ಜಯಪುರ: ಭೂಕಂಪನದ ಬಗ್ಗೆ ಪರಿಶೀಲಿಸದಿದ್ದರೆ ಧರಣಿ; ಗ್ರಾಮಸ್ಥರಿಂದ ಎಚ್ಚರಿಕೆ

ಜಯಪುರ, ಆ.11: ಮೇಗುಂದಾ ಹೋಬಳಿ ಅತ್ತಿಕೊಡಿಗೆ ಗ್ರಾ.ಪಂ.ನ ಕೆಲವು ಗ್ರಾಮಗಳಲ್ಲಿ ಕಳೆದ 3 ತಿಂಗಳಿನಿಂದ ಭೂಕಂಪನ ಹಾಗೂ ಭಾರೀ ಸ್ಪೋಟದ ಶಬ್ಧ ಕೇಳಿ ಬರುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಅಧಿಕಾರಿಗಳಿಗೆ ಪತ್ರ ಬರೆದಿದ್ದರೂ ಸ್ಥಳ ಪರಿಶೀಲನೆ ನಡೆಸಿ ಯಾವುದೇ ಅಧ್ಯಯನ ನಡೆಸದೆ ಬೇಜವಾಬ್ಧಾರಿಯಿಂದ ವರ್ತಿಸಿದ್ದಾರೆ ಎಂದು ಈ ಭಾಗದ ಗ್ರಾಮಸ್ಥರು ದೂರಿದ್ದಾರೆ.
ಅಬ್ಬಿಕಲ್ಲು ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ಶನಿವಾರ ಸಭೆ ನಡೆಸಿದ ಗ್ರಾಮಸ್ಥರು, ಭೂಕಂಪನ ಹಾಗೂ ಸ್ಪೋಟದ ಶಬ್ಧ ದಿನೇ ದಿನೇ ಹೆಚ್ಚುತ್ತಿದ್ದು ಕೇವಲ ಅಬ್ಬಿಕಲ್ಲು ಭಾಗದಲ್ಲಿ ಕೇಳಿಸುತ್ತಿದ್ದ ಶಬ್ಧ ಈಗ 2ಕಿ.ಮೀ ಸುತ್ತಳತೆಯ ಗ್ರಾಮಗಳಿಗೂ ವ್ಯಾಪಿಸಿದೆ. ಕಂಪನ ಹಾಗೂ ಶಬ್ಧದಿಂದ ನಾಗರಿಕರು ಆತಂಕಗೊಂಡಿದ್ದು, ಭೂಕಂಪನವಾಗುತ್ತದೆ ಎಂಬ ಭಯದಲ್ಲಿಯೇ ದಿನ ದೂಡುತ್ತಿದ್ದಾರೆ.
ಯಾವ ಕಾರಣಕ್ಕೆ ಶಬ್ಧ ಹಾಗೂ ಕಂಪನವಾಗುತ್ತಿದೆ ಎಂಬ ಅಧ್ಯಯನ ನಡೆಸಿ, ಜನರ ಆತಂಕವನ್ನು ನಿವಾರಿಸಬೇಕಾಗಿದ್ದ ಜಿಲ್ಲಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ. ತಕ್ಷಣದಲ್ಲಿ ಭೂ ವಿಜ್ಞಾನಿಗಳ ತಂಡ ಭೇಟಿ ನೀಡದಿದ್ದರೆ ಕೊಪ್ಪ ತಾಲೂಕು ಕಚೇರಿ ಎದುರು ಧರಣಿ ನಡೆಸಲಿದ್ದೇವೆ ಎಂದು ನಾಗರಿಕರು ಎಚ್ಚರಿಕೆ ನೀಡಿದ್ದಾರೆ.
ಮುಖಂಡರಾದ ನಾರಾಯಣ ಬೆಂಡೆಹಕ್ಲು, ಕೆ.ಆರ್. ಚಂದ್ರಶೇಖರ್‍ಕೊಗ್ರೆ, ಜಯಕುಮಾರ್, ಸತೀಶ್, ವೆಂಕಟೇಶ್, ಪ್ರಕಾಶ್, ಪಾರ್ಥಸಾರಥಿ ಈ ವೇಳೆ ಉಪಸ್ಥಿತರಿದ್ದರು.
ಅತ್ತಿಕೊಡಿಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆಯುತ್ತಿರುವ ಭೂಕಂಪನ ಕುರಿತು ಸ್ಥಳ ಪರಿಶೀಲಿಸಿ ಅಧ್ಯಯನ ನಡೆಸಲು ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಅಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ 3 ತಿಂಗಳ ಹಿಂದೆಯೇ ಮನವಿ ಸಲ್ಲಿಸಿದ್ದು, ಶೀಘ್ರದಲ್ಲಿ ವಿಜ್ಞಾನಿಗಳ ತಂಡ ಅಧ್ಯಯನ ನಡೆಸಲಿದೆ”.
- ನಾಗರಾಜ್, ರೆವಿನ್ಯೂ ಇನ್ಸ್ ಪೆಕ್ಟರ್, ಮೇಗುಂದಾ ಹೋಬಳಿ.







