ಹೊಸದಿಲ್ಲಿಯಲ್ಲಿ ಕನ್ನಡ ಭಾಷಾ ಅಕಾಡಮಿ ಸ್ಥಾಪನೆ : ಕೇಜ್ರಿವಾಲ್ ಸರಕಾರಕ್ಕೆ ಸಚಿವೆ ಜಯಮಾಲಾ ಅಭಿನಂದನೆ

ಬೆಂಗಳೂರು, ಆ. 10: ದೇಶದ ರಾಜಧಾನಿಯಾಗಿರುವ ಹೊಸದಿಲ್ಲಿಯಲ್ಲಿ ಕನ್ನಡ ಭಾಷಾ ಅಕಾಡೆಮಿ ಸ್ಥಾಪಿಸಲು ದಿಲ್ಲಿ ಸರಕಾರದ ಸಂಪುಟವು ಸಮ್ಮತಿ ನೀಡಿರುವುದು ಅತ್ಯಂತ ಸಂತೋಷದ ಸಂಗತಿ. ಈ ಬಗ್ಗೆ ನಾನು ಕರ್ನಾಟಕ ಸರಕಾರದ ಪರವಾಗಿ ದಿಲ್ಲಿ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ ತಿಳಿಸಿದ್ದಾರೆ.
ಪ್ರತಿಷ್ಠಿತ ಅಕಾಡೆಮಿಯು ದಿಲ್ಲಿಯಲ್ಲಿ ಸ್ಥಾಪನೆಯಾಗಿ ಸಮರ್ಪಕವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅಗತ್ಯ ಎಲ್ಲ ಸಹಾಯ, ಸಹಕಾರ, ನೆರವುಗಳನ್ನು ನೀಡಲು ಸಂಸ್ಕೃತಿ ಇಲಾಖೆಯು ಸದಾ ಸಿದ್ಧ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೂ ನಾನು ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಕನ್ನಡ ಭಾಷೆಯ ಬೆಳವಣಿಗೆ, ಸಾಹಿತ್ಯ, ಕಲೆ, ಸಂಸ್ಕೃತಿಗಳ ಅನಾವರಣಕ್ಕೆ ಅನುಕೂಲವಾಗುವ ಮತ್ತು ದಿಲ್ಲಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೆಲೆಸಿರುವ ಕನ್ನಡಿಗರ ಹಿತರಕ್ಷಣೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಈ ಭಾಷಾ ಅಕಾಡೆಮಿಯು ತುಂಬಾ ಅಗತ್ಯವಾಗಿತ್ತು. ಈ ಎಲ್ಲ ಉದ್ದೇಶಗಳನ್ನು ಈಡೇರಿಸುವಲ್ಲಿ ಈ ನೂತನ ಅಕಾಡೆಮಿಯು ಯಶಸ್ವಿಯಾಗಲಿ ಎಂದು ಅವರು ಹಾರೈಸಿದ್ದಾರೆ.
ಹೊಸದಿಲ್ಲಿಯಲ್ಲಿ ಕನ್ನಡ ಭಾಷಾ ಅಕಾಡೆಮಿಯನ್ನು ಸ್ಥಾಪಿಸಬೇಕೆಂಬುದು ರಾಜ್ಯ ಸರಕಾರದ ಮತ್ತು ಅನೇಕ ಕನ್ನಡಪರ ಸಂಘಟನೆಗಳ ಒತ್ತಾಯವಾಗಿತ್ತು. ಈ ಬಗ್ಗೆ ಶ್ರಮಿಸಿದ ಎಲ್ಲ ಸಂಘ-ಸಂಸ್ಥೆಗಳಿಗೂ ಮತ್ತು ಮಹನೀಯರುಗಳಿಗೂ ಹೃತ್ಪೂರ್ವಕ ಧನ್ಯವಾದಗಳು ಎಂದು ಜಯಮಾಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







