ಕಾರನ್ನು ಪುಡಿಗೈದ ಕನ್ವರಿಯಾ ಬಂಧನ

ಹೊಸದಿಲ್ಲಿ, ಆ.10: ಕಾರೊಂದನ್ನು ತಡೆದು ಅದನ್ನು ಪುಡಿಗೈದ ಆರೋಪದಲ್ಲಿ 23 ವರ್ಷದ `ಕನ್ವರಿಯಾ' ರಾಹುಲ್ ಅಲಿಯಾಸ್ ಬಿಲ್ಲಾ ಎಂಬಾತನನ್ನು ಬಂಧಿಸಲಾಗಿದೆ.
ಆರೋಪಿ ನಿರಕ್ಷರಸ್ಥ ಹಾಗೂ ನಿರುದ್ಯೋಗಿಯಾಗಿದ್ದ ಹಾಗೂ ಕಳ್ಳತನ ಪ್ರಕರಣವೊಂದರಲ್ಲಿ ಬಂಧಿತನಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಆತ ಇತರ ಕನ್ವರಿಯಾಗಳ ಜತೆ ಸೇರಿ ಕನ್ವರಿಯಾ ವ್ಯಕ್ತಿಯೊಬ್ಬರ ತೀರಾ ಹತ್ತಿರದಿಂದ ಹಾದು ಹೋದ ಕಾರನ್ನು ಪುಡಿಗಟ್ಟಿದ್ದ. ಕ್ಯಾಮರಾದಲ್ಲಿ ಸೆರೆ ಸಿಕ್ಕ ಈ ಘಟನೆಯಲ್ಲಿ ಆರೋಪಿಗಳು ಕೈಯಲ್ಲಿದ್ದ ಕೋಲುಗಳಿಂದ ಕಾರಿಗೆ ಹೊಡೆದು ಅದರ ಗಾಜುಗಳನ್ನು ಒಡೆದಿದ್ದರಲ್ಲದೆ ನಂತರ ಕಾರನ್ನು ಬುಡಮೇಲುಗೊಳಿಸಿ ಟ್ರಾಫಿಕ್ ಜಾಮ್ ಸೃಷ್ಟಿಸಿದ್ದರು.
ಈ ಅಪಘಾತದಲ್ಲಿ ಗಾಯಗೊಂಡ ಕನ್ವರಿಯಾನ ಪರಿಚಯವೂ ರಾಹುಲ್ ಗೆ ಇರಲಿಲ್ಲವೆನ್ನಲಾಗಿದೆ. ಘಟನೆ ನಡೆದ ನಂತರ ಅದರ ವೀಡಿಯೋ ಟಿವಿ ಪರದೆಗಳಲ್ಲಿ ಮೂಡಿದ್ದು ಕೂಡ ರಾಹುಲ್ ಗೆ ತಿಳಿದಿರಲಿಲ್ಲ. ಕಾರಿನಲ್ಲಿದ್ದವರು ಅಪಘಾತ ಸಂಭವಿಸಿದ ನಂತರ ಅಲ್ಲಿದ್ದ ಕನ್ವರಿಯಾನ ಕೆನ್ನೆಗೆ ಬಾರಿಸಿದ್ದೇ ಈ ಘಟನೆಗೆ ಕಾರಣವಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.





