ನಗರ ಆಸ್ತಿ ನೋಂದಣಿಗೆ ಪಿ.ಆರ್. ಕಾರ್ಡ್ ಕಡ್ಡಾಯ
ಮಂಗಳೂರು, ಆ.10: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 32 ಗ್ರಾಮಗಳಲ್ಲಿ ಶೀಘ್ರವೇ ಆಸ್ತಿ ನೋಂದಣಿಗೆ ಪ್ರೊಪರ್ಟಿ ಕಾರ್ಡ್ (ಪಿಆರ್ ಕಾರ್ಡ್) ಕಡ್ಡಾಯಗೊಳಿಸಲಾಗಿದೆ. ಈ ತನಕ ದಾಖಲೆ ನೀಡದಿರುವ ಅಪಾರ್ಟ್‌ಮೆಂಟ್ ಸಹಿತ ಎಲ್ಲಾ ಆಸ್ತಿ ಮಾಲಕರು ತಮ್ಮ ಮಾಲಕತ್ವದ ದಾಖಲೆಗಳನ್ನು ಸಲ್ಲಿಸಬೇಕಿದೆ.
ದಾಖಲೆಗಳು ನೋಂದಣಿ ಇಲಾಖೆಯ ಕಾವೇರಿ ಮತ್ತು ಯುಪಿಒಆರ್ ತಂತ್ರಾಂಶದಲ್ಲಿ ಸಂಯೋಜನೆಗೊಳ್ಳಲಿದ್ದು, ಮುಂದೆ ಯಾವುದೇ ಆಸ್ತಿಗಳ ನೊಂದಾವಣೆಗೆ ಪಿ.ಆರ್. ಕಾರ್ಡನ್ನು ಹಾಜರುಪಡಿಸುವುದು ಕಡ್ಡಾಯವಾಗಿರುತ್ತದೆ.
ಕ್ರಯಪತ್ರ/ಭೂನ್ಯಾಯ ಮಂಡಳಿ ತೀರ್ಪು/ದರ್ಖಾಸ್ತು ಆದೇಶ ನಡವಳಿ/ರಿಜಿಸ್ಟ್ರಿ ನಕಾಶೆ ಹಾಗೂ ಇತರೆ ಪತ್ರ. ಭೂಪರಿವರ್ತನೆ ಆದೇಶ, ಪಹಣಿ ಪತ್ರ ಅಥವಾ ಕಾರ್ಪೋರೇಶನ್ ಖಾತಾಪತ್ರ ಭೂಪರಿವರ್ತಿತ ನಕ್ಷೆ, ಸ್ವಯಂ ಘೋಷಿತ ಆಸ್ತಿ ತೆರಿಗೆ ಪ್ರತಿ. ಅಪಾರ್ಟ್‌ಮೆಂಟ್ ಆಗಿದ್ದಲ್ಲಿ ಡೀಡ್ ಆಫ್ ಡಿಕ್ಲೆರೇಷನ್, ಕಟ್ಟಡದ ಪ್ರಾರಂಭಿಕ ಪ್ರಮಾಣ ಪತ್ರ, ಕಟ್ಟಡದ ಪ್ರವೇಶ ಪತ್ರ, ಅನುಮೋದಿತ ಕಟ್ಟಡದ ಪ್ಲ್ಯಾನ್ ಇತರ ದಾಖಲೆಗಳನ್ನು ಸಲ್ಲಿಸಬೇಕಿದೆ.
ಹೆಚ್ಚಿನ ಮಾಹಿತಿಗಾಗಿ ನಗರ ಮಾಪನ ಯೋಜನಾಧಿಕಾರಿಗಳ ಕಚೇರಿ, ಮಿನಿ ವಿಧಾನ ಸೌಧ ಆವರಣ, ಮಂಗಳೂರು (ದೂ.ಸಂ: 0824-4266222) ಕಚೇರಿಯನ್ನು ಸಂಪರ್ಕಿಸಲು ನಗರ ಮಾಪನ ಯೋಜನೆ ಮಂಗಳೂರು ಮತ್ತು ಭೂದಾಖಲೆಗಳ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.





