ಮಲೆನಾಡಲ್ಲಿ ಮುಂಗಾರು ಮಳೆ ಚುರುಕು : 1810 ರ ಗಡಿ ದಾಟಿದ ಲಿಂಗನಮಕ್ಕಿ ಡ್ಯಾಂ
ಶಿವಮೊಗ್ಗ, ಆ. 10: ಮಲೆನಾಡಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಜಿಲ್ಲೆಯಾದ್ಯಂತ ಮಳೆಯಾಗುತ್ತಿದೆ. ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಅಬ್ಬರ ಕಡಿಮೆಯಾಗಿದೆ. ಉಳಿದಂತೆ ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಹೆಚ್ಚಳ ಕಂಡುಬಂದಿದೆ. ಲಿಂಗನಮಕ್ಕಿ ಡ್ಯಾಂ 1810 ರ ಅಡಿ ದಾಟಿದೆ.
ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದ ಮಳೆಯ ವಿವರ ಈ ಮುಂದಿನಂತಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಾದ ಮಾಣಿಯಲ್ಲಿ 84 ಮಿ.ಮೀ., ಯಡೂರಿನಲ್ಲಿ 72 ಮಿ.ಮೀ., ಹುಲಿಕಲ್‍ನಲ್ಲಿ 91 ಮಿ.ಮೀ., ಮಾಸ್ತಿಕಟ್ಟೆಯಲ್ಲಿ 82 ಮಿ.ಮೀ., ಚಕ್ರಾದಲ್ಲಿ 119 ಮಿ.ಮೀ. ಹಾಗೂ ಸಾವೇಹಕ್ಲುವಿನಲ್ಲಿ 114 ಮಿ.ಮೀ. ವರ್ಷಧಾರೆಯಾಗಿದೆ.
ಉಳಿದಂತೆ ಶಿವಮೊಗ್ಗದಲ್ಲಿ 6.80 ಮಿ.ಮೀ., ಭದ್ರಾವತಿಯಲ್ಲಿ 1 ಮಿ.ಮೀ., ತೀರ್ಥಹಳ್ಳಿಯಲ್ಲಿ 25.40 ಮಿ.ಮೀ., ಸಾಗರದಲ್ಲಿ 18.20 ಮಿ.ಮೀ., ಶಿಕಾರಿಪುರದಲ್ಲಿ 4.60 ಮಿ.ಮೀ., ಸೊರಬದಲ್ಲಿ 5.50 ಮಿ.ಮೀ. ಹಾಗೂ ಹೊಸನಗರದಲ್ಲಿ 13.40 ಮಿ.ಮೀ. ವರ್ಷಧಾರೆಯಾಗಿದೆ.
ಡ್ಯಾಂ ವಿವರ: ಜಲಾನಯನ ವ್ಯಾಪ್ತಿಯ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಬಹುತೇಕ ಡ್ಯಾಂಗಳ ಒಳಹರಿವಿನಲ್ಲಿ ಏರಿಕೆ ಕಂಡುಬಂದಿದೆ. ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂನ ನೀರಿನ ಮಟ್ಟ 1810.55 (ಗರಿಷ್ಠ ಮಟ್ಟ : 1819) ಅಡಿ ತಲುಪಿದೆ.
ಡ್ಯಾಂನ ಒಳಹರಿವು 25,504 ಕ್ಯೂಸೆಕ್‍ಗೆ ಏರಿಕೆಯಾಗಿದ್ದು, 3539.33 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಡ್ಯಾಂ ವ್ಯಾಪ್ತಿಯಲ್ಲಿ 23 ಮಿ.ಮೀ. ವರ್ಷಧಾರೆಯಾಗಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನ ನೀರಿನ ಮಟ್ಟ 1783.95 ಅಡಿಯಿತ್ತು. ಮಳೆಗಾಲ ಪೂರ್ಣಗೊಂಡರೂ ಡ್ಯಾಂನ ನೀರಿನ ಮಟ್ಟ 1800 ರ ಗಡಿ ದಾಟಿರಲಿಲ್ಲ.
ಉಳಿದಂತೆ ತುಂಗಾ ಹಾಗೂ ಭದ್ರಾ ಡ್ಯಾಂಗಳು ಈಗಾಗಲೇ ಗರಿಷ್ಠ ಮಟ್ಟ ತಲುಪಿವೆ. ನೀರನ್ನು ಹೊರ ಬಿಡಲಾಗುತ್ತಿದೆ. ತುಂಗಾ ಡ್ಯಾಂನ ಒಳಹರಿವು 39,277 ಕ್ಯೂಸೆಕ್ ಇದ್ದು, 37,162 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಭದ್ರಾ ಡ್ಯಾಂನ ಒಳಹರಿವು 33,961 ಕ್ಯೂಸೆಕ್ ಇದೆ. ಭಾರೀ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ 41,438 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.







