ಸುಂಟಿಕೊಪ್ಪದಲ್ಲಿ ವರುಣನ ಆರ್ಭಟ: ಹಲವು ಮನೆಗಳಿಗೆ ನುಗ್ಗಿದ ಮಳೆ ನೀರು
ಸುಂಟಿಕೊಪ್ಪ,ಆ.9: ಕಳೆದೆರಡು ದಿನಗಳಿಂದ ಆರ್ಭಟಿಸುತ್ತಿರುವ ಮಳೆಯಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿ ಆತಂಕವನ್ನು ಉಂಟು ಮಾಡಿದೆ
ಪಟ್ಟಣದ ಎರಡನೇ ವಿಭಾಗದ ಮಮ್ಮು ಎಂಬುವವರ ಮನೆಯ ಹಿಂಭಾಗದಲ್ಲಿರುವ ಉಲುಗುಲಿ ತೋಟದಿಂದ ಹರಿದುಬಂದ ನೀರಿನಿಂದಾಗಿ ಗುಡ್ಡ ಕುಸಿದು ನೀರು ಮನೆಯೊಳಗೆ ನುಗ್ಗಿದೆ. ರಾತ್ರಿ 2 ಗಂಟೆಯ ಸುಮಾರಿಗೆ ಮನೆಯ ಎಲ್ಲ ಕೋಣೆಗಳಿಗೆ ನೀರು ಹರಿದಿದ್ದು, ಮನೆಯವರು ಗುರುವಾರ ಬೆಳಗಿನವರೆಗೂ ನಿದ್ರೆಯಿಲ್ಲದೇ ಆತಂಕದಲ್ಲಿ ಕಾಲಕಳೆದರು.
ಸಮೀಪದ ಗಿರಿಯಪ್ಪನ ಮನೆಯ ಬಳಿ ಇರುವ ರಿಜ್ವಾನ್, ಇಸ್ಮಾಯಿಲ್, ವಿಶು ಸೇರಿದಂತೆ ಅಕ್ಕ ಪಕ್ಕದ ಮನೆಗಳಿಗೂ ರಾತ್ರಿ ನೀರು ಹರಿದಿದೆ. ಇವರ ಮನೆಯ ಪಕ್ಕದಲ್ಲಿರುವ ಕೊಳ್ಳಕ್ಕೆ ನೀರು ಹರಿಯಲು ಜಾಗವಿಲ್ಲದಿರಿಂದ ಮಳೆಯ ನೀರು ಸಂಪೂರ್ಣವಾಗಿ ಮನೆಯೊಳಗೆ ನುಗ್ಗಿದೆ. ಸಮೀಪದ ಕಂಬಿಬಾಣೆ ಗ್ರಾ.ಪಂ.ಗೆ ಸೇರಿದ ಉಪ್ಪುತೋಡುವಿನ ನಿವಾಸಿಗಳಾದ ಮಂಜುನಾಥ ರೈ, ಚಂದ್ರಹಾಸ ರೈ, ಪುರುಷೋತ್ತಮ ರೈ, ಅಜಡ್ಕ ಕುಟುಂಬಸ್ಥರಿಗೆ ಸೇರಿದ ಗದ್ದೆಗಳು ಮಳೆಯಿಂದ ಜಲಾವೃತಗೊಂಡಿವೆ.
ಉಪ್ಪುತೋಡು ಕಂಬಿಬಾಣೆ ಮುಖ್ಯ ರಸ್ತೆಯ ಮೋರಿ ಸಂಪೂರ್ಣ ಕುಸಿತವಾಗಿದ್ದು, ಕಾವೇರಿ ನೀರಾವರಿ ನಿಗಮದ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂದು ಈ ಭಾಗದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.