Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಅರೆಭಾಷೆ ಸಬಲೀಕರಣದ ಸುತ್ತಮುತ್ತ

ಅರೆಭಾಷೆ ಸಬಲೀಕರಣದ ಸುತ್ತಮುತ್ತ

ಡಾ. ಪುರುಷೋತ್ತಮ ಬಿಳಿಮಲೆಡಾ. ಪುರುಷೋತ್ತಮ ಬಿಳಿಮಲೆ11 Aug 2018 8:04 PM IST
share
ಅರೆಭಾಷೆ ಸಬಲೀಕರಣದ ಸುತ್ತಮುತ್ತ

ಭಾಗ 2

►ಕೊಡಗಿಗೆ ಅರೆಭಾಷೆ:

ಕ್ರಿ.ಶ. 1680ರಲ್ಲಿ ಸುಬ್ರಹ್ಮಣ್ಯ ಪರಿಸರದಲ್ಲಿದ್ದ ಗೌಡರು ಮುಂದಿನ ನೂರು ವರ್ಷಗಳಲ್ಲಿ ಸುಳ್ಯದಾದ್ಯಂತ ಪಸರಿಸಿಕೊಂಡದ್ದಲ್ಲದೆ, ತೊಡಿಕಾನ ಮಾರ್ಗವಾಗಿ ಭಾಗಮಂಡಲದತ್ತಲೂ ಚಲಿಸಿದ್ದಾರೆ ಎಂಬುದಕ್ಕೆ ಆಧಾರಗಳಿವೆ. ಕ್ರಿ.ಶ. 1807ರಲ್ಲಿ ದಕ್ಷಿಣ ಕನ್ನಡ ಮತ್ತು ಕೊಡಗನ್ನು ಸಂದರ್ಶಿಸಿದ ಬುಖಾನನ್ ಇತರ ಸೀಮೆಗಳಿಂದ ಬಲಾತ್ಕಾರವಾಗಿ ಜನರನ್ನು ಕರೆದುಕೊಂಡು ಬಂದು ಕೊಡಗಿನಲ್ಲಿ ನೆಲೆ ನಿಲ್ಲಿಸಿದ ವೀರರಾಜೇಂದ್ರನ ಬಗೆಗೆ ಪ್ರಸ್ತಾಪಿಸಿದ್ದಾನೆ. (BUCHANAN; 1807)

 ಟಿಪ್ಪುವಿನೊಡನೆ ಹೋರಾಡುವಾಗ ಕೊಡಗಿನ ಅನೇಕರು ಸತ್ತದ್ದಲ್ಲದೆ, ಅನೇಕ ಕೊಡವರು ಟಿಪ್ಪುವಿನ ಕೈಸೆರೆಯಾಗಿ ಶ್ರೀರಂಗ ಪಟ್ಟಣಕ್ಕೆ ರವಾನಿಸಲ್ಪಟ್ಟಿದ್ದಾರೆ. (ಕೃಷ್ಣಯ್ಯ 1970, 24) ಈ ಹಿನ್ನೆಲೆಯಲ್ಲಿ ಕೊಡಗಿನ ಅರಸನು ಬಹಳ ಜನ ಕೃಷಿಕರನ್ನು ಕೊಡಗಿಗೆ ಸುಳ್ಯ ಪರಿಸರದಿಂದ ಕರೆಸಿಕೊಂಡನು. ಇದಕ್ಕೆ ಪೂರಕವಾಗುವ ಇನ್ನೊಂದು ಅಂಶವಿದೆ. ಟಿಪ್ಪುವಿನ ವಿರುದ್ಧವಾಗಿ ಇಂಗ್ಲಿಷರು ಹೋರಾಡುತ್ತಿದ್ದಾಗ, ವೀರರಾಜೇಂದ್ರನು (1791-1809) ಇಂಗ್ಲಿಷರಿಗೆ ಸಹಾಯ ಮಾಡಿದನು. ಈ ಸಹಾಯಕ್ಕೆ ಕೃತಜ್ಞರಾದ ಇಂಗ್ಲಿಷರು ಅರಸನಿಗೆ ಘಟ್ಟದ ಕೆಳಗಣ ಕೆಲವು ಸೀಮೆಗಳನ್ನು ಉಂಬಳಿಯಾಗಿ ಬಿಟ್ಟುಕೊಟ್ಟರು. ಕ್ರಿ.ಶ. 1804ರ ಇಸ್ತಿಹಾರಿನಿಂದ ಇದು ಸ್ವಚ್ಛವಾಗುತ್ತದೆ. ‘‘...ಕುಮಾರಧಾರಾ ನದಿಗೆ ದಕ್ಷಿಣ ದಿಕ್ಕಿನಲ್ಲಿ ಇರುವಂತಹ ಕೆಲವು ಮಾಗಣಿಗಳ ಬೀರಿಸು ವಿಂಗಡಿಸಿ ಕೊಡಗಿನ ತಾಲೂಕಿಗೆ ಸೇರಿಸಿಕೊಳ್ಳುವಂತೆ ಹುಕುಂ ಬರೆದು ಕಳುಹಿಸಿದನು. ಆ ಮೇರೆಗೆ ಕಚೇರಿ ತಾಲೂಕಿನಿಂದ ವಿಂಗಡಿಸಿ ಇರುವ ಮಾಗಣಿಗಳ ವಿವರ- ಬೆಳ್ಳಾರೆ ಮಾಗಣಿ ವಂದಕ್ಕೆ ದರೋಬಸ್ತು ಗ್ರಾಮ ಮೂವತ್ತೇಳು. ನರಿಮೊಗರು ಮಾಗಣಿ ವಂದಕ್ಕೆ ಗ್ರಾಮ ವಂದು, ಅಡೂರು ಮಾಗಣಿ....’’ (ಕೊ.ಇ. 336-37) ಇಸ್ತಿಹಾರಿನಲ್ಲಿ ಹೇಳಲಾಗಿರುವ ಎಲ್ಲಾ ಪ್ರದೇಶಗಳಲ್ಲಿಯೂ ಗೌಡರು ಬಹು ಸಂಖ್ಯಾಕರು. ಈ ಕಾರಣದಿಂದ ಸುಳ್ಯ ಸೀಮೆಯ ಜನರ ಮೇಲೆ ಕೊಡಗಿನ ಅರಸನಿಗೆ ರಾಜಕೀಯ ಹಿಡಿತವಿತ್ತು. ಹೀಗಾಗಿ ಗೌಡರ ಕೊಡಗಿನ ವಲಸೆ ನಿರಾತಂಕವಾಗಿ ನಡೆಯುವಂತಾಯಿತು. 1980ರ ದಶಕದಲ್ಲಿ ನಾನು ನಡೆಸಿದ ಕಾರ್ಯದಲ್ಲಿ ಲಭ್ಯವಾದ ಮಾಹಿತಿಗಳ ಪ್ರಕಾರ ಸುಮಾರು 96 ಮನೆಗಳಿಂದ ಜನರು ಕೊಡಗಿಗೆ ಹೋಗಿ ನೆಲೆನಿಂತರು. ಕೊಡಗಿನ ಭಾಗಮಂಡಲ ಪರಿಸರದಲ್ಲಿ ಹೀಗೆ ನೆಲೆನಿಂತ ಗೌಡರು ಸುಳ್ಯ ಪರಿಸರದಲ್ಲಿ ತಮ್ಮ ಮನೆಗೆ ಇದ್ದ ಹೆಸರುಗಳನ್ನೇ ಅಲ್ಲಿಯೂ ಉಳಿಸಿಕೊಂಡಿದ್ದಾರೆ. ಉದಾಹರಣೆಗೆ ಕಾನಡ್ಕ, ದೋಳ್ಪಾಡಿ, ಕೆದಂಬಾಡಿ, ಕುಕ್ಕನೂರು, ಕೋಡಿಮನೆ, ಮೊಟ್ಟೆಮನೆ, ಗುಡ್ಡೆಮನೆ, ಮಡ್ತಿಲ, ಅಮೈ, ಕುದ್ಕುಳಿ, ಸಂಪ್ಯಾಡಿ, ಉಡ್ಡೋಳಿ, ಉಳುವಾರು, ಕುಯಿಂತೋಡು, ಬಪ್ಪನ ಮನ, ದಿಡ್ಪೆ, ಪಾಂಡನ, ಕೊಪ್ಪಡ್ಕ, ಮಲ್ಲಾರ, ನಿಡುಬೆ, ಬಾಕಿಲ ಮಾವೋಜಿ, ಬಾನಡ್ಕ, ಪೈಕ ಇತ್ಯಾದಿ. ಇವುಗಳಲ್ಲಿ ಕೆಲವು ಮನೆತನಗಳು ಈಗಲೂ ಹೋಗಿ ಬರುವ ಸಂಬಂಧ ಉಳಿಸಿಕೊಂಡಿದ್ದಾರೆ. ಕೊಡಗಿನ ರಾಜಕೀಯ ಪರಿಸ್ಥಿತಿ ಮತ್ತು ಬುಖಾನನ್ ಬರಹ ವನ್ನು ಗಮನಿಸಿದರೆ ಈ ವಲಸೆಯು ಕ್ರಿ.ಶ. 1800ರ ಸುಮಾರಿನಲ್ಲಿ ನಡೆಯಿತೆಂದು ಖಚಿತವಾಗಿ ಹೇಳಬಹುದು. ಕ್ರಿ.ಶ. 1805ರಲ್ಲಿ ವೀರರಾಜೇಂದ್ರನು ಗೌಡರಿಗೆ ಭೂಮಿ ಹಕ್ಕನ್ನು ಕೊಟ್ಟಿದ್ದರ ಕುರಿತು ದಾಖಲೆಗಳಿವೆ. ಉದಾಹರಣೆಗೆ ಎರಡನ್ನು ಇಲ್ಲಿ ಕೊಡಲಾಗಿದೆ. 1) ಶ್ರೀಮಂತರು ಅರಮನೆ ಶೀಮೆ ವಳಿತವಾದ ಶೆಟ್ಟಿ ಮಾನಿನಾಡು ಪೈಕಿ ಕುಂದಚ್ಚೇರಿ ಗ್ರಾಮದಲ್ಲಿ ಇರುವ ಸುಳ್ಯದ ಸೀಮೆ ಕೆದಂಪಾಡಿ ತುಳುವರ ಸಣ್ಣಗೆ ಅಪ್ಪಣೆ ದಯಪಾಲಿಸಿದ ಸನದು-ಬುದಿನಿರೂಪ ಅದಾಗಿ ಯೀಗ ನಿಗೆ ಹೊಸ್ತಾಗಿ ಗಟ್ಟಿ ಜಂಮಕ್ಕೆ ಟಪ್ಪಣೆ ಕೊಡಿಯಿಸಿರುವುದು.... ಯೀ ನಾಡು ಯಿದೆ ಗ್ರಾಮದಲ್ಲಿ ಕುಳನಷ್ಟವಾದ ಬೆಳ್ಳಿ ಮುಕ್ಕಾಬಿ ಭೂಮಿ 1ರ ಲೆಕ್ಕವಾದ ಗದ್ದೆ 2ಕ್ಕೆ ಪ್ರಾಕು ಕೇಳಿ ಭಟ್ಟಿ 300ಕ್ಕೆ ಅಳತೆಯಾದದ್ದು. ವೀರರಾಜೇಂದ್ರ ಅಂಗುಲ 28ಕ್ಕೆ ವೀರರಾಜೇಂದ್ರ ಗಜ 1 ಅಂಥಹಾ ಗಜ 8ಕ್ಕೆ ಅಳತೆಕೋಲು ಇಟ್ಟು ಅಳತೆಯಾದ ಕೋಲು 5,538ಕ್ಕೆ ಭತ್ತ ಬರುವ ಹತ್ತ ಬ..ಯೀ ಭೂಮಿಯನ್ನು ನಿಂನ ಪುತ್ರ ಪೌತ್ರ ಪಾರಾಪರ್ಯವಾಗಿ ಜಂಮವಾಗಿ ಅನುಭವಿಸಿಕೊಂಡು ಯೀ ಭೂಮಿಯಿಂದ ಅರಮನೆಗೆ ಬರತಕ್ಕ ಉಂಬಳಿ ಕಾಣಿಕೆಯನ್ನು ಕಾಲಕಾಲಂಪ್ರತಿಯಲ್ಲು ಅರಮನೆಗೆ ಒಪ್ಪಿಸುತ್ತ ಸ್ವಾಮಿ ಕಾರ್ಯ ಮುಖ್ಯವಾಗಿ ನಡಕೊಳ್ಳುವುದಾಗಿಯೆಂಬ ನನದು ನಿರೂಪಕ್ಕೆ ಅಪ್ಪಣಿ... (ಕೊ.ಇ; 341-42)

2. ಶ್ರೀಮಂತರ ಅರಮನೆ ಶೀಮೆವಳಿತನವಾದ ಮುತ್ತಾರು ಮುಡಿ ಗ್ರಾಮದಲ್ಲಿಯಿರುವ ಸುಳ್ಯದ ಸೀಮೆ ಅರಂತೋಡು ಮಾಗಣಿ ಪಾರೆಮಜಲು ತುಳುವರ ತಿಂಮಪುಗೆ ಅಪ್ಪನೆ ದಯಪಾಲಿಸಿದ ಸನದು ಬುದಿ ನಿರೂಪ-ಅದಾಗಿ ಯೀಗ ನಿನಗೆ ಹೊಸ್ತಾಗಿ ಜಯಕ್ಕೆ ಯಿದೆ ಗ್ರಾಮದಲ್ಲಿ ಕುಳನಚ್ಚವಾಗಿರುವ ಕೂಸ ಕಂಡರ ಭೂಮಿ 250 ಭಟ್ಟಿ ಬೆಳಂಚಟ್ಟಿ ಭೂಮಿ 250 ಭಟ್ಟಿ... ಯೀ ಭೂಮಿಯನ್ನು ನಿನ್ನ ಪತ್ರ ಪೌತ್ರ ಪಾರಂಪರ್ಯವಾಗಿ ಬಂದುವಾಗಿ ಅನುಭವಿಸಿಕೊಂಡು ಸ್ವಾಮಿ ಕಾರ್ಯ ಮುಖ್ಯವಾಗಿ ನಡಕೊಳ್ಳುವುದಾಗಿ ಅಪ್ಪಣೆ.... (ಕೊ.ಇ; 342)

 ಇದೇ ರೀತಿ ದಬ್ಬಡ್ಕದ ಬೆಳಿಯ, ಬೆಳಕಜೆ ಸುಬ್ಬಯ್ಯ, ಪೇರಾಲು ಮೋಂಟ, ಉಳುವಾರು ಕೃಷ್ಣ, ದೇರಜೆ ಸುಬ್ಬು ಮೊದಲಾದವರಿಗೆ ಭೂಮಿ ದೊರಕಿದ್ದಕ್ಕೆ ಆಧಾರಗಳಿವೆ. ಕುಳ ನಷ್ಟವಾಗಿರುವ (ಮೊದಲು ಅಲ್ಲಿ ಜನ ಇದ್ದು ಅನಂತರ ಇಲ್ಲವಾದದ್ದೆಂಬ ಅರ್ಥ ಅದಕ್ಕಿದೆ) ಜಮೀನಿನಲ್ಲಿ ಕೃಷಿ ಮಾಡಲು ಇವರೆಲ್ಲರನ್ನೂ ಅಲ್ಲಿಗೆ ಕರೆಯಿಸಿಕೊಳ್ಳಲಾಗಿದೆ. 1836ರ ಲಿಂಗರಾಜನ ಹುಕುಂ ನಾಮೆಯು ಹೀಗೆ ಬಂದವರು ಐದು ವರ್ಷಗಳ ಕಾಲ ಭೂಮಿ ತೆರಿಗೆ ಕಟ್ಟಬೇಕಾಗಿಲ್ಲವೆಂಬ ಆದೇಶವನ್ನು ನೀಡಿದೆ. ಗಮನಿಸಬೇಕಾದ ಅಂಶವೆಂದರೆ ಈ ದಾಖಲೆಗಳಲ್ಲಿ ‘ತುಳುವರ’ ಎಂಬ ಪದ ಪ್ರಯೋಗವಾಗಿದೆ. ಇದು ತುಳುಭಾಷಿಕ ಎಂಬರ್ಥದಲ್ಲಿರದೆ ತುಳುನಾಡಿನವ ಎಂಬ ಅರ್ಥದಲ್ಲಿಯೇ ಭಾವಿಸಿಕೊಳ್ಳುವುದು ಸೂಕ್ತ. ಏಕೆಂದರೆ ಕೆದಂಬಾಡಿ ಮತ್ತು ಪಾರೆಮಜಲಿನವರು ಈಗಲೂ ಎರಡೂ ಕಡೆ ಅರೆಭಾಷೆಯನ್ನೇ ಆಡುತ್ತಾರೆ. ಪ್ರಸ್ತುತ ಕೊಡಗಿನ ವಾತಾವರಣಕ್ಕನುಗುಣವಾಗಿ ಅಲ್ಲಿನ ಗೌಡರು ತಮ್ಮ ಸಂಸ್ಕೃತಿ ಮತ್ತು ಭಾಷೆಯನ್ನು ಬೆಳೆಸಿಕೊಂಡಿದ್ದಾರೆ. ಕೊಡಗಿನ ಅರೆಭಾಷೆಯನ್ನು ಸುಳ್ಯ ಕಡೆಯ ಅರೆಭಾಷೆಯ ಪ್ರಾದೇಶಿಕ ರೂಪವೆಂದು ಖಚಿತವಾಗಿ ಗುರುತಿಸಬಹುದು. ಐಗೂರು ಸೀಮೆಯಿಂದ ಶನಿವಾರ ಸಂತೆಯ ಮೂಲಕವಾಗಿ ಕೊಡಗಿಗೆ ವಲಸೆ ಹೋದ ಗೌಡರು ಅರೆಭಾಷಿಕರಲ್ಲ. ಅಂದಿನಂತೆ ಇಂದಿಗೂ ಹಾಸನ ಪರಿಸರದಲ್ಲಿ ಅರೆಭಾಷೆ ಪ್ರಚಲಿತದಲ್ಲಿ ಇಲ್ಲ. ಇದು ಹಾಸನ ಪರಿಸರದಿಂದ ಸುಳ್ಯ ಪರಿಸರಕ್ಕೆ ಗೌಡರು ವಲಸೆ ಹೋದ ಆನಂತರವೇ ಸೃಷ್ಟಿಯಾದ ಭಾಷೆ. ಅದು ಯಾಕೆ, ಹೇಗೆ ಸೃಷ್ಟಿಯಾಯಿತು ಎಂಬುದರ ಬಗ್ಗೆ ನಮ್ಮ ಸಂಶೋಧನೆಗಳು ಮುಂದುವರಿಯಬೇಕು.

►ಅರೆಭಾಷೆಯ ಅಧ್ಯಯನ:

ಇಂಥ ಬೆಳವಣಿಗೆಗೆಳ ಜೊತೆಗೆ ಅರೆಭಾಷೆ-ಸಾಹಿತ್ಯಗಳ ಬಗೆಗೂ ನಿಧಾನವಾಗಿ ಜನರಲ್ಲಿ ತಿಳಿವಳಿಕೆ ಹೆಚ್ಚತೊಡಗಿತು. ಅಣ್ಣಾಮಲೈ ಯಲ್ಲಿ ಇದ್ದು, ಮುಂದೆ ಮದ್ರಾಸು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆಸಲ್ಲಿಸಿ ನಿವೃತ್ತರಾದ ಪ್ರೊ. ಕೋಡಿ ಕುಶಾಲಪ್ಪ ಗೌಡರು ಅರೆಭಾಷೆಯನ್ನು ‘ಗೌಡ ಕನ್ನಡ’ವೆಂದು ಕರೆದು ಇಂಗ್ಲಿಷ್‌ನಲ್ಲಿ ಪುಸ್ತಕ ಪ್ರಕಟಿಸಿದ ಮೊದಲ ಮಹನೀಯರು. ದಕ್ಷಿಣ ಕನ್ನಡ ಮತ್ತು ಕೊಡಗು ಗೌಡ ಸಮಾಜದವರು ಪ್ರಕಟಿಸಿದ ಸ್ಮರಣ ಸಂಚಿಕೆಗಳು ಇಂದಿಗೂ ಅಮೂಲ್ಯ ಮಾಹಿತಿ ನೀಡುವ ಕೃತಿಗಳಾಗಿವೆ. 1984ರಲ್ಲಿ ನಾನು ಡಾ. ಬಿ.ಎ. ವಿವೇಕ ರೈ ಅವರ ಮಾರ್ಗದರ್ಶನದಲ್ಲಿ ‘ಸುಳ್ಯ ಪರಿಸರದ ಗೌಡ ಸಂಸ್ಕೃತಿಯ ಮೇಲೆ ಮಹಾಪ್ರಬಂಧವನ್ನು ಸಿದ್ಧಪಡಿಸಿ, ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಪಿಎಚ್‌ಡಿ ಪದವಿಗಾಗಿ ಅರ್ಪಿಸಿದ್ದೆ. 1991-92ರಲ್ಲಿ ನಾನು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾಗ ಡಾ.ವಿಶ್ವನಾಥ ಬದಿಕಾನ ಅವರು ನನ್ನ ಮಾರ್ಗದರ್ಶನದಲ್ಲಿ ಎಂ.ಫಿಲ್. ಅಧ್ಯಯನಕ್ಕೆ ಅರೆಭಾಷೆಯ ಅಜ್ಜಿಕತೆಗಳನ್ನು ಆಯ್ದುಕೊಂಡರು. ಇದಕ್ಕಾಗಿ ಅವರು ಸುಮಾರು 120 ಕತೆಗಳನ್ನು ಸಂಗ್ರಹಿಸಿದ್ದರು. ಅವುಗಳಲ್ಲಿ 100 ಕತೆಗಳಿಗೆ ವರ್ಗ ಮತ್ತು ಆ ಕತೆಗಳಿಗೆ 320 ಆಶಯಗಳನ್ನು ಗುರುತಿಸಿ ‘ಗೌಡ ಕನ್ನಡದ ಜನಪದ ಕಥೆಗಳು ವರ್ಗ ಮತ್ತು ಆಶಯ ಸೂಚಿ’ ಎಂಬ ಸಂಶೋಧನಾ ಕೃತಿಯನ್ನು ಸಿದ್ಧಪಡಿಸಿ, ಅರೆ ಭಾಷೆಯ ಅಜ್ಜಿಕತೆಗಳು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಚರ್ಚೆಯಾಗುವಂತೆ ಮಾಡಿದರು. ತಮ್ಮ ಸಂಶೋಧನೆಯಲ್ಲಿ ಅವರು 7 ಹೊಸ ಉಪವರ್ಗಗಳನ್ನು ಗುರುತಿಸಿ ಗೌಡ ಕನ್ನಡದ ಕತೆಗಳಲ್ಲಿ ಜಾಣ ನರಿಯು ಜಾಣತನ ಮಾಡಲು ಹೋಗಿ ಕೊನೆಗೆ ತಾನೇ ಸತ್ತುಹೋಗುವ ರೀತಿಯು ಅರೆ ಭಾಷೆಯ ಅಜ್ಜಿಕತೆಗಳ ಅನನ್ಯತೆಯನ್ನು ಸಾರುತ್ತವೆ ಎಂದು ಅವರು ವಾದಿಸಿದರು. 1994ರಲ್ಲಿ ಈ ಸಂಶೋಧನ ಗ್ರಂಥವು ‘ಗೌಡ ಕನ್ನಡದ ಜನಪದ ಕಥೆಗಳು ವರ್ಗ ಮತ್ತು ಆಶಯ ಸೂಚಿ’ ಎಂಬ ಶೀರ್ಷಿಕೆಯಲ್ಲೇ ಪ್ರಕಟವಾಯಿತು. ಇದೀಗ ಸುಳ್ಯದವರೇ ಆದ ಡಿ.ವಿ. ಸದಾನಂದ ಗೌಡರು ಕರ್ನಾಟಕದ ಮುಖ್ಯಮಂತ್ರಿಯಾದ ಹೊತ್ತು ಅರೆಭಾಷೆಗೊಂದು ಅಕಾಡಮಿಯೂ ರಚನೆಗೊಂಡಿದೆ. ಇಂಥ ಹೊತ್ತಲ್ಲಿ ಅರೆಭಾಷೆಯ ಕುರಿತಾದ ಕೆಲಸಗಳು ಹೆಚ್ಚು ಹೆಚ್ಚು ನಡೆಯಬೇಕಾದ ಅಗತ್ಯವಿದೆ. ಡಾ. ವಿಶ್ವನಾಥ ಬದಿಕಾನ ಅವರ ಈ ಕೆಲಸ ಮುಂದಿನ ಅಕಾಡಮಿಕ್ ಕೆಲಸಗಳಿಗೆ ಬರೆದ ಸೊಗಸಾದ ಮುನ್ನುಡಿಯಾಗಿದೆ. ಪ್ರಸ್ತುತ 1990ರ ದಶಕದಲ್ಲಿ ಸಂಗ್ರಹಿಸಿದ ಅರೆಭಾಷೆಯ ಅಜ್ಜಿ ಕತೆಗಳನ್ನು ಮೂಲ ರೂಪದಲ್ಲೇ ಡಾ. ಬದಿಕಾನ ಅವರು ಪ್ರಕಟಿಸುತ್ತಿದ್ದಾರೆ. ಈ ಕತೆಗಳನ್ನು ಸುಮ್ಮನೆ ಓದಿದರೂ ತುಂಬಾ ಸಂತೋಷವಾಗುತ್ತದೆ. ಈ ಸಂಕಲನದ ಕತೆಗಳ ಬಗ್ಗೆ ಹೆಚ್ಚು ಮಾತುಗಳ ಅವಶ್ಯಕತೆಯಿಲ್ಲ. ಚಿಕ್ಕ ಮಕ್ಕಳಿಗೆ ಅಜ್ಜಿ ಹೇಳುತ್ತಿದ್ದ ಕತೆಗಳು ಮಕ್ಕಳಿಗೆ ಸುಲಭವಾಗಿ ಅರ್ಥವಾಗಬಲ್ಲವಾದರೆ ದೊಡ್ಡವರಿಗೆ ಯಾಕೆ ಕಷ್ಟ? ಆದರೂ ಓದುವಾಗ ಥಟ್ಟನೆ ಎದ್ದು ಕಾಣುವ ಸಂಗತಿಗಳನ್ನು ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ. ಅರೆಭಾಷೆ ಅಜ್ಜಿ ಕತೆಗಳಲ್ಲಿ ಎದ್ದು ಕಾಣುವ ವಿಶೇಷ ಗುಣ ಗಳೆಂದರೆ ಕತೆಗಳ ಒಡಲಲ್ಲಿರುವ ಕ್ರಿಯಾಶೀಲತೆ ಮತ್ತು ನಾಟಕೀಯತೆಯ ಗುಣ. ಇವು ಕತೆಯ ಕೇಳುಗರನ್ನು ಸುಮ್ಮನೆ ನಿಷ್ಕ್ರಿಯ ವಾಗಿ ಕತೆ ಕೇಳಲು ಬಿಡದೆ, ಸಕ್ರಿಯರಾಗಿರಲು ಒತ್ತಾಯಿಸುತ್ತದೆ. ಉದಾಹರಣೆಗೆ ಈ ಕತೆಯ ನಿರೂಪಣೆ ಗಮನಿಸಿ- ‘ಒಂದು ಮೊಲಕ್ಕೆ ಈಚೆ ಕಾಡ್ಲಿ? ಮೇದ್ ಮೇದ್ ಅದ್ಕೆ ಅಲ್ಲಿ ಎಲ್ಲಾ ಮುಗ್ತ್. ತಿಂಡಿ ತಿನಸ್, ಹುಲ್ಲು ಎಲ್ಲಾ. ಆಚೆಕರೆಗೆ ಹೊಕ್ಕು. ಹೇಂಗೆ ಹೋದು ? ಮೊಲಂಗೆ ಎಲ್ಲ ದಾಟಿಕೆ ಆದೆಯೊ’?

ಕೊನೆಯ ಪ್ರಶ್ನೆಗಳು ಕೇಳುಗನ್ನು ಉತ್ತರಿಸಲು ಪ್ರೇರೇಪಿಸುತ್ತವೆ. ಇದು ಒಂದು ಬಗೆಯಾದರೆ, ಇನ್ನೊಂದು ಬಗೆಯ ನಿರೂಪಣೆ ಯಲ್ಲಿ ಕಥನ ಕ್ರಿಯೆಯಲ್ಲಿಯೇ ನಾಟಕೀಯತೆಯಿದೆ. ಉದಾಹರಣೆಗೆ-

‘ಒಬ್ಬನೇ ಹಾಡ್ತನ ಹೇಳಿಕೊಣೊಕ್, ಡೋಲ್ ಬೊಟ್ಟಿಕನಕ್, ಗಗ್ಗರ ಆಡಿಸಿಕೊಣೊಕ್, ನಿನ್ನ ಗಾನದೆತ್ತ್ನನ ಸತ್ತರೆ ಡೋಲ್ ಗಗ್ಗರ ಕೇಳ್ವಂತ ಹೇಳ್ತ್. ಇಂವ ಡೋಲ್ ಗಗ್ಗರ ಎಲ್ಲ ಕೊಟ್ಟತ್. ಕುಂಡತ್ ತಕನ್ತ್ ಬಾತ್. ಬೇಲಿಕರೆಲಿ ನಿಂತ್ಕಂಂಡ್ - ನಾಕತ್ತಿಲಿ ಗೆದ್ದೆ ಥೈ ಥಕ್ಕ ಥೈಂತ ಹೇಳಿ ಕುಣೀದು. ಎತ್ತ್ಲಿ? ಗೆದ್ದೆ ಥೈ ಥಕ ಥೈ, ಗಾನದೆತ್ತಿಲಿ ಗೆದ್ದೆ ಥೈ ಥಕ ಥೈ, ಡೋಲ್ ಗಗ್ಗರಲಿ ಗೆದ್ದೆ ಥೈ ಥಕ ಥೈಂತ ಹೇಳಿ ಕುಣ್ದತ್ ಆತ್.’ ಈ ಕ್ರಿಯಾತ್ಮಕತೆಯೇ ಅರೆಭಾಷೆ ಅಜ್ಜಿಕತೆಗಳ ಜೀವ ಎನ್ನಬಹುದು. ಕನ್ನಡದ ಕತೆಗಳಲ್ಲಿ ಈ ಗುಣ ಇರುವುದು ಹೌದಾದರೂ ಅರೆಭಾಷೆಯಲ್ಲಿ ಅದು ಹೆಚ್ಚಿಗೆ ಇದೆ. ಕತೆಗಳ ಮುಕ್ತಾಯ ವಿಶಿಷ್ಟವಾಗಿರುವುದನ್ನೂ ಓದುಗರು ಗಮನಿಸಬಹುದು. ಅಂತಿಮವಾಗಿ ಇದು ಕೂಡಾ ಕೇಳುಗನನ್ನು ಸಕ್ರಿಯವಾಗಿ ಒಳಗೊಳ್ಳುವ ತಂತ್ರದಂತೆ ತೋರುತ್ತದೆ. ಉದಾಹರಣೆಗೆ- ‘ಕುರೆ ಹೀಂಗೆ ಮಾಡ್ತ್. ಹಂಞ ಗುಂಡಿ ತೆಗೆಕನ ಒಂದು ಹೂಂಸ್ ಹೋತ್. ಮತ್ತೆ ಹಂಞ ಗುಂಡಿ ತೆಗಿಕನ ಮತ್ತೊಂದು ಹೂಂಸ್ ಹೋತ್. ಮತ್ತೆ ಅದರಲ್ಲಿ ಕುದ್ಕ್ತಿ ನ ಮೂರನೆ ಹೂಂಸ್ ಹೋಗಿ ಸತ್ತ್ ಹೋತ್. ಅದಕ್ಕೆ ಮಣ್ಣು ಮುಚ್ಚಿ ನಾವು ಬರೋಮಾ?’ ‘ನಾಯಿಗ ಹೊನ್ಕಿ ಹಾರಿ ಬಿದ್ದ್ ಓಡ್ರೆ ಇವರ ಕೆಬಿ ಎಲ್ಲ ಹರ್ದೇ ಹೋತ್. ಇವ್ ಕತ್ತಿ ಬೆಡಿನ ಹೆಗ್ಲಿನಗೆ ಹಾಕಿದೊ ಕೆಬಿಗೆ ಕೈ ಹಿಡ್ಕೊಂಡೊ. ಮನೆಗೆ ಹೋದೊ. -ಇವರ ಹೋಗಿ ನೀವ್ ನೋಡಿಕಂಡ್ ಬರಕಡ’. ಈ ಗುಣಗಳು ತುಳು ಜನಪದ ಕತೆಗಳಲ್ಲಿ ಕೂಡಾ ಹೆಚ್ಚು ಕಾಣಿಸುತ್ತದೆ. ಅರೆಭಾಷೆಯ ಕತೆಗಳು ಅನ್ಯಭಾಷೆಗಳನ್ನು ತನ್ನ ಕಥನದಲ್ಲಿ ಒಳಗೊಳ್ಳುವ ರೀತಿಯು ಮನೋಜ್ಞವಾಗಿದೆ. ಉದಾಹರಣೆಗೆ ಒಂದು ಕತೆಯಲ್ಲಿ ತುಳು ಭಾಷೆ ಕಾಣಿಸಿಕೊಂಡ ರೀತಿ ಇಂತಿದೆ-

‘ಹ್ಞಂ ....ಹ್ಞಾಂ ....ತತ್ರ್ ಪೊಂಡ್. ತತ್ರ್ ಪೊಂಡ್‌ಂವತ ಸಮದಾನ ಮಾಡ್ತ್. ಕಲ್‌ಲ್ ಕೋಟೆ ಮುಳ್ಳ್ ಬೇಲಿ ಕುದ್ಕ ಬಲ್ಲಾಳ್ ಬತ್ತ್ದ್ ಭೂತೋ ಕೊರಿಯೆರ್‌ಂತದ್ ಹೇಳ್ತ್. ಕಲ್‌ಲ್ ಕೋಟೆ ಮುಳ್ಳ್ ಬೇಲಿ ಕತ್ತಿ ಬೆಡಿತಗ್ಲ್ ಎರ್ಕೆರ್ಕ ಬರಡೇಂತ ಹೇಳ್ತ್. ಎಕಡ್ ಪಂಡ್ನ ದಾಯ್ತವ್ ಅಯಿನೇ ಪನ್ಪುನಾಂತ್ ಹೇಳಿ ಜೋರ್ ಮಾಡ್ತ್. ಕಲ್‌ಲ್ ಕೋಟ್ ಮುಳ್ಳ್ ಬೇಲಿ ಕುದ್ಕ ಬಲ್ಲಾಳ ಬತ್ತ್ದ್ನ ಭೂತ ಕೊರಿಯೆರ್ ಕಲ್‌ಲ್ ಕೋಟ್ ಮುಳ್ಳ್ ಬೇಲಿ ಕತ್ತಿ ಬೆಡಿತಗ್ಲ್ಬ ಎರ್ಕೆರ್ಕ ಬಂಡೇಂತ ಹೇಳ್ದೇ ತಡ ಕುದ್ಕಂಗಲ ಎಲ್ಲಾ ಆಗ ಪೊಡಿ ಪೊಡಿ ಪೊಡಿ ಪೊಡಿ ಮಾಡ್ದೊ. ಅದರ್ಲಿ ಒಂದ್ ಕುದ್ಕ ಒಳ್ದುಟ್ಟ್. ಅದ್ ಈಗ ಊರ್ಲಿ ಸಾಮಚಾರ ಮಾಡ್ದೆ. ಅದರ ನೋಡಿ ಕಂಡ್ ಬರಕಡ’ . ಒಂದು ಭಾಷೆಯೊಳಗೆ ಇನ್ನೊಂದು ಭಾಷೆಯು ಹೇಗೆ, ಯಾವಾಗ ಮತ್ತು ಎಲ್ಲಿ ಕಾಣಿಸಿಕೊಳ್ಳುತ್ತದೆ? ಅವುಗಳ ಕಾರ್ಯವೇನು ಎಂಬ ಕುರಿತು ನಮ್ಮ ಸಂಶೋಧನೆಗಳು ಇನ್ನಷ್ಟು ಮುಂದುವರಿಯಬೇಕಾಗಿದೆ. ಗದ್ಯ ಪದ್ಯ ಸಮಿಶ್ರಗೊಂಡರೆ ಅದನ್ನು ಚಂಪೂ ಎಂದು ನಾವು ಕರೆಯುತ್ತೇವೆ. ಅರೆಭಾಷೆಯಲ್ಲಿ ಚಂಪೂ ಶೈಲಿಯನ್ನು ಹೋಲುವ ಅನೆಕ ಕತೆಗಳಿವೆ. ಕೆಳಗಿನ ಭಾಗವನ್ನು ನೋಡಿ-

‘ಕೊಡ್‌ಂನತ ಹೇಳ್ತ್ಗುಡ.

ಬಾಳೆಪಾಪಕ್

ನೂಲ ಕೈ ತಾಂಗಾಕ್

ಅಳೆತ್ತರ ಕೆಂಡಕೂಡ್ ಅಲ್ಲಿ ಬಂದ್

ಸತ್ಯ ಹೇಳ್ನೆಂತ ಹೇಳ್ತ್ಗಿಡ

ಅಲ್ಲಿಂದ ಸೀದ ಕುದ್ಕಣ್ಣನ ಮನೆಗೆ ಹೋತ್ಗಡ. ಅಲ್ಲಿ ಹೋಕನ ಹಬ್ಬಾಂತ ಬಾರ

ಹೊಸ್ತೂಂತ ಬಾರ

ಇಂದೇಕೆ ಬಂದೆ ಚೋರೆಕ್ಕಾ ನೀರ್ ಚಾಪೆ ತನ್ನಿರೋಮಕ್ಕಳಿರಾಂತ

ಹೇಳ್ತ್ಗಪಡ ನಿನ್ನ ನೀರ್ಚಾಪೆ ತೆಗ್ದ್ ಬೆಂಕಿಗೆ ಇಟ್ಟ್ ನನ್ನ ಮಕ್ಕಳ ತಿಂದ್ದಭರ ವಿಚಾರ್ಸಿಕೊಡ್‌ಂನತ ಹೇಳ್ತ್ಗಾಡ. ಪದ್ಯ ಗದ್ಯ ಮಿಶ್ರಣದ ಇಂತ ಕತೆಗಳು ಅರೆಭಾಷೆಯ ಸತ್ವ ಶಕ್ತಿಯನ್ನು ಮನಗಾಣಿಸಬಲ್ಲುವು. ಹೀಗೆ ನೋಡಿದಾಗ ಪ್ರೊ. ಕುಶಾಲಪ್ಪ ಗೌಡರು ಬರೆದ ಅರೆ ಭಾಷೆಯ ಮಹಾಭಾರತದಂತ ಕೃತಿಗಳ ಚಾರಿತ್ರಿಕ ಮಹತ್ವ ತಿಳಿಯುತ್ತದೆ. ಈ ಬಗೆಯ ಕೆಲಸಗಳು ಅರೆ ಭಾಷೆಯನ್ನು ಸಬಲೀಕರಣಗೊಳಿಸುವ ಪ್ರಯತ್ನವೂ ಹೌದು. ಈ ನಿಟ್ಟಿನಲ್ಲಿ ಹವ್ಯಕ ಭಾಷೆಯ ಕುರಿತು ಪ್ರೊ. ಎಂ ಮರಿಯಪ್ಪ ಭಟ್, ಪ್ರೊ ಡಿ. ಎನ್ ಶಂಕರ್ ಭಟ್, ಪ್ರೊ. ಚಂದ್ರಶೇಖರ್ ಭಟ್, ಹೆಲನ್-ಇ-ಉಲ್ರಿಚ್ ಮತ್ತು ಜೋಹಾನ್-ವಾನ್-ಡರ್ ಮೊದಲಾದವರು ಹವ್ಯಕ ಭಾಷೆಯ ಬಗ್ಗೆ ಮಂಡಿಸಿದ ಮಹತ್ವದ ವಿಚಾರಗಳನ್ನು ಇಲ್ಲಿ ಪ್ರಾಸಂಗಿಕವಾಗಿ ನೆನಪಿಸಿಕೊಳ್ಳಬಹುದು. ಪ್ರೊ. ಕುಶಾಲಪ್ಪ ಗೌಡರು 1970ರಷ್ಟು ಹಿಂದೆ ಗುರುತಿಸಿರುವಂತೆ ಅರೆಭಾಷೆಯು ಕನ್ನಡಕ್ಕಿಂಥ ಹಲವು ವಿಷಯಗಳಲ್ಲಿ ಭಿನ್ನವಾಗಿದೆ. ಈ ನಿಟ್ಟಿನಲ್ಲಿ ಅರೆಭಾಷೆಯು ಒಂದು ಉಪಭಾಷೆಯೋ ಅಥವಾ ಸ್ವತಂತ್ರ ಭಾಷೆಯೋ ಎಂಬ ಕುರಿತು ನಾವೀಗ ಹೊಸ ಚರ್ಚೆಯನ್ನು ಆರಂಭಿಸಲು ಸಾಧ್ಯವಿದೆ.

(ಮುಂದುವರಿಯುವುದು...)

share
ಡಾ. ಪುರುಷೋತ್ತಮ ಬಿಳಿಮಲೆ
ಡಾ. ಪುರುಷೋತ್ತಮ ಬಿಳಿಮಲೆ
Next Story
X