ದಾವಣಗೆರೆ: ವ್ಯಸನ ಮುಕ್ತ, ಆರೋಗ್ಯ ಯುಕ್ತ ಜೀವನಕ್ಕಾಗಿ ಜಯದೇವ ಜೋಳಿಗೆ ಅಭಿಯಾನ

ದಾವಣಗೆರೆ,ಆ.11: ಉತ್ತಮ ಸಂಸ್ಕಾರ, ಜ್ಞಾನ ಮೌಲ್ಯಗಳನ್ನು ತುಂಬಿಕೊಂಡು ಸುಖಕರ ಜೀವನ ನಡೆಸುವಂತೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಲಹೆ ನೀಡಿದರು.
ನಗರದ ಕೊಂಡಜ್ಜಿ ರಸ್ತೆಯ ಮಾರುತಿ ಮಂದಿರ ಎದುರಿನ ಸವಿತಾ ಮಹರ್ಷಿ ಸಮುದಾಯ ಭವನದಲ್ಲಿ ಬೆಳಗ್ಗೆ ಬಸವ ಕೇಂದ್ರ, ಶ್ರೀ ಮುರುಘ ರಾಜೇಂದ್ರ ವಿರಕ್ತಮಠ, ಸವಿತಾ ಸಮಾಜ ಸಂಘ, ಗದ್ವಾಲ್ ಜಮುಲಮ್ಮ ಸೇವಾ ಸಂಘ ಆಶ್ರಯದಲ್ಲಿ ವ್ಯಸನ ಮುಕ್ತ, ಆರೋಗ್ಯ ಯುಕ್ತ ಜೀವನಕ್ಕಾಗಿ ಜಯದೇವ ಜೋಳಿಗೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿನ ತಿಜೋರಿಯಲ್ಲಿ ಬೆಲೆ ಬಾಳುವ ಬೆಳ್ಳಿ, ಬಂಗಾರ, ರೇಷ್ಮೆ ಸೀರೆ, ಬಟ್ಟೆಗಳನ್ನು ಇಡುತ್ತಾರೆ ವಿನಃ, ಕಸವನ್ನು ಇಡುವುದಿಲ್ಲ. ಅದರಂತೆ ಬೆಲೆ ಕಟ್ಟಲಾಗದಂತಹ ದೇಹವೆಂಬ ನಮ್ಮ ತಿಜೋರಿಯಲ್ಲಿ ಒಳ್ಳೆಯ ಸಂಸ್ಕಾರ, ಆಚಾರ, ವಿಚಾರಗಳನ್ನು ಇಡಬೇಕೆಂದು ಕರೆ ನೀಡಿದರು.
ದುಶ್ಚಟಗಳಿಗೆ ದಾಸರಾದರೆ ಕಣ್ಣು, ಕವಿ, ಕಿಡ್ನಿ, ಹೃದಯ ಹಾಳಾಗುತ್ತವೆ. ಕ್ಯಾನ್ಸರ್ ಬರುತ್ತದೆ. ಬೆಲೆಬಾಳುವ ಅಂಗಾಂಗ ಊನವಾದರೆ ಮರು ಸೃಷ್ಠಿ ಅಸಾಧ್ಯ. ಹಾಳಾದ ನಮ್ಮ ದೇಹದ ಪ್ರಮುಖ ಅಂಗಗಳನ್ನು ಯಾರೂ ಕೊಡುವುದಿಲ್ಲ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇರುವುದರಿಂದ ಅದನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕೆಂದರು.
ಇತ್ತಿಚೆಗೆ ಯುವಕರು, ಬಡವರು ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಬೀಡಿ, ತಂಬಾಕು, ಸಾರಾಯಿ, ಗುಟ್ಕಾ ಸೇವನೆ ಮಾಡುತ್ತಾ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವು ಯುವಕರು ಚಿತ್ರ ತಾರೆಯರ ಸ್ಟೈಲ್‍ಗಳನ್ನು ಅನುಕರಣೆ ಮಾಡಲು ಹೋಗಿ ಹಾಳಾಗುತ್ತಿದ್ದಾರೆ ಎಂಬ ಆತಂಕ ವ್ಯಕ್ತಪಡಿಸಿದರು.
ಜಯದೇವ ಜೋಳಿಗೆ ಕಾರ್ಯಕ್ರಮ ಕಳೆದ 10 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಪವಿತ್ರವಾದ ಶ್ರಾವಣ ಮಾಸ ಭಕ್ತಿಗೆ ಸುಗ್ಗಿಯ ಕಾಲವಿದ್ದಂತೆ. ಈ ತಿಂಗಳಲ್ಲಿ ದುಶ್ಚಟಗಳಿಂದ ದೂರ ಉಳಿದರೆ, ಜೀವನ ಪರ್ಯಂತ ಅವುಗಳಿಂದ ದೂರ ಉಳಿಯಲು ಸಾಧ್ಯವಾಗುತ್ತದೆ. ನಮ್ಮ ಅಭಿಯಾನದಿಂದ ಹಲವಾರು ಯುವಕರು ಬೀಡಿ, ತಂಬಾಕು ಸೇವನೆಯಿಂದ ದೂರ ಉಳಿದು, ಆರೋಗ್ಯಕರ ಜೀವನ ಸಾಗಿಸುತ್ತಿದ್ದಾರೆ. ಅವರ ಕುಟುಂಬದವರು ನೆಮ್ಮದಿಯಿಂದ ಇದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪರಿಣಾಮ ಎಲ್ಲರ ಮೇಲೆ ಬಿರಲಿದೆ. ದಾವಣಗೆರೆ ನಗರ ದುಶ್ವಟ ಮುಕ್ತ ನಗರವಾಗಬೇಕು ಎಂಬುದೇ ನಮ್ಮ ಆಶಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮೇಯರ್ ಶೋಭಾ ಪಲ್ಲಾಗಟ್ಟೆ, ಪಾಲಿಕೆ ಮಾಜಿ ನಗರಸಭಾಧ್ಯಕ್ಷ ಬಿ.ವೀರಣ್ಣ, ಶಿವಾನಂದಪ್ಪ ಪಲ್ಲಾಗಟ್ಟೆ, ಸವಿತಾ ಸಮಾಜ ಸಂಘದ ಅದ್ಯಕ್ಷ ಎನ್.ರಂಗಸ್ವಾಮಿ, ಗದ್ವಾಲ್ ಜಮುಲಮ್ಮ ಸೇವಾ ಸಂಘದ ಅಧ್ಯಕ್ಷ ಜಿ.ಎಸ್.ಪರಶುರಾಮ್, ಕರಿಬಸಪ್ಪ, ಆರ್, ಎನ್.ಜೆ.ಶಿವಕುಮಾರ್, ಎಂ.ಬಸವರಾಜ್, ಎಸ್.ಜಿ.ಸಂಗಪ್ಪ, ಚನ್ನಬಸವ ಶೀಲವಂತ, ಉಮೇಶ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಜಯದೇವ ಜೋಳಿಗೆ ಅಭಿಯಾನವು ನಗರದ ಸವಿತಾ ಮಹರ್ಷಿ ಸಮುದಾಯ ಭವನದಿಂದ ಕೊಂಡಜ್ಜಿ ರಸ್ತೆಯಿಂದ ವಾಲ್ಮೀಕಿ ವೃತ್ತದವರೆಗೆ ನಡೆಯಿತು.







