ಚಿಕ್ಕಮಗಳೂರು: ಮಹಾಮಳೆಗೆ ಮತ್ತೊಂದು ಬಲಿ

ಚಿಕ್ಕಮಗಳೂರು, ಆ.11: ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ ಮತ್ತೊಂದು ಜೀವ ಬಲಿಯಾಗಿರುವ ಘಟನೆ ಶನಿವಾರ ಬೆಳಗ್ಗೆ ಶೃಂಗೇರಿ ತಾಲೂಕಿನ ದೇವಾಲೆಕೊಪ್ಪ ಮಳಲಿ ಗ್ರಾಮದಲ್ಲಿ ವರದಿಯಾಗಿದೆ.
ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾರು ಸಮೀಪದ ಮಳಲಿ ಗ್ರಾಮದ ಮಹಿಳೆ ಸುಶೀಲಾ ಎಂಬವರು ಶನಿವಾರ ಬೆಳಗ್ಗೆ ಭತ್ತದ ನಾಟಿ ಕೆಲಸಕ್ಕೆಂದು ಮನೆ ಸಮೀಪದ ಜಮೀನಿಗೆ ಹೊರಟಿದ್ದಾಗ ಹಳ್ಳವೊಂದನ್ನು ದಾಟುತ್ತಿದ್ದ ವೇಳೆ ಕಾಲು ಜಾರಿ ನೀರಿಗೆ ಬಿದ್ದು ಕೊಚ್ಚಿ ಹೋಗಿದ್ದಾರೆಂದು ತಿಳಿದು ಬಂದಿದೆ.
ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ಮಹಿಳೆಗಾಗಿ ತಾಲೂಕು ಆಡಳಿತ, ಪೊಲೀಸರು ಶೋಧ ಕಾರ್ಯ ನಡೆಸಿದ್ದು, ಮಹಿಳೆಯ ಶವ ಮಧ್ಯಾಹ್ನದ ವೇಳೆಗೆ ಪತ್ತೆಯಾಗಿದೆ. ಕಂದಾಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆಂದು ತಿಳಿದು ಬಂದಿದ್ದು. ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





