ಬೆಂಗಳೂರು: ಮಿಲಿಟರಿಯಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ಇಬ್ಬರ ಬಂಧನ

ಬೆಂಗಳೂರು, ಆ.11: ವಿದ್ಯಾವಂತ ನಿರುದ್ಯೋಗಿ ಹುಡುಗರಿಗೆ ಮಿಲಿಟರಿಯಲ್ಲಿ ಸೈನಿಕ, ಚಾಲಕ, ಗುಮಾಸ್ತ ಮತ್ತು ತಾಂತ್ರಿಕ ಹುದ್ದೆ ಕೊಡಿಸುವುದಾಗಿ ನಂಬಿಸಿ, ಹಣ ಪಡೆದುಕೊಂಡು, ಊಟಿ ಹಾಗೂ ಜಬಲ್‌ಪುರ ಸೇರಿದಂತೆ ಇತರೆಡೆ ಕರೆದುಕೊಂಡು ಹೋಗಿ ವೈದ್ಯಕೀಯ ತಪಾಸಣೆ ಮಾಡಿಸಿ ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪ್ರತಿ ಅಭ್ಯರ್ಥಿಗಳಿಗೆ ಎರಡು ಲಕ್ಷ ರೂ.ಬೇಡಿಕೆ ಇಟ್ಟು, ತಲಾ 40 ಸಾವಿರ ರೂ.ಗಳನ್ನು ಮುಂಗಡವಾಗಿ ಪಡೆದುಕೊಂಡು ನಕಲಿ ನೇಮಕಾತಿ ಆದೇಶ ನೀಡಿ ವಂಚನೆ ಮಾಡುತ್ತಿದ್ದ ಹೆಬ್ಬಾಳದ ಕೃಷ್ಣರಾಜನ್(63) ಹಾಗೂ ಕೆಜಿಎಫ್‌ನ ಸುಜಾತಾ ಯಾನೆ ಸೋಫಿಯಾ ಸುಜಾತಾ(42) ಹಾಗೂ ಮೆಹಬೂಬ್ ಪಾಷ ವಿರುದ್ಧ ದೀಪುಶಂಕರ್ ಎಂಬವರು ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಪ್ರಕರಣದ ಮುಂದಿನ ತನಿಖೆಗಾಗಿ ಸಿಸಿಬಿ ಘಟಕಕ್ಕೆ ವರ್ಗಾಯಿಸಲಾಗಿತ್ತು. ಅದರಂತೆ, ಆ.10ರಂದು ಇಬ್ಬರು ಆರೋಪಿಗಳಾದ ಕೃಷ್ಣರಾಜನ್ ಹಾಗೂ ಸುಜಾತಾರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಆರೋಪಿಗಳಿಂದ ಮೊಬೈಲ್ ಫೋನ್‌ಗಳು, ನಕಲಿ ಉದ್ಯೋಗ ಕಾರ್ಡ್, ನೇಮಕಾತಿ ಆದೇಶಗಳು, ಅಡ್ಮಿಟ್ ಕಾರ್ಡ್, ವೈದ್ಯಕೀಯ ತಪಾಸಣೆ ಪತ್ರಗಳು ಸೇರಿದಂತೆ ಇತ್ಯಾದಿ ದಾಖಲಾತಿಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.
ಆರೋಪಿಗಳು ತಾವು ಮಿಲಿಟರಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಸುಳ್ಳು ಹೇಳಿ 20ಕ್ಕೂ ಹೆಚ್ಚು ನಿರುದ್ಯೋಗಿ ವಿದ್ಯಾವಂತ ಹುಡುಗರಿಗೆ ನಂಬಿಸಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಸುಜಾತಾ ಈ ಹಿಂದೆಯೂ ಹಲವಾರು ಅಭ್ಯರ್ಥಿಗಳಿಂದ ಮಿಲಿಟರಿಯಲ್ಲಿ ಕೆಲಸ ಕೊಡಿಸುವುದಾಗಿ ಹಣ ಪಡೆದುಕೊಂಡು ವಂಚಿಸಿದ್ದು, ಈ ಬಗ್ಗೆ ಹಲಸೂರು ಪೊಲೀಸ್ ಠಾಣೆಯಲ್ಲಿ 2013ರಲ್ಲಿಯೂ ಪ್ರಕರಣ ದಾಖಲಾಗಿರುವುದು ತಿಳಿದು ಬಂದಿದೆ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ.







