ಬಿಬಿಎಂಪಿ: ಮೇಯರ್ ಸಂಪತ್ ರಾಜ್ ನೇತೃತ್ವದಲ್ಲಿ ಫ್ಲೆಕ್ಸ್, ಬ್ಯಾನರ್ ತೆರವು ಕಾರ್ಯಾಚರಣೆ

ಬೆಂಗಳೂರು, ಆ.11: ಹೈಕೋರ್ಟ್ ತೀರ್ಪಿನ ನಂತರವೂ ನಗರದ ವಿವಿಧೆಡೆ ತೆರವುಗೊಳಿಸದೆ ಉಳಿದಿದ್ದ ಫ್ಲೆಕ್ಸ್, ಬ್ಯಾನರ್‌ಗಳನ್ನು ಬಿಬಿಎಂಪಿ ಮೇಯರ್ ಸಂಪತ್‌ರಾಜ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ತೆಗೆದು ಹಾಕಲಾಯಿತು.
ಶನವಾರ ಬೆಳಗ್ಗೆ ಗಾಂಧಿನಗರ ವಾರ್ಡ್‌ನಲ್ಲಿ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಹಾಗೂ ಅಧಿಕಾರಿಗಳ ಜತೆಗೂಡಿ ಸ್ವಚ್ಛತಾ ಕಾರ್ಯಾಚರಣೆ ನಡೆಸಿದ ಅವರು, ಗೋಡೆಗಳ ಮೇಲೆ ಅಂಟಿಸಿದ್ದ ಎಲ್ಲ ರೀತಿಯ ಭಿತ್ತಿಪತ್ರಗಳನ್ನು ಕಿತ್ತು ಹಾಕಿದರು. ಇವರೊಂದಿಗೆ ಸಾರ್ವಜನಿಕರು ಜತೆಗೂಡಿದರು.
ಈ ವೇಳೆ ಮಾತನಾಡಿದ ಅವರು, ಇಂದಿನಿಂದ ಮೂರು ದಿನಗಳವರೆಗೆ ಈ ಕಾರ್ಯಾಚರಣೆ ನಡೆಯಲಿದೆ. ಸಾರ್ವಜನಿಕರ ಸಹಕಾರದೊಂದಿಗೆ ಬಿಬಿಎಂಪಿ ಸಿಬ್ಬಂದಿಗಳು ಗೋಡೆಗಳ ಮೇಲೆ, ಮರಗಳ ಮೇಲೆ ಅಂಟಿಸಿರುವ ಭಿತ್ತಿಪತ್ರ ಹಾಗೂ ಬ್ಯಾನರ್‌ಗಳನ್ನು ನಿರ್ಮೂಲನೆ ಮಾಡಲಾಗುವುದು ಎಂದು ತಿಳಿಸಿದರು.
ಹೈಕೋರ್ಟ್ ಆದೇಶದ ಮೇರೆಗೆ ಮುಂದಿನ ಒಂದುವಾರದೊಳಗೆ ನಗರವನ್ನು ಫ್ಲೆಕ್ಸ್ ಹಾಗೂ ಬ್ಯಾನರ್ ಮುಕ್ತಗೊಳಿಸಲು ಸಂಕಲ್ಪ ತೊಟ್ಟಿದ್ದೇವೆ. ನಮ್ಮ ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸಹಕರಿಸಬೇಕು. ಮುಂದಿನ ದಿನಗಳಲ್ಲಿ ಕಾನೂನು ಬಾಹಿರವಾಗಿ ಬ್ಯಾನರ್ ಹಾಕುವವರ ಮೇಲೆ ಕೆಎಂಸಿ ಕಾಯ್ದೆಯ ಪ್ರಕಾರ ದಂಡ ಹಾಕಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.







