ಸಾಮಾಜಿಕ ಪ್ರಜ್ಞೆ ಇಲ್ಲದ ಸಾಹಿತ್ಯ ಬಹುದಿನ ಉಳಿಯುವುದಿಲ್ಲ: ಸಾಹಿತಿ ಎನ್.ನಾಗಪ್ಪ
ತುಮಕೂರು,ಆ.11: ಸಾಮಾಜಿಕ ಪ್ರಜ್ಞೆ ಇಲ್ಲದ ಸಾಹಿತ್ಯ ಬಹುದಿನಗಳ ಕಾಲ ಜನಮಾನಸದಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಸಾಹಿತಿ ಎನ್.ನಾಗಪ್ಪ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕನ್ನಡ ಭವನದಲ್ಲಿ ಸ್ನೇಹ ಕ್ರೀಡಾ ಮತ್ತು ಸಾಂಸ್ಕೃತಿಕ ಗ್ರಾಮೀಣಾಭಿವೃದ್ದಿ ಸಂಸ್ಥೆ ಹಮ್ಮಿಕೊಂಡಿದ್ದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕವಿಗೆ ಸಾಮಾಜಿಕ ಪ್ರಜ್ಞೆ ಇರಬೇಕು. ಸಾಮಾಜಿಕ ಪ್ರಜ್ಞೆಯಿಂದ ರಚನೆಯಾದ ಕಾವ್ಯ ಜನಮನ ಮುಟ್ಟುತ್ತದೆ. ಸಾಮಾಜಿಕ ಪ್ರಜ್ಞೆಯೇ ಇರದೆ ಎಷ್ಟೇ ಬರೆದು ದೊಡ್ಡ ಕವಿಯಾದರೂ ಆತ ಜನಮನದ ನಡುವೆ ಇರಲು ಸಾಧ್ಯವಿಲ್ಲ ಎಂದರು.
ಯಾವುದೇ ಕವಿಗೆ ಅಕ್ಷರದ ಅಹಂಕಾರ ಇರಬಾರದು. ವಿನಯವಂತಿಕೆ ಇರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಇಂಥವರ ಸಂಖ್ಯೆ ಹೆಚ್ಚುತ್ತಿದೆ. ಕವಿ ಎಷ್ಟು ಬರೆದೆ ಎನ್ನುವುದಕ್ಕಿಂತ ಏನನ್ನು ಬರೆದೆ ಎಂಬುದು ಮುಖ್ಯವಾಗುತ್ತದೆ. ಹಾಗಾಗಿ ಕವಿ ಬದುಕಿ ಬರೆಯಬೇಕು. ಬರೆದು ಬದುಕಿದರೆ ಟೊಳ್ಳು ಹೆಚ್ಚಾಗಿರುತ್ತದೆ. ಪಂಚ ಮತ್ತು ವಚನಕಾರರು ಬದುಕಿ ಬರೆದರು. ಆದ್ದರಿಂದ ಹತ್ತನೇ ಶತಮಾನ ಮತ್ತು ಹನ್ನೊಂದನೇ ಶತಮಾನದ ಸಾಹಿತ್ಯ ಗಟ್ಟಿತನದಿಂದ ಕೂಡಿದೆ. ಕವಿಗಳು ವಚನಕಾರರಂತೆ ಬದುಕಿ ಬರೆಯಬೇಕು ಎಂದು ಕಿವಿಮಾತು ಹೇಳಿದರು.
ಹತ್ತನೇ ಶತಮಾನದಲ್ಲಿ ಆದಿಕವಿ ಪಂಪ ಹೇಳಿದ ಮಾನವ ಕುಲಂ ತಾನೊಂದೆ ವಲಂ ಎಂಬುದು ಇಂದಿಗೂ ಪ್ರಸ್ತುತ. ಆತ ಹೆಣ್ಣು ಗಂಡೆಂಬ ಬೇಧವನ್ನು ಎಣಿಸಲಿಲ್ಲ. ಮಾನವ ಜಾತಿ ಒಂದೇ. ಅದನ್ನು ಮುಂದುವರಿಸಿಕೊಂಡು ಹೋಗಬೇಕು. ಆದರೆ ಇಂದು ಕೆಡುವ ಸಂಸ್ಕೃತಿ ಹೆಚ್ಚಾಗಿದ್ದು, ಇದನ್ನು ನಿವಾರಣೆ ಮಾಡಲು ಕಟ್ಟುವ ಸಂಸ್ಕೃತಿಯನ್ನು ಮುನ್ನೆಲೆಗೆ ತರಬೇಕು. ಕವಿಗೆ ಬದ್ಧತೆ ಇರಬೇಕು. ಬದ್ಧತೆಯ ಜೊತೆಗೆ ವಾಸ್ತವದ ನೆಲೆಗಟ್ಟಿನಲ್ಲಿ ವೈಜ್ಞಾನಿಕವಾಗಿ ವೈಚಾರಿಕವಾಗಿ ಬರೆಯಬೇಕು ಮತ್ತು ಮಾತನಾಡಬೇಕು. ಕವಿಯಾದವರು ಮನುಷ್ಯರನ್ನು ಮನುಷ್ಯರಂತೆ ಕಾಣುವ ಗುಣ ಇರಬೇಕು. ಆದರೆ ಕೆಲವರು ಒಂದೆರಡು ಕವನಗಳನ್ನು ಬರೆದು ತಾನು ಮಹಾನ್ ಕವಿಯೆಂಬಂತೆ ಬೀಗುತ್ತಿದ್ದಾರೆ ಎಂದು ಎನ್.ನಾಗಪ್ಪ ವಿಷಾದ ವ್ಯಕ್ತಪಡಿಸಿದರು.
ವಕೀಲ ರವೀಂದ್ರನಾಥ್ ಟಾಗೋರ್ ಮಾತನಾಡಿ, ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ವ್ಯವಸ್ಥೆ ಬದಲಾಗಿಲ್ಲ. ಜಾತಿ ವ್ಯವಸ್ಥೆ ಹಾಗೆಯೇ ಇದೆ. ರಾಜಕಾರಣಿಗಳು ಇದ್ದಹಾಗೆಯೇ ಇದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಕವಿಗೋಷ್ಟಿಯಲ್ಲಿ ಲೇಖಕ ಈಚನೂರು ಇಸ್ಮಾಯಿಲ್, ಕವಿಗಳಾದ ಎಂ.ಸಿ.ಲಲಿತ, ಅಬ್ಬಿನಹೊಳೆ ಸುರೇಶ್, ಮುದೇನೂರು ನಂಜಪ್ಪ ಕುಲಕರ್ಣಿ, ಇಂದಿರಾ ಸಣ್ಣಮುದ್ದಯ್ಯ, ಗಂಗಾಧರ್ ಕೊಡ್ಲಿ, ಸಿರಿವರ ಶಿವರಾಮಯ್ಯ, ಸಾಗ್ಗೆರೆ ಮಲ್ಲಿಕಾರ್ಜುನ ಮೊದಲಾದವರು ಕವನ ವಾಚನ ಮಾಡಿದರು.