ಮನುಷ್ಯ-ಮನುಷ್ಯರ ನಡುವೆ ಪ್ರೀತಿ ಹೆಚ್ಚಲಿ: ಪ್ರಸಿದ್ಧ ವಿದ್ವಾಂಸ ಶೇಕ್ ಮುಹಮ್ಮದ್ ಸಖೀಬ್ ಶಾಮಿ
ಮಂಗಳೂರು ಪುರಭವನದಲ್ಲಿ ಉಪನ್ಯಾಸ ಕಾರ್ಯಕ್ರಮ

ಮಂಗಳೂರು, ಆ.10: ಮನುಷ್ಯರು ಕಾರು, ಬಂಗಲೆ, ಆಸ್ತಿ, ಹಣದಂತಹ ಲೌಕಿಕ ಜಗತ್ತನ್ನು ಪ್ರೀತಿಸುತ್ತಿದ್ದಾರೆ. ಮನುಷ್ಯ-ಮನುಷ್ಯರ ನಡುವೆ ಪ್ರೀತಿ ಇರಬೇಕು. ಅದಕ್ಕಿಂತಲೂ ಹೆಚ್ಚಾಗಿ ಪ್ರವಾದಿ ಮುಹಮ್ಮದ್ ಅವರನ್ನು ಪ್ರೀತಿಸಬೇಕು ಎಂದು ಕಂಝ್ ಉಲ್ ಹುದಾ ಅಂತಾರಾಷ್ಟ್ರೀಯ ಸಂಸ್ಥೆ ಗ್ರೇಟ್ ಬ್ರಿಟನ್ (ಯು.ಕೆ.) ಸಂಸ್ಥಾಪಕ ಮತ್ತು ಚೇರ್ ಮ್ಯಾನ್ ಹಾಗೂ ವಿಶ್ವ ಪ್ರಸಿದ್ಧ ಸಂಶೋಧನಾ ವಿದ್ವಾಂಸ ಶೇಕ್ ಮುಹಮ್ಮದ್ ಸಖೀಬ್ ಶಾಮಿ ತಿಳಿಸಿದ್ದಾರೆ.
ನಗರದ ಪುರಭವನದಲ್ಲಿ ಶುಕ್ರವಾರ ಸಂಜೆ ಅಸ್ಸುಫ್ಫಾ ಪ್ರತಿಷ್ಠಾನದಿಂದ ಹಮ್ಮಿಕೊಳ್ಳಲಾಗಿದ್ದ ‘ಮುಹಮ್ಮದ್ ಶಾಂತಿ ಮತ್ತು ಕರುಣೆಯ ಸಂದೇಶ ವಾಹಕ’ ಎಂಬ ವಿಷಯದಲ್ಲಿ ಉಪನ್ಯಾಸವನ್ನು ನೀಡಿ ಅವರು ಮಾತನಾಡಿದರು.
ಮನುಷ್ಯರು ಜಗತ್ತಿಗೆ ಬಂದ ಉದ್ದೇಶವನ್ನು ಮರೆಯಬಾರದು. ಜೀವನದಲ್ಲಿ ಬರುವ ಎಲ್ಲ ವ್ಯಕ್ತಿಗೊಂದಿಗೆ ಪ್ರೀತಿ ವಿಶ್ವಾಸದಿಂದ ಕೂಡಿ ಬಾಳಬೇಕು. ಇದರೊಂದಿಗೆ ಇಸ್ಲಾಂನ ತತ್ವ-ಆದರ್ಶಗಳನ್ನು ಪಾಲಿಸಬೇಕು. ಏಕದೇವಾರಾಧನೆ ಇದ್ದಲ್ಲಿ ಜಗತ್ತೇ ನಿಮ್ಮನ್ನು ತಿರಸ್ಕರಿಸಿದರೂ ಅಲ್ಲಾಹ್, ಮುಹಮ್ಮದರು ಕೈಬಿಡುವುದಿಲ್ಲ. ಪ್ರತಿಯೊಬ್ಬರನ್ನು ಪ್ರೀತಿಸಬೇಕು ಎನ್ನುವುದು ಪ್ರವಾದಿ ಮುಹಮ್ಮದರ ಸಂದೇಶವಾಗಿದೆ ಎಂದು ಅವರು ಹೇಳಿದರು.
ಕಿರಾಅತ್ ಪಠಣದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಇಂಗ್ಲೆಂಡ್‌ನ ಪ್ರಮುಖ ಉಲಮಾಗಳಾದ ಖಾಸಿಫ್, ಆಮಿರ್ ಹಂಝ, ಸ್ಥಳೀಯ ಉಲಮಾಗಳಾದ ಅಬ್ದುಲ್ ರಶೀದ್ ಝೈನಿ ಕಾಮಿಲ್, ಸಿದ್ದೀಕ್ ಮೋಂಟುಗೋಳಿ, ಹಾಫಿಲ್ ಸುಫಿಯಾನ್ ಸಖ್ಖಾ, ಮುಮ್ತಾಝ್ ಅಲಿ, ಪ್ರೊ. ಅಬ್ದುರ್ರಹ್ಮಾನ್ ಇಂಜಿನಿಯರ್, ಅಲ್ ಅನ್ಸಾರ್ ಬಾವ ಹಾಜಿ, ಮುಹಮ್ಮದ್ ಸಾದೀಕ್ ರಝ್ವಿ ಉಪ್ಪಳ, ಅಸ್ಸುಫ್ಫಾ ಪ್ರತಿಷ್ಠಾನದ ವೈಸ್ ಚೇರ್ ಮ್ಯಾನ್ ಮುಹಮ್ಮದ್ ಅಮೀನ್, ಸಹ ಕಾರ್ಯದರ್ಶಿ ಅಬ್ದುಲ್ ಆಫೀಫ್ ಮೆಹಫೂಝ್, ಖಜಾಂಚಿ ಎಂ.ಪಿ. ಅಬೂಬಕರ್ ಹಾಜಿ, ಉಪ ಮೇಯರ್ ಕೆ. ಮುಹಮ್ಮದ್, ಅಝೀಝ್ ದಾರಿಮಿ ಚೊಕ್ಕಬೆಟ್ಟು ಹಾಗು ಇತರರು ಉಪಸ್ಥಿತರಿದ್ದರು.
ಅಸ್ಸುಫ್ಫಾ ಪ್ರತಿಷ್ಠಾನ ಮಂಗಳೂರು ಇದರ ಚೇರ್ ಮ್ಯಾನ್ ಇಮಾಮ್ ಮುಹಮ್ಮದ್ ರಶೀದ್ ಸಅದಿ ಸ್ವಾಗತಿಸಿದರು. ಆಮಿರ್ ಆಫೀಫ್ ಹಾಗೂ ರಾಝಿ ಕಾರ್ಯಕ್ರಮ ನಿರೂಪಿಸಿದರು.







