ಭಾರತೀಯತೆ ಯಾವುದೇ ಧರ್ಮ, ಜನಾಂಗದ ಸೊತ್ತಲ್ಲ: ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ

ಶಿವಮೊಗ್ಗ, ಆ. 11: ಜಾತ್ಯಾತೀತ ತತ್ವವು ನಮ್ಮ ದೇಶದ ದೊಡ್ಡ ಆಸ್ತಿಯಾಗಿದೆ. ಎಲ್ಲರೂ ನಮ್ಮವರೇ ಎಂದುಕೊಂಡು ನಾವು ಬೆಳೆದುಕೊಂಡು ಬಂದಿದ್ದೇವೆ. ಈ ಕಾರಣದಿಂದಲೇ ಪ್ರಜಾಪ್ರಭುಪ್ರಭುತ್ವ ವ್ಯವಸ್ಥೆ ಬಲಿಷ್ಠವಾಗಿದೆ ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಅಭಿಪ್ರಾಪಟ್ಟಿದ್ದಾರೆ.
ಮಹಾತ್ಮಾಗಾಂಧಿ ಗ್ರಾಮೀಣಾಭಿವೃದ್ದಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್, ರಾಮಕೃಷ್ಣ ಚಾರಿಟಬಲ್ ಟ್ರಸ್ಟ್ ಮತ್ತು ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಕುವೆಂಪು ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ 'ಪ್ರಜಾಪ್ರಭುತ್ವ ಬಲವರ್ಧನೆಯಲ್ಲಿ ವಿದ್ಯಾರ್ಥಿ ಹಾಗೂ ಯುವಜನರ ಪಾತ್ರ' ಎಂಬ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತೀಯತೆ ಎನ್ನುವುದು ಯಾವುದೇ ಧರ್ಮ, ಜನಾಂಗದ ಸೊತ್ತಲ್ಲ. ಇದನ್ನು ಪ್ರತಿಯೋರ್ವರು ಅರಿತುಕೊಳ್ಳಬೇಕಾಗಿದೆ. ದೇಶ ಸುತ್ತಿ ಕೋಶ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ನಮ್ಮ ಕಣ್ಣು ತೆರೆಸುತ್ತದೆ. ಭಾರತೀಯ ಸಂಸ್ಕೃಯಲ್ಲಿ ಎಲ್ಲವೂ ಅಡಕಗೊಂಡಿದೆ. ಇದನ್ನು ಮನಗಂಡು ನಾವೆಲ್ಲ ಮುಂದೆ ಸಾಗಬೇಕು ಎಂದು ತಿಳಿಸಿದರು.
ಪ್ರಪಂಚದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯೇ ಎಲ್ಲದಕ್ಕಿಂತ ಶ್ರೇಷ್ಠ ಎಂಬುವುದು ಖಂಡಿತ ಸರಿಯಲ್ಲ. ಆದರೆ ಇನ್ನಿತರ ಆಡಳಿತ ಪದ್ದತಿಗಿಂತ ಪ್ರಜಾಪ್ರಭುತ್ವ ಉತ್ತಮವಾಗಿದೆ ಎಂಬುವುದು ಸತ್ಯವಾಗಿದೆ. ಉತ್ತರ ಕೋರಿಯಾದಲ್ಲಿ ಮಿಲಿಟರಿ ಆಡಳಿತ, ಚೈನಾದಲ್ಲಿ ಕಮ್ಯೂನಿಸ್ಟ್ ಆಡಳಿತವಿದೆ. ಅಮೆರಿಕಾ, ಯೂರೋಪ್ ದೇಶಗಳಲ್ಲಿ ಪ್ರಜಾಪ್ರಭುತ್ವ ಪಾಲಿಸಿಕೊಂಡು ಬರಲಾಗುತ್ತಿದ್ದರೂ, ಭಾರತದ ಪ್ರಜಾಪ್ರಭುತ್ವ ವಿಶಿಷ್ಠವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಡಿಮೆಯಾಗಿಲ್ಲ: ದೇಶದ ಯುವಜನರಲ್ಲಿ ದೇಶಾಭಿಮಾನ ಕಡಿಮೆಯಾಗಿದೆ ಎಂದೆನಿಸುತ್ತಿಲ್ಲ. ನಮ್ಮ ಪೀಳಿಗೆಗಿಂತ ಇಂದಿನ ಪೀಳಿಗೆಯಲ್ಲಿಯೇ ದೇಶಾಭಿಮಾನ ಹೆಚ್ಚಿದೆ ಎಂದು ಪಿ.ಜಿ.ಆರ್.ಸಿಂಧ್ಯಾ ಇದೇ ಸಂದರ್ಭದಲ್ಲಿ ಹೇಳಿದರು.
ಸಮಾರಂಭದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಮಾದೇಶ್ ಹೆಗ್ಡೆ, ಕಾಲೇಜು ಪ್ರಾಂಶುಪಾಲ ಮಧು, ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ದಿ ಟ್ರಸ್ಟ್ ನಿರ್ದೇಶಕ ಕೆ.ಸಿ.ಬಸವರಾಜ್ ಮೊದಲಾದವರಿದ್ದರು.







