ದಾವಣಗೆರೆ: ಜಿಲ್ಲೆಗೆ ಆಗಮಿಸಿದ ರಾಜೀವ್ ಜ್ಯೋತಿ ಸದ್ಭಾವನಾ ಯಾತ್ರೆ
ದಾವಣಗೆರೆ,ಆ.11: ದಾವಣಗೆರೆಗೆ ರಾಜೀವ್ ಜ್ಯೋತಿ ಸದ್ಭಾವನಾ ಯಾತ್ರೆಯು ಇಂದು ಆಗಮಿಸಿದ್ದು, ಬೆಳಗ್ಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸ್ವಾಗತಿಸಿ ಯಾತ್ರೆಯ ಮೆರವಣಿಗೆ ನಡೆಸಲಾಯಿತು.
ಯಾತ್ರೆಯನ್ನು ಸ್ವಾಗತಿಸಿ ಮಾತನಾಡಿದ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ರಾಜೀವ್ ಗಾಂಧಿ ಅವರ ಜನ್ಮದಿನದ ಪ್ರಯುಕ್ತ ಕಳೆದ 27 ವರ್ಷದಿಂದ ಕೆಪಿಸಿಸಿಯ ಕಾರ್ಮಿಕ ವಿಭಾಗದಿಂದ ಈ ಯಾತ್ರೆಯನ್ನು ರಾಜೀವ್ ಗಾಂಧಿ ಹತ್ಯೆಗೀಡಾದ ಪೆರಂಬೂರಿನಿಂದ ಆರಂಭಿಸಿ ದೇಶದ ವಿವಿಧ ಕಡೆಗಳಲ್ಲಿ ನಡೆಸಿ ರಾಜೀವ್ ಗಾಂಧಿ ಅವರ ಜನ್ಮದಿನವಾದ ಆಗಸ್ಟ್ 20 ರಂದು ದೆಹಲಿಗೆ ಕೊಂಡ್ಯೊಯಲಾಗುತ್ತದೆ. ಈ ವರ್ಷವೂ ದೇಶದಲ್ಲಿನ ಅಶಾಂತಿ, ಭಯೋತ್ಪಾದನೆ, ಕೋಮುಭಾವನೆಗಳ ವಿರುದ್ಧವಾಗಿ ಈ ಯಾತ್ರೆ ನಡೆಯುತ್ತಿದ್ದು, ಯಾತ್ರೆಯು ಹೋಗುವ ವಿವಿಧ ರಾಜ್ಯಗಳಲ್ಲಿ ಭಯೋತ್ಪಾದನೆ, ಕೋಮು ಭಾವನೆಗಳ ವಿರುದ್ಧ ಅರಿವು ಮೂಡಿಸಲಾಗುತ್ತಿದೆ ಎಂದರು.
ಯಾತ್ರೆಯ ನೇತೃತ್ವ ವಹಿಸಿರುವ ಕೆಪಿಸಿಸಿಯ ಕಾರ್ಮಿಕ ವಿಭಾಗದ ಅಧ್ಯಕ್ಷ ಎಸ್.ಎಸ್.ಪ್ರಕಾಶ್ ಮಾತನಾಡಿ, ಆಗಸ್ಟ್ 9 ರಿಂದ ತಮಿಳುನಾಡಿನ ಪೆರಂಬೂರಿನಿಂದ ಆರಂಭಗೊಂಡಿರುವ ಈ ಯಾತ್ರೆ 9 ರಾಜ್ಯಗಳಲ್ಲಿ ಸಂಚರಿಸಿ ಆಗಸ್ಟ್ 20 ರಂದು ದೆಹಲಿಗೆ ತೆರಳಲಿದ್ದು, ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರು ರಾಜೀವ್ ಜ್ಯೋತಿಯನ್ನು ಸ್ವೀಕರಿಸುವರು. ನಂತರ ದೆಹಲಿಯ ವೀರಭೂಮಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಾಗುವುದು ಎಂದರು.
ಮಹಾಪೌರರಾದ ಶ್ರೀಮತಿ ಶೋಭಾ ಪಲ್ಲಾಗಟ್ಟೆ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಜಿ.ಶಿವಕುಮಾರ್, ಕಾರ್ಯದರ್ಶಿ ಎ.ನಾಗರಾಜ್, ಯುವ ಕಾಂಗ್ರೆಸ್‍ನ ಸೈಯದ್ ಖಾಲಿದ್, ಸೇವಾದಳದ ಆಲೂರು ಡಿ.ಶಿವಕುಮಾರ್, ಕಾಳಿಂಗರಾಜು, ಅನಿಲ್ ಗೌಡ್ರು, ಚಂದನ್, ಶ್ರೀಕಾಂತ್ ಬಗರೆ, ಗೋಪಾಲ್, ಎನ್‍ಎಸ್‍ಯುಐನ ಮುಜಾಹಿದ್, ವೀಣಾ ಮಂಜುನಾಥ್, ಮಹಿಳಾ ಘಟಕ, ಯುವ ಕಾಂಗ್ರೆಸ್, ಸೇವಾದಳ ಮತ್ತು ಎನ್‍ಎಸ್‍ಯುಐನ ನೂರಾರು ಕಾರ್ಯಕರ್ತರು, ಜನಪ್ರತಿನಿಧಿಗಳು, ಮುಖಂಡರುಗಳು ಭಾಗವಹಿಸಿದ್ದರು.







