ಅಮೆರಿಕದಿಂದ ಹೃದ್ರೋಗ ಔಷಧಿಯ ವಾಪಸ್‌ಗೆ ಮುಂದಾದ ಭಾರತೀಯ ಕಂಪನಿ

ಮುಂಬೈ,ಆ.11: ಕ್ಯಾನ್ಸರ್ ಅಪಾಯವನ್ನುಂಟು ಮಾಡುತ್ತದೆ ಎಂಬ ಆತಂಕದ ಕುರಿತು ತನಿಖೆಗಳ ನಡುವೆಯೇ ಭಾರತದ ಪ್ರಮುಖ ಔಷಧಿ ತಯಾರಿಕೆ ಕಂಪನಿಗಳಲ್ಲೊಂದಾಗಿರುವ ಹೆಟರೊ ಡ್ರಗ್ಸ್ ನ್ಯೂಜೆರ್ಸಿಯಲ್ಲಿರುವ ತನ್ನ ಘಟಕ ಕ್ಯಾಂಬರ್ ಫಾರ್ಮಾಸ್ಯೂಟಿಕಲ್ಸ್ ಮೂಲಕ ಅಮೆರಿಕಕ್ಕೆ ಪೂರೈಕೆಯಾಗಿದ್ದ ರಕ್ತದೊತ್ತಡ ಮತ್ತು ಹೃದೋಗದ ಔಷಧಿ ವಾಲ್‌ಸಾರ್ಟಾನ್‌ನ ಕೆಲವು ಬ್ಯಾಚ್‌ಗಳನ್ನು ವಾಪಸ್ ಪಡೆಯುತ್ತಿದೆ ಎಂದು ಅಮೆರಿಕದ ಆಹಾರ ಮತ್ತು ಔಷಧಿ ಆಡಳಿತ(ಎಫ್‌ಡಿಎ) ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಚೀನಾದ ಔಷಧಿ ಪೂರೈಕೆ ಸಂಸ್ಥೆ ಝೆಜಿಯಾಂಗ್ ಹುಆಹಿ ಫಾರ್ಮಾಸ್ಯೂಟಿಕಲ್ಸ್‌ನ ತಯಾರಿಕೆಯ ವಾಲ್‌ಸಾರ್ಟಾನ್ ಕ್ಯಾನ್ಸರ್‌ಕಾರಕ ಎನ್-ನೈಟ್ರೋಸೋಡಿಮಿಥೈಲಮೈನ್(ಎನ್‌ಡಿಎಂಎ) ಅನ್ನು ಒಳಗೊಂಡಿರುವುದು ಪತ್ತೆಯಾಗಿದೆ ಎಂದು ಎಫ್‌ಡಿಎ ಜುಲೈ ಆರಂಭದಲ್ಲಿ ತಿಳಿಸಿದ ಬಳಿಕ ವಿಶ್ವಾದ್ಯಂತದ ಕನಿಷ್ಠ ಒಂದು ಡಝನ್ ಕಂಪನಿಗಳು ಅಮೆರಿಕದ ಮಾರುಕಟ್ಟೆಯಿಂದ ವಾಲ್‌ಸಾರ್ಟಾನ್‌ನ ನಿರ್ದಿಷ್ಟ ಬ್ಯಾಚ್‌ಗಳನ್ನು ವಾಪಸ್ ಪಡೆದುಕೊಂಡಿವೆ.
ಹೆಟರೊ ಮತ್ತು ಝೆಜಿಯಾಂಗ್ ಕಂಪನಿಗಳ ವಾಲ್‌ಸಾರ್ಟಾನ್ ತಯಾರಿಕೆ ಪದ್ಧತಿಗಳು ಒಂದೇ ಆಗಿವೆ ಎಂದು ತನ್ನ ನೋಟಿಸ್‌ನಲ್ಲಿ ತಿಳಿಸಿರುವ ಎಫ್‌ಡಿಎ,ಹೆಟರೊ ತಯಾರಿಕೆಯ ವಾಲ್‌ಸಾರ್ಟಾನ್‌ನಲ್ಲಿ ಎನ್‌ಡಿಎಂಎ ಪ್ರಮಾಣವು ಸ್ವೀಕಾರಾರ್ಹ ಮಟ್ಟಕ್ಕಿಂತ ಹೆಚ್ಚಿದೆ ಎನ್ನುವುದನ್ನು ಹೆಟಿರೊ ಲ್ಯಾಬ್ಸ್‌ನ ಪರೀಕ್ಷಾ ಫಲಿತಾಂಶಗಳು ತೋರಿಸಿವೆ,ಆದರೆ ಇದು ಝೆಜಿಯಾಂಗ್ ತಯಾರಿಕೆಯ ವಾಲ್‌ಸಾರ್ಟಾನ್‌ಗಿಂತ ಕಡಿಮೆ ಪ್ರಮಾಣದಲ್ಲಿದೆ ಎಂದು ಹೇಳಿದೆ.
ಹೆಟರೊ ಭಾರತದ ಪ್ರಮುಖ 15 ಔಷಧಿ ತಯಾರಿಕೆ ಕಂಪನಿಗಳಲ್ಲಿ ಮತ್ತು ಎಚ್‌ಐವಿ/ಏಡ್ಸ್ ಔಷಧಿಗಳ ವಿಶ್ವದ ಬೃಹತ್ ಪೂರೈಕೆದಾರರಲ್ಲೊಂದಾಗಿದೆ.
ಔಷಧಿಗೆ ಸಂಬಂಧಿಸಿದಂತೆ ಯಾವುದೇ ವ್ಯತಿರಿಕ್ತ ವರದಿಗಳನ್ನು ಕ್ಯಾಂಬರ್ ಫಾಮಾಸ್ಯೂಟಿಕಲ್ಸ್ ಸ್ವೀಕರಿಸಿಲ್ಲ ಎಂದೂ ಎಫ್‌ಡಿಎ ತಿಳಿಸಿದೆ.
ವಾಲ್‌ಸಾರ್ಟಾನ್‌ನ್ನು ಮೊದಲು ಅಭಿವೃದ್ಧಿಗೊಳಿಸಿದ್ದ ಸ್ವಿಸ್ ಕಂಪನಿ ನೊವಾರ್ಟಿಸ್ ಅದನ್ನು ಡೈಯೊವಾನ್ ಹೆಸರಿನಲ್ಲಿ ಮಾರಾಟ ಮಾಡಿತ್ತು. ಆದರೆ ಈಗ ಅದರ ಪೇಟೆಂಟ್ ಅವಧಿ ಅಂತ್ಯಗೊಂಡಿದ್ದು,ವಿಶ್ವಾದ್ಯಂತ ಕಂಪನಿಗಳು ಅದನ್ನು ಹಲವಾರು ಜೆನರಿಕ್ ಔಷಧಿಗಳ ತಯಾರಿಕೆಯಲ್ಲಿ ಬಳಸುತ್ತಿವೆ.
ಹೆಟರೊದ ವೆಬ್‌ಸೈಟ್ ಹೇಳುವಂತೆ ಅದು ವಿಶ್ವಾದ್ಯಂತ 30ಕ್ಕೂ ಅಧಿಕ ಔಷಧಿ ತಯಾರಿಕಾ ಘಟಕಗಳನ್ನು ಹೊದಿದೆ.
ಭಾರತವು ಚೀನಾದಿಂದ ವಾಲ್‌ಸಾರ್ಟಾನ್ ಒಳಗೊಂಡಿರುವ ಔಷಧಿಗಳ ಆಮದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇತರ ದೇಶಗಳಿಂದ ಆಮದು ಮುಂದುವರಿದಿದೆ ಎಂದು ಶನಿವಾರ ಸುದ್ದಿಸಂಸ್ಥೆಗೆ ತಿಳಿಸಿದ ಭಾರತದ ಕೇಂದ್ರೀಯ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆಯ ಜಂಟಿ ಔಷಧಿ ನಿಯಂತ್ರಣಾಧಿಕಾರಿ ಕೆ.ಬಂಗಾರುರಾಜನ್ ಅವರು, ವಾಲ್‌ಸಾರ್ಟಾನ್‌ಗೂ ಕ್ಯಾನ್ಸರ್‌ಗೂ ನಂಟಿರುವ ಬಗ್ಗೆ ಎಫ್‌ಡಿಎ ಕಳೆದ ತಿಂಗಳು ತನ್ನ ವೆಬ್‌ಸೈಟ್‌ನಲ್ಲಿ ನೋಟಿಸ್‌ನ್ನು ಪೋಸ್ಟ್ ಮಾಡಿದ ಬಳಿಕ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದರು.
ಚೀನಾದ ಇನ್ನೊಂದು ಕಂಪನಿ ಝೆಜಿಯಾಂಗ್ ತಿನ್ಯು ಕೂಡ ಕ್ಯಾನ್ಸರ್‌ಕಾರಕ ರಾಸಾಯನಿಕವನ್ನೊಳಗೊಂಡ ವಾಲ್‌ಸಾರ್ಟಾನ್ ತಯಾರಿಸಿದೆ ಎಂದು ಐರೋಪ್ಯ ಔಷಧಿ ನಿಯಂತ್ರಣಾಧಿಕಾರಿಗಳು ಶುಕ್ರವಾರ ತಿಳಿಸಿದ್ದರು.







