‘ಎಬಿಪಿ’ ಪತ್ರಕರ್ತರು ಚಾನೆಲ್ ತೊರೆಯುವ ಮುನ್ನ ಜಾಹೀರಾತು ಹಿಂಪಡೆದಿದ್ದ ಪತಂಜಲಿ!
ಮೋದಿಯನ್ನು ಟೀಕಿಸಿದ್ದಕ್ಕಾಗಿ ಹೇರಿದ ಒತ್ತಡವೇ?

ಹೊಸದಿಲ್ಲಿ, ಆ.10: ಈ ತಿಂಗಳ ಆರಂಭದಲ್ಲಿ ‘ಎಬಿಪಿ ನ್ಯೂಸ್’ ಹಿಂದಿ ವಾಹಿನಿಯಿಂದ ಪ್ರತಿಷ್ಠಿತ ಪತ್ರಕರ್ತರ ನಿರ್ಗಮನಕ್ಕೆ ನರೇಂದ್ರ ಮೋದಿ ಸರಕಾರವನ್ನು ತುಷ್ಟೀಕರಿಸುವ ಆಡಳಿತ ವರ್ಗದ ಬಯಕೆ ಕಾರಣವಾಗಿರಬಹುದು, ಆದರೆ ಸ್ವಘೋಷಿತ ಯೋಗಗುರು ಮತ್ತು ಉದ್ಯಮಿ ಬಾಬಾ ರಾಮದೇವ್ ಅವರು ತನ್ನ ಪತಂಜಲಿ ಕಂಪನಿಯ ಜಾಹೀರಾತುಗಳನ್ನು ದಿಢೀರ್ ಹಿಂದೆಗೆದುಕೊಳ್ಳುವ ಮೂಲಕ ವಾಹಿನಿಯ ಮೇಲೆ ಒತ್ತಡ ಹೇರಿದ್ದಿರಬಹುದು ಎಂದು ಆಂಗ್ಲ ಸುದ್ದಿವಾಹಿನಿಯು ವರದಿ ಮಾಡಿದೆ.
ಪತಂಜಲಿ ಕಂಪನಿಯು ಜುಲೈ 15ರ ಸುಮಾರಿಗೆ ಎಬಿಪಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ತನ್ನ ಜಾಹೀರಾತುಗಳನ್ನು ದಿಢೀರನೆ ಹಿಂದೆಗೆದುಕೊಂಡಿತ್ತು ಎನ್ನುವುದನ್ನು ಈ ವ್ಯವಹಾರವನ್ನು ನೇರವಾಗಿ ಅರಿತಿರುವ ವ್ಯಕ್ತಿಯೋರ್ವರನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.
ಎಬಿಪಿ ವಾಹಿನಿಯ ಸಂಪಾದಕರಲ್ಲೋರ್ವರಾಗಿದ್ದ ಪುಣ್ಯ ಪ್ರಸೂನ್ ಬಾಜಪೈ ಅವರು, ತಾನು ಈ ಹಿಂದೆ ಮೋದಿ ಸರಕಾರದ ವಿರುದ್ಧ ಮಾಡಿದ್ದ ಆರೋಪವನ್ನು ಪುನರಾವರ್ತಿಸಿ ತನ್ನ ‘ಮಾಸ್ಟರ್ ಸ್ಟ್ರೋಕ್’ ಕಾರ್ಯಕ್ರಮವನ್ನು ಪ್ರಸಾರ ಮಾಡಿದ ಮರುದಿನವೇ ಪತಂಜಲಿ ತನ್ನ ಜಾಹೀರಾತುಗಳನ್ನು ಹಿಂದಕ್ಕೆ ತೆಗೆದುಕೊಂಡಿತ್ತು. ಪ್ರಧಾನಿಯವರ ಯೋಜನೆಯೊಂದರ ಫಲಾನುಭವಿ ಮಹಿಳೆಯೋರ್ವಳು ಸಂದರ್ಶನದಲ್ಲಿ ತನ್ನ ಆದಾಯವು ದ್ವಿಗುಣಗೊಂಡಿದೆ ಎಂದು ಹೇಳಿಕೊಂಡಿದ್ದಳು. ಈ ಮಹಿಳೆಗೆ ಹೀಗೆಯೇ ಹೇಳುವಂತೆ ಮೊದಲೇ ತರಬೇತಿ ನೀಡಿದ್ದು, ಮೋದಿ ಸರಕಾರವು ಜನತೆಯನ್ನು ದಾರಿ ತಪ್ಪಿಸುತ್ತಿದೆ ಎಂದು ಬಾಜಪೈ ಆರೋಪಿಸಿದ್ದರು. ಕಾರ್ಯಕ್ರಮದಲ್ಲಿ ಮೋದಿಯವರ ಹೆಸರನ್ನು ಪ್ರಸ್ತಾಪಿಸುವಂತಿಲ್ಲ ಮತ್ತು ಅವರ ಚಿತ್ರವನ್ನೂ ತೋರಿಸುವಂತಿಲ್ಲ ಎಂದು ಆಡಳಿತ ವರ್ಗ ತಾಕೀತು ಮಾಡಿದ ನಂತರ ಬಾಜಪೈ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಹೊರಕ್ಕೆ ನಡೆದಿದ್ದರು ಎನ್ನಲಾಗಿದೆ.
‘ಎಬಿಪಿ’ ವಾಹಿನಿಯಿಂದ ಜಾಹೀರಾತುಗಳನ್ನು ಹಿಂದೆಗೆದುಕೊಂಡಿರುವುದನ್ನು ಖಚಿತಪಡಿಸಿರುವ ಪತಂಜಲಿಯ ವಕ್ತಾರ ಎಸ್.ಕೆ ತಿಜಾರಾವಾಲಾ ಅವರು, ಆದರೆ ವಾಹಿನಿಯು ಮೋದಿ ಸರಕಾರವನ್ನು ಟೀಕಿಸಿ ಪ್ರಸಾರ ಮಾಡಿದ್ದ ಕಾರ್ಯಕ್ರಮಗಳಿಗೂ ಇದಕ್ಕೂ ಏನೂ ಸಂಬಂಧವಿಲ್ಲ. ವಾಸ್ತವದಲ್ಲ್ಲಿ ಕಂಪನಿಯ ಜಾಹೀರಾತು ಗುತ್ತಿಗೆಯು ಜೂನ್ 30ಕ್ಕೇ ಅಂತ್ಯಗೊಂಡಿತ್ತು ಮತ್ತು ವಾಹಿನಿಯು ಜಾಹೀರಾತುಗಳನ್ನು ತೋರಿಸಲೇಬಾರದಿತ್ತು. ಆದರೆ ತಪ್ಪಿನಿಂದಾಗಿ ಜಾಹೀರಾತು ಜು.15ರವರೆಗೂ ಮುಂದುವರಿದಿತ್ತು. ಇದು ಗಮನಕ್ಕೆ ಬಂದಾಗ ಕಂಪನಿಯು ‘ಎಬಿಪಿ ನ್ಯೂಸ್’, ‘ಎಬಿಪಿ ಆನಂದ’ ಮತ್ತು ‘ಎಬಿಪಿ ಮಜಾ’ ವಾಹಿನಿಗಳಿಂದ ಜಾಹೀರಾತುಗಳನ್ನು ಹಿಂದೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ ಎಂದು ಆಂಗ್ಲ ಸುದ್ದಿವಾಹಿನಿಯು ವರದಿ ಮಾಡಿದೆ.







