‘ಒಂದು ರಾಜ್ಯ,ಒಂದು ಮತ’ ನೀತಿ ಕೆಬಿಟ್ಟ ಸರ್ವೋಚ್ಚ ನ್ಯಾಯಾಲಯ
ಬಿಸಿಸಿಐ ಹೊಸ ಸಂವಿಧಾನಕ್ಕೆ ಸುಪ್ರೀಂಕೋರ್ಟ್ ಅಸ್ತು
ಹೊಸದಿಲ್ಲಿ, ಆ.9: ಕೆಲವು ನಿರ್ದಿಷ್ಟ ಮಾರ್ಪಾಡಿನೊಂದಿಗೆ ಲೋಧಾ ಸಮಿತಿಯು ಸಿದ್ಧಪಡಿಸಿರುವ ಬಿಸಿಸಿಐ ಕರಡು ಸಂವಿಧಾನಕ್ಕೆ ಸುಪ್ರೀಂಕೋರ್ಟ್ ಗುರುವಾರ ಅಸ್ತು ಎಂದಿದೆ. ಜಸ್ಟಿಸ್ ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂಕೋರ್ಟ್ ನ ತ್ರಿಸದಸ್ಯ ಪೀಠ ತಮಿಳುನಾಡಿನ ರಿಜಿಸ್ಟ್ರಾರ್ ಆಫ್ ಸೊಸೈಟಿಯೊಂದಿಗೆ ಬಿಸಿಸಿಐನ ಹೊಸ ತಿದ್ದುಪಡಿಯಾದ ಸಂವಿಧಾನವನ್ನು ನೋಂದಾಯಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಿದೆ. ಆದೇಶದ 30 ದಿನಗಳೊಳಗೆ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಬಿಸಿಸಿಐ ಸಂವಿಧಾನವನ್ನು ಅಳವಡಿಸಿಕೊಳ್ಳಲು ನ್ಯಾಯಾಲಯ ತಾಕೀತು ಮಾಡಿದೆ. ಲೋಧಾ ಸಮಿತಿಯು ಶಿಫಾರಸು ಮಾಡಿದ್ದ ‘ಒಂದು ರಾಜ್ಯ ಒಂದು ಮತ ನೀತಿ’ಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಸೌರಾಷ್ಟ್ರ, ವಡೋದರ, ಮುಂಬೈ ಹಾಗೂ ವಿದರ್ಭ ಕ್ರಿಕೆಟ್ ಸಂಸ್ಥೆಗಳಿಗೆ ಸದಸ್ಯತ್ವವನ್ನು ನೀಡಿದೆ.
ರೈಲ್ವೇಸ್, ಸರ್ವಿಸಸ್ ಹಾಗೂ ಯುನಿವರ್ಸಿಟಿ ಸಂಸ್ಥೆಗಳಿಗೆ ಖಾಯಂ ಸದಸ್ಯತ್ವವನ್ನು ಮರುಸ್ಥಾಪಿಸಲು ಸುಪ್ರೀಂಕೋರ್ಟ್ ಸೂಚಿಸಿದೆ. ಬಿಸಿಸಿಐ ಅಧಿಕಾರಿಗಳ ಅಧಿಕಾರದ ಅವಧಿಯಲ್ಲಿ ಸುಪ್ರೀಂಕೋರ್ಟ್ ಬದಲಾವಣೆ ಮಾಡಿದೆ. ತಿದ್ದುಪಡಿಯ ಪ್ರಕಾರ ಬಿಸಿಸಿಐ ಪದಾಧಿಕಾರಿಗಳು ಒಂದು ವರ್ಷದ ಬದಲಿಗೆ ಸತತ ಎರಡು ಅವಧಿಗೆ ಸೇವೆ ಸಲ್ಲಿಸಲು ಅವಕಾಶವಿದೆ.





