ಚಿತ್ತಾಲರು ಮುಂಬೈ ಕನ್ನಡ ಸಾಹಿತ್ಯದ ರೂವಾರಿ: ಜಯಂತ್ ಕಾಯ್ಕಿಣಿ
ಯಶವಂತ ಚಿತ್ತಾಲರ ಬದುಕು-ಬರಹ ಸಂವಾದ

ಬೆಂಗಳೂರು, ಆ.11: ಮುಂಬೈನಲ್ಲಿ ಕನ್ನಡ ಸಾಹಿತ್ಯವನ್ನು ಬೆಳೆಸಿ ಉಳಿಸಿದ ಕೀರ್ತಿ ಹಿರಿಯ ಸಾಹಿತಿ ಯಶವಂತ ಚಿತ್ತಾಲರಿಗೆ ಸಲ್ಲಬೇಕೆಂದು ಸಾಹಿತಿ ಜಯಂತ್ ಕಾಯ್ಕಿಣಿ ಶ್ಲಾಘಿಸಿದರು.
ಶನಿವಾರ ನಗರದ ಆನಂದ ವೃತ್ತದ ಕೆಪಿಟಿಸಿಎಲ್ ಕಚೇರಿಯಲ್ಲಿ ಕೆಪಿಟಿಸಿಎಲ್ ಲೆಕ್ಕಾಧಿಕಾರಿಗಳ ಸಂಘ ಆಯೋಜಿಸಿದ ಯಶವಂತ ಚಿತ್ತಾಲರ ಬದುಕು-ಬರಹ ಸಂವಾದದಲ್ಲಿ ಮಾತನಾಡಿದ ಅವರು, ಯಶವಂತ ಚಿತ್ತಾಲರು ದೈಹಿಕವಾಗಿ ರಾಜ್ಯವನ್ನು ಬಿಟ್ಟಿದ್ದರು. ಆದರೆ, ಮುಂಬೈಯಲ್ಲಿ ಕಾಯಕ ಮಾಡಿಕೊಂಡೆ, ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ತಮ್ಮ ಸಾಹಿತ್ಯದ ಮೂಲಕ ಜಗತ್ತಿಗೆ ಉಣ ಬಡಿಸಿದರು ಎಂದು ಸ್ಮರಿಸಿದರು.
ಈಗಿನ ಹೊಸ ತಲೆಮಾರು ವಾಟ್ಸ್ ಆ್ಯಪ್, ಫೇಸ್‌ಬುಕ್ ಇತರೆ ಸಾಮಾಜಿಕ ಮಾಧ್ಯಗಳಲ್ಲಿನ ವಿಷಯಗಳ ಕುರಿತು ಚರ್ಚೆ ಮಾಡುತ್ತಾರೆ. ಇದರಿಂದ ಯಾವುದೆ ವಿಷಯದ ಕುರಿತು ಆಳವಾಗಿ ತಿಳಿಯಲು ಸಾಧ್ಯವಿಲ್ಲ. ಹಾಗೂ ನಮ್ಮೊಳಗೆ ಸಂವೇದನೆಯು ಹುಟ್ಟುವುದಿಲ್ಲ ಎಂದ ಅವರು, ಯಶವಂತ ಚಿತ್ತಾಲರ ಸಾಹಿತ್ಯವನ್ನು ಓದುವ ಮೂಲಕ ಸಂವೇದನಾಶೀಲವಾಗಿ ಬದುಕುವುದನ್ನು ಕರಗತ ಮಾಡಿಕೊಳ್ಳಬಹುದು ಎಂದು ಅವರು ಹೇಳಿದರು.
ಕೃತಿಗಳು ನಮ್ಮನ್ನು ಮೀರಿ ಬೆಳೆಯಬೇಕು ಎನ್ನುತ್ತಿದ್ದ ಚಿತ್ತಾಲರ ಕಾದಂಬರಿಗಳಲ್ಲಿ ಕುಟುಂಬದ ಸಾಂಗತ್ಯವಿತ್ತು. ಅಷ್ಟೇ ಅಲ್ಲದೆ, 70ರ ದಶಕದಲ್ಲಿಯೇ ಮುಂದೆ ನಡೆಯಬಹುದಾದ ಎಷ್ಟೋ ಘಟನೆಗಳು, ದುಡ್ಡೇ ದೊಡ್ಡಪ್ಪ, ಮಾಧ್ಯಮ-ಅಂಡರ್‌ವರ್ಲ್ಡ್, ಬಿಲ್ಡರ್ ಹಾಗೂ ಸೂಕ್ಷ್ಮ ಮನಸ್ಸಿನವರ ಬಗ್ಗೆ ತಮ್ಮ ಸಾಹಿತ್ಯದ ಮೂಲಕ ದಾಖಲಿಸಿದ್ದಾರೆ ಎಂದು ಅವರು ವಿವರಿಸಿದರು.
ಹುಟ್ಟುತ್ತಲೆ ಯಾರೂ ಮಾನವೀಯ ಗುಣಗಳನ್ನು ಪಡೆದುಕೊಂಡಿರುವುದಿಲ್ಲ. ಉತ್ತಮ ವಿಚಾರ ಹಾಗೂ ಮೌಲ್ಯಗಳನ್ನು ಪಡೆಯುತ್ತಲೆ ಮನುಷ್ಯತ್ವದೆಡೆಗೆ ಸಾಗಬೇಕೆಂಬುದು ಯಶವಂತ ಚಿತ್ತಾಲರ ಆಶಯವಾಗಿತ್ತು. ಆ ನಿಟ್ಟಿನಲ್ಲಿ ಯುವಜನತೆ ಸಾಗಬೇಕು ಎಂದು ಅವರು ಆಶಿಸಿದರು.
ಸಂವಾದದಲ್ಲಿ ಕೆಪಿಟಿಸಿಎಲ್ ಲೆಕ್ಕಾಧಿಕಾರಿ ಸಂಘದ ಅಧ್ಯಕ್ಷ ಎಚ್.ಎಲ್.ಮುಕುಂದ, ಮಾಜಿ ಅಧ್ಯಕ್ಷ ಬಿ.ಟಿ.ರಾಮನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.







