ಕೆಶಿಪ್ ಕಚೇರಿ ಸ್ಥಳಾಂತರಕ್ಕೆ ಸಚಿವ ಶಿವಾನಂದ ಪಾಟೀಲ್ ವಿರೋಧ

ವಿಜಯಪುರ, ಆ.11: ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿನ ಕೆಶಿಪ್ ಕಚೇರಿಯನ್ನು ಹಾಸನಕ್ಕೆ ಸ್ಥಳಾಂತರಿಸುವ ಕ್ರಮ ಸರಿಯಲ್ಲ. ಈ ಸಂಬಂಧ ಮುಖ್ಯಮಂತ್ರಿಗೆ ಪ್ರತಿಭಟನಾ ಪತ್ರ ಬರೆಯುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.
ಶನಿವಾರ ಆಲಮಟ್ಟಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿರುವ ಕಚೇರಿಗಳನ್ನು ಹಾಸನಕ್ಕೆ ಸ್ಥಳಾಂತರಿಸುವ ಕ್ರಮ ಸರಿಯಲ್ಲ. ಈ ಭಾಗದಲ್ಲಿ ಕಾಮಗಾರಿಗಳು ಮುಗಿದ್ದಿದ್ದರೆ, ಮತ್ತಷ್ಟು ಕೆಲಸಗಳಿಗೆ ಮಂಜೂರಾತಿ ನೀಡಲಿ ಎಂದರು.
ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕಚೇರಿ ಹಾಗೂ ಕೃಷ್ಣಾ ಕಾಡಾ ಕಚೇರಿಯನ್ನು ವಿಜಯಪುರ ಜಿಲ್ಲೆಗೆ ತರಲು ತಾನು ಬದ್ಧನಾಗಿದ್ದೇನೆ. ಅಲ್ಲದೆ, ವಿಜಯಪುರ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಿಸಲು ಪ್ರಯತ್ನಿಸುವುದಾಗಿ ಅವರು ಹೇಳಿದರು.
ಜಿಲ್ಲೆಯಲ್ಲಿ ಮುಂಗಾರು ಮಳೆಯ ಕೊರತೆ ಎದುರಾಗಿದೆ. ಅಲ್ಲದೆ, ಬೆಳೆಗಳಿಗೂ ತೊಂದರೆಯಾಗಿದೆ. ಆದುದರಿಂದ, ಮುಂಗಾರು ಬೆಳೆಗೆ ಅನುಕೂಲವಾಗುವಂತೆ ಆಲಮಟ್ಟಿ ಜಲಾಶಯದಿಂದ ಕಾಲುವೆಗಳಿಗೆ ಆಗತ್ಯವಾದ ನೀರು ಬಿಡುಗಡೆ ಮಾಡಲಾಗುವುದು. ಆ ಮೂಲಕ 6.57 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲಾಗುವುದು ಎಂದು ಶಿವಾನಂದ ಪಾಟೀಲ್ ತಿಳಿಸಿದರು.
ಆಲಮಟ್ಟಿ ಜಲಾಶಯದಿಂದ ಈ ವರ್ಷ 129.56 ದಶಲಕ್ಷ ಯೂನಿಟ್ ಜಲ ವಿದ್ಯುತ್ ಉತ್ಪಾದಿಸಲಾಗಿದೆ. 2004ರಿಂದ ಈವರೆಗೆ ಒಟ್ಟು 6571.57 ದಶಲಕ್ಷ ಯೂನಿಟ್ ಜಲ ವಿದ್ಯುತ್ ಉತ್ಪಾದನೆಯಾಗಿದೆ. ಕಳೆದ ಮೂರು ತಿಂಗಳಲ್ಲಿ ಇದೇ ಮೊದಲ ಬಾರಿಗೆ ರಾಜ್ಯದಿಂದ ಕೆಪಿಸಿ ಮೂಲಕ ವಿದ್ಯುತ್ ರಫ್ತು ಮಾಡಲಾಗಿದೆ ಎಂದು ಅವರು ಹೇಳಿದರು.







