ತುಮಕೂರು: ಸಂವಿಧಾನ ಸುಟ್ಟ ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿ ಧರಣಿ

ತುಮಕೂರು,ಆ.11: ದೆಹಲಿಯ ಜಂತರ್ ಮಂತರ್ ನಲ್ಲಿ ಸಂವಿಧಾನದವನ್ನು ಸುಟ್ಟುಹಾಕಿದ ದೇಶದ್ರೋಹಿಗಳನ್ನು ಕೂಡಲೇ ಬಂಧಿಸಬೇಕು. ಕಾನೂನು ರೀತಿಯಲ್ಲಿ ವಿರುದ್ಧ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿ ದಲಿತಪರ ಹಾಗೂ ಜನಪರ ಸಂಘಟನೆಗಳ ನೂರಾರು ಕಾರ್ಯಕರ್ತರು ತುಮಕೂರು ನಗರದ ಟೌನ್‍ಹಾಲ್‍ನಲ್ಲಿ ಪ್ರತಿಭಟನೆ ನಡೆಸಿದರು.
ಟೌನ್‍ಹಾಲ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದ ನೂರಾರು ಮಂದಿ, ಸಂವಿಧಾನವನ್ನು ಸುಡುವ ಮೂಲಕ ದೇಶದಲ್ಲಿ ಅಶಾಂತಿಗೆ ಕಾರಣರಾಗಿದ್ದಾರೆ. ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು. ಸಂವಿಧಾನ ಪ್ರತಿಯನ್ನು ಸುಟ್ಟ ಕಿಡಿಗೇಡಿಗಳ ವಿರುದ್ದ ಧಿಕ್ಕಾರ ಕೂಗಿದರು.
ಬಿಎಸ್‍ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗಧಾಮಯ್ಯ ಮಾತನಾಡಿ, ಸಂವಿಧಾನದ ಪ್ರತಿಗಳನ್ನು ಸುಟ್ಟ ಆರೋಪಿಗಳನ್ನು ದೇಶದ್ರೋಹ ಕಾಯ್ದೆಯಡಿ ಬಂಧಿಸಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟಿರುವ ಸಂವಿಧಾನದಲ್ಲಿ ಹಿಂದುಳಿದ ವರ್ಗಗಳಿಗೆ 27ರಷ್ಟು, ಎಸ್‍ಸಿ ಮತ್ತು ಎಸ್‍ಟಿ ಸಮುದಾಯಕ್ಕೆ 18ರಷ್ಟು ಮೀಸಲಾತಿಯ ಜೊತೆಗೆ ಈ ದೇಶದ ಪ್ರತಿಯೊಬ್ಬರೂ ಕೂಡ ಸಂವಿಧಾನದ ಆಶಯದಂತೆ ಮೀಸಲಾತಿ ಪಡೆಯುತ್ತಿದ್ದಾರೆ ಎಂಬುದನ್ನು ಎಲ್ಲರೂ ಪರಿಗಣಿಸಬೇಕು. ಸಂವಿಧಾನವನ್ನು ಸುಡುವ ಮೂಲಕ ಸಾಮಾಜಿಕ ನ್ಯಾಯದ ಆಶಯಕ್ಕೆ ಧಕ್ಕೆ ತರಲಾಗಿದೆ. ಈ ದೇಶದ ಸಂವಿಧಾನದಿಂದ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಲಭಿಸಿದೆ. ಆದರೆ ಇಂತಹ ಸಂವಿಧಾನವನ್ನು ಸುಟ್ಟಿರುವುದು ಮುಂದಿನ ದಿನಗಳಲ್ಲಿ ದಲಿತರು ಮತ್ತು ಹಿಂದುಳಿದ ವರ್ಗದವರಿಗೆ ಕಷ್ಟವಾಗಲಿದೆ ಎಂದರು.
ಸಿಪಿಎಂ ನಾಯಕ ಸೈಯದ್ ಮುಜೀಬ್ ಮಾತನಾಡಿ, ಸಂವಿಧಾನ ವಿರೋಧಿಸುವ ಮನಸ್ಸುಗಳೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಇದುವರೆಗೆ ಸಂವಿಧಾನವನ್ನು ಯಾರು ವಿರೋಧಿಸಿಕೊಂಡು ಬಂದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ಸಂವಿಧಾನ ಸುಡುವ ಮೂಲಕ ಅಲ್ಪಸಂಖ್ಯಾತರು ಮತ್ತು ದಲಿತರಿಗೆ ಅಪಾಯ ಬಂದಿದೆ. ಹೀಗಾಗಿ ದಲಿತರು ಅಲ್ಪಸಂಖ್ಯಾತರು ಮತ್ತು ಹಿಂದುಳಿದವರು ಒಂದಾಗಿ ಹೋರಾಟ ನಡೆಸಿ ದುಷ್ಟ ಶಕ್ತಿಗಳನ್ನು ದಮನ ಮಾಡಬೇಕು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷ ಎ.ನರಸಿಂಹಮೂರ್ತಿ, ದಲಿತ ಮುಖಂಡ ಕೇಬಲ್ ರಘು, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಡಿವೈಎಫ್‍ಐ ಜಿಲ್ಲಾಧ್ಯಕ್ಷ ಎಸ್.ರಾಘವೇಂದ್ರ ಯುವ ಮುಖಂಡ ದರ್ಶನ್, ಪ್ರಾಂತ ರೈತ ಸಂಘದ ಸಹ ಸಂಚಾಲಕರಾದ ಬಿ.ಉಮೇಶ್, ನೌಷಾದ್ ಸೆಹಗನ್, ಉಪನ್ಯಾಸಕ ಲಕ್ಷ್ಮೀರಂಗಯ್ಯ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.







