ಬಿಎಸ್ಸೆನ್ನೆಲ್‌ನಲ್ಲಿ ಹಣಕಾಸಿನ ಕೊರತೆಯಿಂದಾಗಿ ಉತ್ತಮ ಸೇವೆ ನೀಡಲಾಗುತ್ತಿಲ್ಲ: ಜೆ.ಎಲ್. ಗೌತಮ್

ದಾವಣಗೆರೆ, ಆ.9: ಬಿಎಸ್ಸೆನ್ನೆಲ್‌ನಲ್ಲಿ ಹಣಕಾಸಿನ ಕೊರತೆಯಿಂದಾಗಿ ಗ್ರಾಹಕರಿಗೆ ಉತ್ತಮ ಸೇವೆ ನೀಡಲಾಗುತ್ತಿಲ್ಲ ಎಂದು ಬಿಎಸ್ಸೆನ್ನೆಲ್ ಚಿತ್ರದುರ್ಗ ಟೆಲಿಕಾಂನ ಜಿಲ್ಲಾ ಪ್ರಧಾನ ವ್ಯವಸ್ಥಾಪಕ ಜೆ.ಎಲ್. ಗೌತಮ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಗುರುವಾರ ನಗರದ ರೋಟರಿ ಬಾಲಭವನದಲ್ಲಿ ನ್ಯಾಷನಲ್ ಯೂನಿಯನ್ ಆಫ್ ಬಿಎಸ್ಸೆನ್ನೆಲ್ ವರ್ಕರ್ಸ್ ವತಿಯಿಂದ ‘ಸೇವೆ ಗುಣಮಟ್ಟ’ ಕುರಿತು ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜನರು ಬೇರೆ ಕಂಪೆನಿಯ ಸಿಮ್ ಉಪಯೋಗಿಸುವ ಜೊತೆಗೆ ಬಿಎಸ್ಸೆನ್ನೆಲ್ ಸಿಮ್ ಕೂಡ ಬಳಸಲು ಇಚ್ಛಿಸುತ್ತಾರೆ. ಆದರೆ, ಹಣಕಾಸು ಕೊರತೆಯಿಂದಾಗಿ ಗ್ರಾಹಕರಿಗೆ ನಿರೀಕ್ಷಿತ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ಬಿಎಸ್ಸೆನ್ನೆಲ್ ಇನ್ನೂ 3ಜಿಯಲ್ಲೇ ಸೇವೆ ನೀಡುತ್ತಿದೆ. ಆದರೆ, ರಿಲಾಯನ್ಸ್ ಜಿಯೋ 4ಜಿ ಸೇವೆ ನೀಡುತ್ತಿದೆ. ಆದರೆ, ಬಿಎಸ್ಸೆನ್ನೆಲ್ 4ಜಿ ಸೇವೆ, ವೈಪೈ ಹಾಟ್ ಸ್ಪಾಟ್ ಸೇವೆ ಒದಗಿಸಲು ಅನೇಕ ತೊಂದರೆಗಳಿವೆ. ವೈಪೈ ಹಾಟ್ ಸ್ಪಾಟ್ ಸೇವೆಗೆ ಬೇರೆ ಕಂಪೆನಿಯನ್ನು ಅವಲಂಬಿಸಿರುವುದರಿಂದ ಸೇವೆಯಲ್ಲಿ ಅನೇಕ ನ್ಯೂನ್ಯತೆ ಉಂಟಾಗಿದೆ. ಈ ಎಲ್ಲ ಸಮಸ್ಯೆ ಸರಿಪಡಿಸಿಕೊಳ್ಳಲು ಅಧಿಕಾರಿಗಳು, ಸಿಬ್ಬಂದಿ ವರ್ಗ ಒಂದು ತಂಡವಾಗಿ ಕೆಲಸ ಮಾಡಬೇಕಿದೆ ಎಂದು ಮನವಿ ಮಾಡಿದರು.
ಎಫ್‌ಎನ್‌ಟಿಒ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹೊಸ ದಿಲ್ಲಿಯ ಕೆ. ಜಯಪ್ರಕಾಶ ಮಾತನಾಡಿ, ಖಾಸಗಿ ಟೆಲಿಕಾಂ ಕಂಪೆನಿಗಳು ಲಾಭದ ದೃಷ್ಟಿಯಿಂದ ಕೆಲಸ ಮಾಡುತ್ತಿವೆ. ಆದರೆ, ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಕಂಪೆನಿಯು ನಷ್ಟದಲ್ಲೂ ಗ್ರಾಮೀಣ ಪ್ರದೇಶದ ಜನರಿಗೆ ಕಡಿಮೆ ದರದಲ್ಲಿ ಸೇವೆ ಒದಗಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಖಾಸಗಿ ಕಂಪೆನಿಗಳು ಬರುತ್ತವೆ, ಹೋಗುತ್ತವೆ. ಆದರೆ, ಬಿಎಸ್ಸೆನ್ನೆಲ್ ಎಂದೆಂದಿಗೂ ಇರುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದ ಅವರು, ಅಧಿಕಾರಿ, ನೌಕರರಲ್ಲಿ ಪರಸ್ಪರ ಆತ್ಮವಿಶ್ವಾಸ, ನಂಬಿಕೆ ಇರಬೇಕು. ಜನರೊಂದಿಗೆ ಸಂಪರ್ಕದಲ್ಲಿರುವ ಕೆಳ ಹಂತದ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೀತಿ ರೂಪಿಸುವ ಕೆಲಸವಾಗಬೇಕು. ಆಗ ಮಾತ್ರ ಗ್ರಾಹಕರಿಗೆ ಗುಣಮಟ್ಟದ ಸೇವೆ ಒದಗಿಸಲು ಸಾಧ್ಯ. ಗ್ರಾಹಕರೊಂದಿಗೆ ಸಭ್ಯವಾಗಿ ವರ್ತಿಸಬೇಕು. ಬಿಎಸ್ಸೆನ್ನೆಲ್ ಸೇವೆಯ ಉಪಯುಕ್ತತೆಯನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವಾಗಬೇಕು ಎಂದು ಅಧಿಕಾರಿ ಸಿಬ್ಬಂದಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ನ್ಯಾಷನಲ್ ಯೂನಿಯನ್ ಆಫ್ ಬಿಎಸ್ಸೆನ್ನೆಲ್ ವರ್ಕರ್ಸ್ ನ ಜಿಲ್ಲಾಧ್ಯಕ್ಷ ಎಂ.ಆರ್. ಶಾಸ್ತ್ರೀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿಎಸ್ಸೆನ್ನೆಲ್ ಉಪ ಪ್ರಾನ ವ್ಯವಸ್ಥಾಪಕರಾದ ನರಸಿಂಹಪ್ಪ, ಕೆ.ಎನ್.ಮಠದ್, ಆಂತರಿಕ ಆರ್ಥಿಕ ಸಲಹೆಗಾರ ಓಂಕಾರಮೂರ್ತಿ, ಸಹಾಯಕ ಪ್ರಧಾನ ವ್ಯವಸ್ಥಾಪಕ ಜಿ.ಎಪ್. ಮಡಿವಾಳರ್, ಎಫ್‌ಎನ್‌ಟಿಒ ಮುಖಂಡರಾದ ಟಿ.ಎಂ. ಪಟ್ಟಯ್ಯ, ಎಂ.ಮಹಾಲಿಂಗಯ್ಯ, ಜೆ.ಡಿ. ಮನೋಹರ್, ಎಮಿಲಿ ಮತ್ತಿತರರು ಉಪಸ್ಥಿತರಿದ್ದರು.







