ಬಾಲಕಿಯರನ್ನು ಅಪಹರಿಸಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಮೂವರು ಮಹಿಳೆಯರ ಬಂಧನ

ದಾವಣಗೆರೆ, ಆ.9: ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ಅವರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಮೂವರು ಮಹಿಳೆಯರ ತಂಡವನ್ನು ಜಿಲ್ಲಾ ಅಪರಾಧ ತನಿಖಾ ದಳದ ಪೊಲೀಸರು ಬಂಧಿಸಿ ಓರ್ವ ಅಪ್ರಾಪ್ತೆಯನ್ನು ರಕ್ಷಿಸಿದ್ದಾರೆ.
ಈ ಸಂಬಂಧ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ದಾವಣಗೆರೆ, ಗದಗ ಸೇರಿ ವಿವಿದೆಢೆ ಬಾಲಕಿಯರನ್ನು ಅಪಹರಿಸಿ ವೇಶ್ಯಾವಾಟಿಕೆಗೆ ತಳ್ಳಿ ಹಣ ಮಾಡುತ್ತಿದ್ದ ಗೀತಾ(33), ಅನಿತಾ ಅಲಿಯಾಸ್ ಕಾವ್ಯಾ (34), ರೂಪಾ (28) ಎಂಬವರನ್ನು ಬಂಧಿಸಲಾಗಿದೆ ಎಂದರು.
ಬಸ್ ಹಾಗೂ ರೈಲು ನಿಲ್ದಾಣಗಳಲ್ಲಿ ಇರುವ ಅಮಾಯಕ ಬಾಲಕಿಯರನ್ನು ಪುಸಲಾಯಿಸಿ ಇಲ್ಲವೇ ಅಪಹರಿಸಿ ಕರೆದುಕೊಂಡು ಹೋಗುತ್ತಿದ್ದ ಈ ಮಹಿಳೆಯರು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದರು. ಹೀಗೆ ವೇಶ್ಯಾವಾಟಿಕೆಗೆ ದಂಧೆಗೆ ತಳ್ಳಲ್ಪಟ್ಟ ಅಮಾಯಕ ಅಪ್ರಾಪ್ತ ಬಾಲಕಿಯೊಬ್ಬಳು ಎಚ್‌ಐವಿ ರೋಗಕ್ಕೆ ತುತ್ತಾಗಿದ್ದಾಳೆ ಎಂದು ತಿಳಿಸಿದರು.
ಬಂಧಿತ ಮೂವರು ಮಹಿಳೆಯರು ದಾವಣಗೆರೆ ಜಿಲ್ಲೆಯವರಾಗಿದ್ದು, ಜಾಲದಲ್ಲಿ ಇನ್ನೂ ಹಲವರು ಶಾಮೀಲಾಗಿರುವ ಶಂಕೆ ಇದೆ. ಈ ಪ್ರಕರಣದ ಪ್ರಮುಖ ಆರೋಪಿ ಶಿವು ಸೇರಿ ಇಬ್ಬರು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ. ಈ ತಂಡ ಈ ಹಿಂದೆಯೂ ಅನೇಕ ಬಾಲಕಿಯರನ್ನು ಅಪಹರಿಸಿ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿ ಜಾಮೀನು ಪಡೆದು ಹೊರ ಬಂದು ಮತ್ತೆ ಬಂದು ಅದೇ ದಂಧೆ ಆರಂಭಿಸಿದ್ದಾರೆ ಎಂದು ಮಾಹಿತಿ ನಿಡಿದರು.







