ಗೌರಿ ಹತ್ಯೆ ತನಿಖೆಯಿಂದ ಹೊರಬಿದ್ದ ವಿಸ್ಫೋಟಕ ಮಾಹಿತಿ!
ಬಾಂಬ್ ಸಹಿತ ಸನಾತನ ಉಗ್ರರ ಬಂಧನ

ಮುಂಬೈ, ಆ.11: ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ನೀಡಿದ ಮಾಹಿತಿಯ ಆಧಾರದಲ್ಲಿ ಶುಕ್ರವಾರ ಮಹಾರಾಷ್ಟ್ರದಲ್ಲಿ ಸನಾತನ ಸಂಸ್ಥೆಯ ಸದಸ್ಯರನ್ನು ಬಂಧಿಸಲಾಗಿತ್ತು ಎಂದು ಆಂಗ್ಲ ಮಾಧ್ಯಮ ವರದಿ ಮಾಡಿದೆ.
ಕರ್ನಾಟಕ ಪೊಲೀಸ್ ಪಡೆಯ ವಿಶೇಷ ತನಿಖಾ ತಂಡ (ಎಸ್‌ಐಟಿ) ನೀಡಿದ ಮಾಹಿತಿ ಆಧಾರದಲ್ಲಿ ವೈಭವ್ ರಾವತ್ (40), ಸುಧನ್ವಾ ಗೊಂಡಲೆಕರ್ (39) ಹಾಗೂ ಶರದ್ ಕಸಲ್ಕರ್ (25) ಎಂಬವರನ್ನು ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹದಳ ಬಂಧಿಸಿತ್ತು. ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಿಂದ, ಮುಖ್ಯವಾಗಿ ಅಮೊಲ್ ಕಾಲೆಯಿಂದ ವಶಪಡಿಸಿಕೊಳ್ಳಲಾದ ಡೈರಿ ಹಾಗೂ ಮೊಬೈಲ್‌ಗಳನ್ನು ಪರಿಶೀಲಿಸಿದ ಸಿಟ್ ಅಧಿಕಾರಿಗಳು ಕರ್ನಾಟಕ, ಮಹಾರಾಷ್ಟ್ರ, ಗೋವಾ ಸೇರಿದಂತೆ ದೇಶದ ಇತರ ಭಾಗಗಳಲ್ಲಿ ತೀವ್ರವಾದಿ ಹಿಂದುತ್ವ ಸಂಘಟನೆಗಳಿಗೆ ಸೇರಿದ ಹಲವು ಮಂದಿಯನ್ನು ಗುರುತಿಸಿದ್ದರು ಎಂದು ವರದಿ ತಿಳಿಸಿದೆ. ಗೌರಿ ಲಂಕೇಶ್ ಹತ್ಯೆಯ ಸಂಚು ರೂಪಿಸಿದ ಅಮೊಲ್ ಕಾಲೆ ಹಿಂದು ಜನಜಾಗೃತಿ ಸಮಿತಿಯ ಪುಣೆ ವಿಭಾಗದ ಮಾಜಿ ಸಂಚಾಲಕನಾಗಿದ್ದ. ಈ ಸಂಸ್ಥೆ ಸನಾತನ ಸಂಸ್ಥೆಯ ಅಂಗವಾಗಿದೆ. ಮಹಾರಾಷ್ಟ್ರ ಎಟಿಎಸ್ ಬಂಧಿಸಿರುವ ರಾವತ್ ಮತ್ತು ಗೊಂಡಲೆಕರ್ ಸನಾತನ ಸಂಸ್ಥೆ ಮತ್ತು ಎಚ್‌ಜೆಎಸ್‌ನ ಸದಸ್ಯರಾಗಿದ್ದರು ಎಂಬುದು ಸಂಸ್ಥೆಯ ಜಾಲತಾಣದಲ್ಲಿ ದೊರೆಯುವ ಮಾಹಿತಿಯಿಂದ ಸ್ಪಷ್ಟವಾಗುತ್ತದೆ.
ರಾವತ್ ಹಿಂದು ಗೋವಂಶ ರಕ್ಷಾ ಸಮಿತಿಯ ಸಮನ್ವಯಕಾರನಾಗಿದ್ದರೆ ಗೊಂಡಲೆಕರ್ ಶ್ರೀ ಶಿವಪ್ರತಿಷ್ಠಾನ ಹಿಂದೂಸ್ತಾನದ ಸದಸ್ಯನಾಗಿದ್ದಾನೆ ಎಂದು ವರದಿ ತಿಳಿಸಿದೆ. ಇದೇ ವೇಳೆ, ಗೌರಿ ಹತ್ಯೆ ತನಿಖೆ ನಡೆಸುತ್ತಿರುವ ಸಿಟ್ ತಂಡ ಗುರುವಾರ ಶಿವಪ್ರತಿಷ್ಠಾನ ಹಿಂದೂಸ್ತಾನದ ಜೊತೆ ಸಂಪರ್ಕ ಹೊಂದಿರುವ ಭರತ್ ಕುರ್ನೆ (37) ಎಂಬಾತನನ್ನು ಬೆಳಗಾವಿಯಲ್ಲಿ ಬಂಧಿಸಿದೆ. ಹತ್ಯಾ ಸಂಚು ಕಾರ್ಯರೂಪಕ್ಕೆ ಬರುವ ಪ್ರಮುಖ ಪಾತ್ರವಹಿಸಿದ್ದ ಕುರ್ನೆ ಶೂಟರ್‌ಗಳಿಗೆ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಖಾನಾಪುರದ ತನ್ನ ಜಮೀನಿನಲ್ಲಿ ಸಶಸ್ತ್ರ ತರಬೇತಿ ನೀಡಲು ನೆರವಾಗಿದ್ದ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.
ಬಂಧಿತರ ಜೊತೆ ಸಂಪರ್ಕ ಹೊಂದಿದ್ದ 16 ಮಂದಿಯ ವಿಚಾರಣೆ
ರಾಜ್ಯದಲ್ಲಿ ಸ್ಫೋಟಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದ ಆರೋಪದಲ್ಲಿ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹದಳದಿಂದ ಬಂಧಿಸಲ್ಪಟ್ಟಿರುವ ಮೂವರು ಆರೋಪಿಗಳ ಜೊತೆ ಸಂಪರ್ಕ ಹೊಂದಿರುವ ಕನಿಷ್ಟ ಹದಿನಾರು ಜನರ ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ಎಟಿಎಸ್ ಅಧಿಕಾರಿಗಳು ವೈಭವ್ ರಾವತ್ ಹಾಗೂ ಶರದ್ ಕಲಸ್ಕರ್ ಎಂಬಾತನನ್ನು ಮುಂಬೈ ಸಮೀಪದ ನಾಲಸೋಪಾರದಿಂದ ಬಂಧಿಸಿದರೆ ಸುಧನ್ವಾ ಗೊಂಡಲೆಕರ್‌ನನ್ನು ಪುಣೆಯಲ್ಲಿ ಬಂಧಿಸಿದ್ದರು. ರಾವತ್ ಮನೆ ಹಾಗೂ ಕಚೇರಿಗೆ ದಾಳಿ ನಡೆಸಿದ ಸಂದರ್ಭದಲ್ಲಿ ಅಧಿಕಾರಿಗಳ ಕೈಗೆ 20 ಕಚ್ಚಾ ಬಾಂಬ್‌ಗಳು ಹಾಗೂ ಬಾಂಬ್ ಸರ್ಕ್ಯೂಟ್‌ನ ಚಿತ್ರ ಸೇರಿದಂತೆ ಅಪಾರ ಪ್ರಮಾಣದ ಸ್ಫೋಟಕಗಳು ಸಿಕ್ಕಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲಸೋಪಾರ, ಪುಣೆ, ಸೋಲಾಪುರ ಮತ್ತು ಇತರ ಕಡೆಗಳಲ್ಲಿ ಆರೋಪಿಗಳ ಜೊತೆ ಸಂಪರ್ಕ ಹೊಂದಿರುವ ಹದಿನಾರಕ್ಕೂ ಹೆಚ್ಚು ಮಂದಿಯನ್ನು ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಸದ್ಯ ಬಂಧಿತ ಮೂವರು ಆರೋಪಿಗಳು ವಿಚಾರವಾದಿಗಳಾದ ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸರೆ ಹಾಗೂ ಗೌರಿ ಲಂಕೇಶ್ ಹತ್ಯೆ ಪ್ರಕರಣಗಳಲ್ಲಿ ಶಾಮೀಲಾಗಿದ್ದಾರೆಯೇ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.







