಹೋಗಿದ್ದ ಕಾರ್ ಬಗ್ಗೆಯಾಗಲಿ ಸಿಐಡಿ ಪೊಲೀಸರ ತನಿಖೆಯಲ್ಲಿ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆತನ ತಂದೆಯ ಮನವಿಯಾಗಿದೆ.