ಧೈರ್ಯ, ನಿಷ್ಠೆ, ಪ್ರಾಮಾಣಿಕವಾಗಿರುವವರಿಗೆ ಕಾಂಗ್ರೆಸ್ ಟಿಕೇಟ್: ಮಾಜಿ ಶಾಸಕ ಅನ್ಸಾರಿ
ಕಾಂಗ್ರೆಸ್ ಪೂರ್ವಭಾವಿಸಭೆ

ಗಂಗಾವತಿ,ಆ.09: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಲವರು ನಮ್ಮ ಜತೆ ಇದ್ದು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದ್ದರಿಂದ ತನಗೆ ಸೋಲಾಗಿದೆ. ನಗರಸಭೆ ಚುನಾವಣೆಯಲ್ಲಿ ಧೈರ್ಯ ನಿಷ್ಠೆ ಪ್ರಾಮಾಣಿಕವಾಗಿರುವವರಿಗೆ ಟಿಕೇಟ್ ನೀಡಿ ಜನರ ಆಶೀರ್ವಾದಿಂದ ಗೆಲ್ಲಿಸಿಕೊಂಡು ಬಂದು ಮತ್ತೊಮ್ಮೆ ನಗರಸಭೆ ಮೇಲೆ ಕಾಂಗ್ರೆಸ್ ಝೆಂಡಾ ಹಾರಿಸಲಾಗುತ್ತದೆ ಎಂದು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಹೇಳಿದರು.
ಅವರು ತಮ್ಮ ನಿವಾಸದಲ್ಲಿ ನಗರಸಭೆ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಡಬಲ್‍ಗೇಮ್ ಮಾಡಿದ ಮುಖಗಳಿಗೆ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೇಟ್ ನೀಡುವುದಿಲ್ಲ. ನಿಷ್ಠೆ ಪ್ರಾಮಾಣಿಕತೆಗೆ ಆದ್ಯತೆ ನೀಡಿ ಉತ್ತಮ ಅಭ್ಯರ್ಥಿಗಳಿಗೆ ಟಕೇಟ್ ನೀಡಲಾಗುತ್ತದೆ ಎಂದರು.
ಪ್ರತಿ ವಾರ್ಡಿಗೂ ನಾಲ್ಕೈದು ಟಿಕೇಟ್ ಆಕಾಂಕ್ಷಿಗಳಿದ್ದು, ಪಕ್ಷ ಯಾರಿಗೇ ಟಿಕೇಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡಿ ಗೆಲ್ಲಿಸಿಕೊಂಡು ಬರಬೇಕು. ಕಾಂಗ್ರೆಸ್ ಆಡಳಿತ ಪಕ್ಷವಾಗಿರುವ ಕಾರಣ ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಹೆಚ್ಚಿನ ಅಭಿವೃದ್ದಿ ಕೆಲಸಗಳಾಗುತ್ತವೆ. ಈಗಾಗಲೇ ನಗರಸಭೆ ನೂತನ ಕಟ್ಟಡ ನಿರ್ಮಾಣಕ್ಕೆ 3ಕೋಟಿ ಹಣ ಮಂಜೂರಿ ಮಾಡಿಸಿದ್ದು, ಮುಂಬರುವ ಕಾಂಗ್ರೆಸ್ ಸದಸ್ಯರು ಇಲ್ಲಿ ಕುಳಿತು ಆಡಳಿತ ನಡೆಸಲು ನಗರದ ಜನರು ಆಶೀರ್ವಾದ ಮಾಡಲು ಸಿದ್ದರಿದ್ದಾರೆ. ಪ್ರತಿ ವಾರ್ಡಿಗೂ ಭೇಟಿ ನೀಡಿ ಜನರ ಮನಸ್ಸು ಒಲಿಸುವ ಮೂಲಕ ಮತ ಬೇಡಲಾಗುತ್ತದೆ. ಬಿಜೆಪಿ-ಜೆಡಿಎಸ್ ಅಭಿವೃದ್ಧಿ ವಿರುದ್ಧವಾದ ಪಕ್ಷಗಳಾಗಿವೆ ಎಂದರು.
ಮಾಜಿ ಸಂಸದ ಶಿವರಾಮಗೌಡ ಮಾತನಾಡಿ, ಅಭಿವೃದ್ಧಿಯ ಇನ್ನೊಂದು ಹೆಸರೇ ಕಾಂಗ್ರೆಸ್ ಮತ್ತು ಅನ್ಸಾರಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಲವರ ಕುತಂತ್ರದಿಂದ ಅನ್ಸಾರಿಗೆ ಸೋಲಾಗಿದೆ. ಈ ಸೋಲನ್ನು ನಗರಸಭೆ ಚುನಾವಣೆಯಲ್ಲಿ 30 ಕಾಂಗ್ರೆಸ್ ಸದಸ್ಯರನ್ನು ಗೆಲ್ಲಿಸುವವರೆಗೂ ಕಾರ್ಯಕರ್ತರು ವಿಶ್ರಾಂತಿ ಪಡೆಯಬಾರದು. ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳ ಠೇವಣಿ ಜಪ್ತಿ ಮಾಡುವ ಮೂಲಕ ಅನ್ಸಾರಿಯವರಿಗೆ ಶಕ್ತಿ ತುಂಬಬೇಕೆಂದರು.
ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಶಾಮೀದ್ ಮನಿಯಾರ್, ಕಾಶೀಂಸಾಬ ಗದ್ವಾಲ್, ಬಸವರಾಜಸ್ವಾಮಿ ಮಳಿಮಠ, ಸೋಮನಾಥಪಟ್ಟಣಶೆಟ್ಟಿ, ಬಸವರಾಜ ರಾಮತ್ನಾಳ, ಶಿವರಾಜ್ ಗೌಡ, ನವಾಬಸಾಬ, ವೀರಭದ್ರಪ್ಪ ಪಲ್ಲೇದ್ ವಿಶ್ವನಾಥ ಕಾಲಿಚೀಲ, ಮನೋಹರಸ್ವಾಮಿ, ಶರಣೇಗೌಡ, ಡ್ಯಾಗಿ ರುದ್ರೇಶ, ರಾಜುನಾಯಕ, ಎಫ್.ರಾಘವೇಂದ್ರ, ಅಮರಜ್ಯೋತಿ ನರಸಪ್ಪ, ಈ.ರಾಮಕೃಷ್ಣ, ಮಹೇಶ ಸಾಗರ, ರಾಮ್ ನಾಯಕ್, ಕವಿತಾ ರಗಡಪ್ಪ, ರಜೀಯಾಬೇಗಂ ಮನಿಯರ, ಶ್ರೀದೇವಿ, ನಾಗರಾಜನಂದಾಪೂರ, ಕಾಶಿಂಅಲಿ ಮುದ್ದಾಬಳ್ಳಿ, ಹುಸೇನಪೀರಾ, ಕೆ.ಅಂಬಣ್ಣ, ದೇವರಮನಿ ಮಲ್ಲೇಶ ಸೇರಿ ಹಲವರಿದ್ದರು.







