ಸಿಎಂ ಭತ್ತದ ಪೈರು ನಾಟಿ ರಾಜಕೀಯ ನಾಟಕ: ಯಡಿಯೂರಪ್ಪ ಟೀಕೆ
ರಾಯಚೂರು, ಆ. 11: ಮಳೆ ಕೊರತೆಯಿಂದ ಬರದ ಸಂಕಷ್ಟಕ್ಕೆ ಸಿಲುಕಿರುವ ಗ್ರಾಮಗಳ ರೈತರ ನೆರವಿಗೆ ಧಾವಿಸುವ ಬದಲು ಮುಖ್ಯಮಂತ್ರಿ ಕುಮಾರಸ್ವಾಮಿ ಭತ್ತದ ಪೈರು ನಾಟಿ ಮಾಡುವ ಮೂಲಕ ನಾಟಕ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ.
ಶನಿವಾರ ನಗರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಸಾಲಮನ್ನಾ ವಿಚಾರದಲ್ಲಿ ಇಕ್ಕಟ್ಟಿನಲ್ಲಿದ್ದು, ಭತ್ತದ ಪೈರು ನಾಟಿ ಮಾಡುವುದು ರಾಜಕೀಯ ನಾಟಕವಷ್ಟೇ. ಇದರಿಂದ ರೈತರಿಗೆ ಯಾವುದೇ ಉಪಯೋಗವಿಲ್ಲ ಎಂದು ಹೇಳಿದರು.
20 ಸ್ಥಾನಗಳು ಬರುತ್ತಿರಲಿಲ್ಲ: ಚುನಾವಣೆ ಸಂದರ್ಭದಲ್ಲಿ ರೈತರ ಸಾಲಮನ್ನಾ ಭರವಸೆ ನೀಡಿದ್ದರಿಂದಲೇ ಜೆಡಿಎಸ್ 37 ಸ್ಥಾನ ಗೆಲ್ಲಲು ಸಾಧ್ಯವಾಯಿತು. ಇಲ್ಲದಿದ್ದರೆ 20 ಸ್ಥಾನಗಳನ್ನು ಗೆಲ್ಲಲ್ಲು ಸಾಧ್ಯವಾಗುತ್ತಿರಲಿಲ್ಲ ಎಂದು ಯಡಿಯೂರಪ್ಪ ಇದೇ ವೇಳೆ ವಾಗ್ದಾಳಿ ನಡೆಸಿದರು.
ಸಾಲಮನ್ನಾ ವಿಷಯದಲ್ಲಿ ಕುಮಾರಸ್ವಾಮಿ ಸುಳ್ಳು ಭರವಸೆ ನೀಡುತ್ತಿದ್ದು, ಸಹಕಾರ ಬ್ಯಾಂಕುಗಳ 1ಲಕ್ಷ ರೂ.ವರೆಗೆ ಸಾಲಮನ್ನಾ ಘೋಷಣೆ ಮಾಡಿದ್ದಾರೆ. ಆದರೆ, ಸರಕಾರದಿಂದ ರೈತರ ಖಾತೆಗೆ ಜಮಾ ಮಾಡಿದರೆ ಮಾತ್ರ ನಂಬಿಕೆ ಬರುತ್ತದೆ. ಸಾಲಮನ್ನಾದ ಬಗ್ಗೆ ಗೊಂದಲದ ಹೇಳಿಕೆ ನೀಡುತ್ತಿದ್ದಾರೆಂದು ಬಿಎಸ್‌ವೈ ಟೀಕಿಸಿದರು.
ಜೆಡಿಎಸ್ ಪ್ರಣಾಳಿಕೆಯಲ್ಲಿ ಸಾಲಮನ್ನಾ ಘೋಷಣೆ ಮಾಡಿದಂತೆ ಮನ್ನಾ ಮಾಡಿ. ಹಣವನ್ನು ಗಿಡದಿಂದಾದರೂ ಸರಿ, ಮರದಿಂದಲಾದರೂ ಸರಿ, ಒಟ್ಟು ರೈತರ ಸಾಲಮನ್ನಾ ಮಾಡಿದರೆ ಸಾಕು. ನೀವು ನೀಡಿದ ಭರವಸೆ ಈಡೇರಿಸುವ ಜವಾಬ್ದಾರಿ ನಿಮ್ಮದೆ ಎಂದು ಬಿಎಸ್‌ವೈ ಎಚ್ಚರಿಸಿದರು.
ಬಂದ್ ಕರೆ ನೀಡಿ: ರಾಯಚೂರು ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲೆಯ ಬಂದ್‌ಗೆ ಕರೆ ನೀಡಬೇಕು ಎಂದು ಸ್ಥಳೀಯ ಮುಖಂಡರಿಗೆ ಸಲಹೆ ಮಾಡಿದ ಯಡಿಯೂರಪ್ಪ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುವುದು ಎಂದರು.
‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಬಾದಾಮಿ ಕ್ಷೇತ್ರದ ಶಾಸಕರು. ಒಂದು ವೇಳೆ ನಾನು ಬಾದಾಮಿ ಕ್ಷೇತ್ರದಲ್ಲಿ ಅರ್ಧದಿನದ ಮಟ್ಟಿಗೆ ಪ್ರಚಾರ ಮಾಡಿದ್ದರೆ, ಬಿ.ಶ್ರೀರಾಮುಲು ಅವರು ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರೆ ಸಿದ್ದರಾಮಯ್ಯ ವಿಧಾನಸಭೆಗೆ ಹೋಗುತ್ತಿರಲಿಲ್ಲ’
-ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ