ಮಳೆಗೆ ಕೇರಳ ತತ್ತರ: 54,000 ಮಂದಿ ನಿರಾಶ್ರಿತರು

ಕೊಚ್ಚಿ, ಆ.10: ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಈ ಮಧ್ಯೆ ಶುಕ್ರವಾರ ಕೂಡಾ ಎಡೆಬಿಡದೆ ಮಳೆ ಸುರಿ ದಿದ್ದು ಇಡುಕ್ಕಿ ಜಲಾಶಯದ ಭಾಗವಾಗಿರುವ ಚೆರು ತೋನಿ ಅಣೆಕಟ್ಟಿನ ಇನ್ನೆರಡು ದ್ವಾರಗಳನ್ನು ತೆರೆಯಲಾಗಿದೆ. ರಾಜ್ಯದಲ್ಲಿ 54,000 ಮಂದಿ ನಿರಾಶ್ರಿತರಾಗಿದ್ದು ಮಳೆಯ ರುದ್ರ ನರ್ತನಕ್ಕೆ ಮೃತಪಟ್ಟವರ ಸಂಖ್ಯೆ 29ಕ್ಕೇರಿದೆ.
ಪ್ರಧಾನಿಯಿಂದ ನೆರವಿನ ಭರವಸೆ
ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ್ದಾರೆ. ರಾಜ್ಯದ ಪರಿಸ್ಥಿತಿ ಬಗ್ಗೆ ಅವರು ವಿಚಾರಿಸಿದ್ದಾರೆ. ಅಗತ್ಯವಿರುವ ನೆರವು ನೀಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ರಾಜ್ಯದಿಂದ 10 ಕೋಟಿ ರೂ. ನೆರವು
ಕೇರಳದಲ್ಲಿ ವ್ಯಾಪಕ ಮಳೆ ಉಂಟಾಗಿರುವ ಹಿನ್ನೆಲೆಯಲ್ಲಿ ಮಾನವೀಯ ನೆಲೆ ಆಧಾರದ ಮೇಲೆ ರಾಜ್ಯ ಸರಕಾರದ ವತಿಯಿಂದ 10 ಕೋಟಿ ರೂ. ನೀಡಲಾಗಿದೆ.
ನೆರೆ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಚರ್ಚೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದು, ರಾಜ್ಯ ವಿಪತ್ತು ಪರಿಹಾರ ನಿಧಿ-ಎಸ್‌ಡಿಎಫ್‌ನಿಂದ ನೇರವಾಗಿ ಹಣ ವರ್ಗಾಯಿಸಲಾಗಿದೆ. ತೀವ್ರ ಮಳೆಯಿಂದ ಕೇರಳದ ಜನತೆ ಸಮಸ್ಯೆಗೆ ಈಡಾಗಿದ್ದು, ಸೋಂಕು ಭೀತಿ ಎದುರಿಸುತ್ತಿರುವ ಹಿನ್ನೆಲೆಯಲ್ಲಿ 15ಕ್ಕೂ ಹೆಚ್ಚು ಸದಸ್ಯರ ವೈದ್ಯಕೀಯ ತಂಡವನ್ನು ಅಲ್ಲಿಗೆ ಕಳುಹಿಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಅತಂತ್ರರಾಗಿರುವ ವಿದೇಶಿ ಪ್ರವಾಸಿಗರು
ಕೇರಳದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಂಭವಿಸಿದ ಭೂಕುಸಿತ ದಿಂದಾಗಿ 20 ವಿದೇಶಿಗರು ಸೇರಿದಂತೆ 69 ಪ್ರವಾಸಿಗರು ರೆಸಾರ್ಟ್‌ವೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
24 ಡ್ಯಾಂಗಳ ನೀರು ಹೊರಕ್ಕೆ
ಕೇರಳದ ಬಹುತೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಅಂತೆಯೇ ವಿವಿಧ ಜಲಾಶಯಗಳಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದು, ಬಹುತೇಕ ಎಲ್ಲ ಜಲಾಶಯಗಳೂ ಭರ್ತಿಯಾಗಿವೆ. ಇದೇ ಕಾರಣಕ್ಕೆ ಇಡುಕ್ಕಿ, ಚೆರುಥೋಣಿ, ಮುಲ್ಲಾ ಪೆರಿಯಾರ್, ಮಲಂಪುಳ, ತೆನ್ಮಾಲಾ ಡ್ಯಾಂ ಸೇರಿದಂತೆ ಕೇರಳದ ಎಲ್ಲ 24 ಡ್ಯಾಂಗಳ ಗೇಟ್‌ಗಳನ್ನು ತೆರೆದು ಅಪಾರ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.







