ತುಮಕೂರು: ನೇಣು ಬಿಗಿದು ರೈತ ಆತ್ಮಹತ್ಯೆ
ತುಮಕೂರು, ಆ.11: ಸಾಲಬಾಧೆ ತಾಳಲಾರದೆ ರೈತನೋರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ರಾಮಾಂತರದ ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.
ತಾಲೂಕಿನ ಕೋರಾ ಹೋಬಳಿ ಕಾಟೇನಹಳ್ಳಿ ಗ್ರಾಮದ ರೈತ ಸಿದ್ದರಾಮಯ್ಯ(65) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಗಿರೇನಹಳ್ಳಿಯ ಸಿಂಡಿಕೇಟ್ ಬ್ಯಾಂಕಿನಲ್ಲಿ 7.5 ಲಕ್ಷ, ಕೆಸ್ತೂರು ವಿಎಸ್‍ಎಸ್‍ಎನ್ ನಲ್ಲಿ 50 ಸಾವಿರ ಕೃಷಿಸಾಲ ಹಾಗೂ ಇತರೆ ಕೈಸಾಲವೂ ಸೇರಿದಂತೆ 10 ಲಕ್ಷ ರೂ.ಸಾಲ ಮಾಡಿರುವುದಾಗಿ ಸ್ಥಳೀಯ ಮೂಲದಿಂದ ತಿಳಿದು ಬಂದಿದ್ದು, ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಸತತ ಬರಗಾಲದಿಂದ ತತ್ತರಿಸಿರುವ ತುಮಕೂರು ತಾಲೂಕು ಕೋರಾ ಹೋಬಳಿ ಕಾಟೇನಹಳ್ಳಿಯಲ್ಲಿ ಕೃಷಿಗಾಗಿ ಸಾಲ ಮಾಡಿಕೊಂಡಿದ್ದು, ಕೃಷಿಯಲ್ಲಿ ನಿರೀಕ್ಷಿಸಿದಷ್ಟು ಬೆಳೆ ಬಾರದ ಹಿನ್ನಲೆಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಶನಿವಾರ ಮಧ್ಯಾಹ್ನ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಸಿಪಿಐ ಮಧುಸೂಧನ್, ಕೋರಾ ಪಿಎಸ್‍ಐ ರವಿಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಈ ಸಂಬಂಧ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.