ಬಾಲಕಿಯ ಅಪಹರಣ ಪ್ರಕರಣ: ಆರೋಪಿಗೆ ನ್ಯಾಯಾಂಗ ಬಂಧನ

ಮಂಗಳೂರು, ಆ.10: ನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಕೆಲಸಕ್ಕಿದ್ದ ಬಾಲಕಿಯ ಅಪಹರಣ ಪ್ರಕರಣದಲ್ಲಿ ಬಂಧಿತನಾದ ಆರೋಪಿ ಸೊರಬದ ಆನವಟ್ಟಿಯ ರಮೇಶ್ ಎಂಬಾತನಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಆತನನ್ನು ಬಾಲಕಿ ಸಹಿತ ಪಾಂಡೇಶ್ವರ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದರು.
ಪ್ರಕರಣ ವಿವರ: ಸೊರಬದ ಆನವಟ್ಟಿಯ 17ವರ್ಷದ ಬಾಲಕಿಗೆ ಅದೇ ಊರಿನ ರಮೇಶ್ ಎಂಬಾತನ ಜತೆ ಪ್ರೇಮ ಸಂಬಂಧವಿತ್ತು ಎನ್ನಲಾಗಿದ್ದು, ಈ ಸಂಬಂಧವನ್ನು ದೂರ ಮಾಡಲು ಬಾಲಕಿಯ ಮನೆಯವರು ಆಕೆಯನ್ನು ವೆಲೆನ್ಸಿಯಾದ ಮನೆಯೊಂದರಲ್ಲಿ ಕೆಲಸಕ್ಕೆ ಸೇರಿಸಿದ್ದರು. ಸ್ವಲ್ಪ ದಿನಗಳ ಕಾಲ ಕೆಲಸ ಮಾಡಿದ ಆಕೆ ಬಳಿಕ ನಾಪತ್ತೆಯಾಗಿದ್ದಳು. ಆಕೆ ಸೊರಬಕ್ಕೆ ತೆರಳಿ ಅಲ್ಲಿಂದ ಪ್ರಿಯಕರನ ಜತೆ ಬೆಂಗಳೂರಿಗೆ ತೆರಳಿದ್ದು, ಅಪ್ರಾಪ್ತೆಯ ನಾಪತ್ತೆ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೆಂಗಳೂರಿನಲ್ಲಿ ಪತ್ತೆ:
ಅವರು ಬೆಂಗಳೂರಿನ ಬೊಮ್ಮಸಂದ್ರಹಳ್ಳಿಯ ಬಾಡಿಗೆ ಮನೆಯಲ್ಲಿರುವ ಮಾಹಿತಿ ಪಡೆದ ಪಾಂಡೇಶ್ವರ ಪೊಲೀಸರು ಆರೋಪಿ ಸಹಿತ ಬಾಲಕಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪೋಕ್ಸೋ ಸಾಧ್ಯತೆ ?:
ಆರೋಪಿ ರಮೇಶ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ. ಬಾಲಕಿಯನ್ನು ನಗರದ ಮಹಿಳಾ ಸ್ವೀಕಾರ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದ್ದು, ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.







