ಚುನಾವಣಾ ಆಯೋಗಕ್ಕೆ ಲಿಖಿತ ಕ್ಷಮಾಪಣೆ ಸಲ್ಲಿಸಿದ ಇಮ್ರಾನ್
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ

ಇಸ್ಲಾಮಾಬಾದ್, ಆ. 10: ಜುಲೈ 25ರಂದು ಮತದಾನ ಮಾಡುವಾಗ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದಕ್ಕಾಗಿ ಪಾಕಿಸ್ತಾನದ ಮುಂದಿನ ಪ್ರಧಾನಿ ಎಂದು ಬಿಂಬಿಸಲ್ಪಟ್ಟಿರುವ ಇಮ್ರಾನ್ ಖಾನ್ ಶುಕ್ರವಾರ ಚುನಾವಣಾ ಆಯೋಗಕ್ಕೆ ಲಿಖಿತ ಕ್ಷಮಾಪಣೆ ಮತ್ತು ಅಫಿದಾವಿತ್ ಸಲ್ಲಿಸಿದರು.
ಪಾಕಿಸ್ತಾನಿ ಚುನಾವಣಾ ಆಯೋಗವು ಈ ಪ್ರಕರಣದಲ್ಲಿ ತನ್ನ ತೀರ್ಪನ್ನು ಕಾದಿರಿಸಿದೆ ಎಂದು ‘ಜಿಯೋ ನ್ಯೂಸ್’ ವರದಿ ಮಾಡಿದೆ.
ಮರೆಗೆ ಹೋಗಿ ಮತ ಹಾಕದೆ, ಎಲ್ಲರ ಎದುರಲ್ಲೇ ತನ್ನ ಮತವನ್ನು ಚಲಾಯಿಸುವ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದಕ್ಕಾಗಿ, ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಲಿಖಿತ ಕ್ಷಮಾಪಣೆ ಕೋರಬೇಕೆಂದು ಆಯೋಗ ಸೂಚಿಸಿತ್ತು.
ಮುಖ್ಯ ಚುನಾವಣಾ ಆಯುಕ್ತ ಸರ್ದಾರ್ ಮುಹಮ್ಮದ್ ರಝಾ ನೇತೃತ್ವದಲ್ಲಿ ಚುನಾವಣಾ ಆಯೋಗದ ನಾಲ್ವರು ಸದಸ್ಯರ ಪೀಠ ನಡೆಸಿದ ವಿಚಾರಣೆಯ ವೇಳೆ ಇಮ್ರಾನ್ ಖಾನ್ ಲಿಖಿತ ಕ್ಷಮಾಪಣೆ ಮತ್ತು ಅಫಿದಾವಿತ್ ಸಲ್ಲಿಸಿದರು.
ಆ. 13: ನ್ಯಾಶನಲ್ ಅಸೆಂಬ್ಲಿಯ ಮೊದಲ ಅಧಿವೇಶನ
ಹೊಸದಾಗಿ ಆಯ್ಕೆಯಾಗಿರುವ ನ್ಯಾಶನಲ್ ಅಸೆಂಬ್ಲಿಯ ಮೊದಲ ಅಧಿವೇಶನವನ್ನು ಆಗಸ್ಟ್ 13ರಂದು ಕರೆಯಲು ಪಾಕಿಸ್ತಾನದ ಉಸ್ತುವಾರಿ ಪ್ರಧಾನಿ ನಾಸಿರುಲ್ ಮುಲ್ಕ್ ಶಿಫಾರಸು ಮಾಡಿದ್ದಾರೆ. ಇದರೊಂದಿಗೆ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಆಗಸ್ಟ್ 15 ಅಥವಾ 16ರಂದು ಔಪಚಾರಿಕವಾಗಿ ಪ್ರಧಾನಿಯಾಗಿ ಆಯ್ಕೆಯಾಗಲು ಹಾದಿ ಏರ್ಪಟ್ಟಂತಾಗಿದೆ.
ಪ್ರಧಾನಿಯಾಗಿ ಅವರು ಆಗಸ್ಟ್ 17 ಅಥವಾ 18ರಂದು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ವೀಕ್ಷಕರು ಹೇಳಿದ್ದಾರೆ.







