ನಮ್ಮನ್ನು ನಾವು ಸಂಶೋಧನೆಯಲ್ಲಿ ತೊಡಗಿಸಿಕೊಂಡ ಉತ್ತಮ ಫಲಿತಾಂಶ ದೊರಕುತ್ತದೆ: ಡಾ.ದಿನೇಶ್ ಶೆಟ್ಟಿ

ಮೂಡುಬಿದಿರೆ, ಆ 11: ಸಂಶೋಧನೆಯು ಸುಲಭದ ಕೆಲಸವಲ್ಲ, ಕೇವಲ ಉದ್ಯೋಗಕ್ಕಾಗಿ ಸಂಶೋಧನೆಯನ್ನು ಅವಲಂಬಿಸದೆ ಸ್ವತಃ ಆಸಕ್ತಿಯಿಂದ ನಮ್ಮನ್ನು ನಾವು ಸಂಶೋಧನೆಯಲ್ಲಿ ತೊಡಗಿಸಿಕೊಂಡಾಗ ಉತ್ತಮ ಫಲಿತಾಂಶ ದೊರಕುತ್ತದೆ ಎಂದು ಯು.ಎ.ಇ. ಅಬುಧಾಬಿ ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿಜ್ಞಾನಿ ಡಾ.ದಿನೇಶ್ ಶೆಟ್ಟಿ ಹೇಳಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಐ.ಕ್ಯೂ.ಎ.ಸಿ.ಅಡಿಯಲ್ಲಿ ಬಯೋಕೆಮಿಸ್ಟ್ರಿ ವಿಭಾಗವು ಆಯೋಜಿಸಿದ್ದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ "ಫ್ರಾಮ್ ಒರಗ್ಯಾನಿಕ್ ಕೆಮೆಸ್ಟ್ರಿ ಟೂ ಏನ್ ಇಂಟರ್‌ಡಿಸಿಪ್ಲಿನರಿ ಸೈನ್ಸ್: ಏ ಫ್ರುಟ್ಫುಲ್ ಜರ್ನಿ’’ ಎಂಬ ವಿಷಯದ ಕುರಿತು ಇವರು ಉಪನ್ಯಾಸ ನೀಡಿದರು.
ಇಂದಿನ ಶಿಕ್ಷಣ ವ್ಯವಸ್ಥೆಯು ಪರೀಕ್ಷೆ, ಅಂಕಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಆದರೆ ಕೇವಲ ಅಂಕಗಳು ಸಂಶೋಧನೆಗೆ ಪ್ರಯೋಜನವಾಗುವುದಿಲ್ಲ. ಪ್ರತಿಯೊಬ್ಬರು ಅನೇಕ ವಿಷಯವನ್ನು ಗಮನಿಸುತ್ತಾರೆ. ಆದರೆ ಎಲ್ಲರೂ ಆ ವಿಷಯದ ಬಗ್ಗೆ ತಿಳಿದುಕೊಳ್ಳಲು ಹೋಗುವುದಿಲ್ಲ. ನಾವು ಯಾವ ವಿಷಯದ ಬಗ್ಗೆ ಸಂಶೋಧನೆ ಮಾಡಬೇಕೆಂಬುವುದನ್ನು ನಾವೇ ಯೋಚಿಸಬೇಕು. ಸಂಶೋಧನಾ ವಿಷಯವನ್ನು ಮಾರ್ಗದರ್ಶಕರಿಂದ ಪಡೆಯುವುದು ದೊಡ್ಡ ಮೂರ್ಖತನ. ಸಂಶೋಧನಾ ವಿಷಯದ ಬಗ್ಗೆ ಅರಿವಿಲ್ಲದೆ ಮಾಡುವ ಸಂಶೋದನೆಯು ವ್ಯರ್ಥವಾಗುತ್ತದೆ.
ವೈದ್ಯಕೀಯ ಕ್ಷೇತ್ರವು ಜನರಿಗೆ ಸೇವೆಯನ್ನು ನೀಡಲು ಇರುವ ಒಂದು ಮುಖ್ಯಕ್ಷೇತ್ರ. ವಿಜ್ಞಾನದ ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಯನ್ನು ಮಾಡುವುದು ಉತ್ತಮ. ರೋಗವನ್ನು ಮೊದಲ ಹಂತದಲ್ಲೇ ಪತ್ತೆ ಹಚ್ಚದಿರುವುದು ನಮ್ಮ ದೇಶದ ದೊಡ್ಡ ಸಮಸ್ಯೆ. ನಾವು ಯಾವುದೇ ರೋಗವನ್ನು ಮೊದಲ ಹಂತದಲ್ಲಿ ಪತ್ತೆ ಹಚ್ಚಿ ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ಪಡೆಯುವುದರಿಂದ ಅನೇಕ ರೀತಿಯ ಕ್ಯಾನ್ಸರ್‌ಗಳನ್ನು ಗುಣಪಡಿಸಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಶುಂಪಾಲ ಡಾ. ಕುರಿಯನ್ ಮಾತನಾಡಿ "ಹೆಚ್ಚಿನ ಆವಿಷ್ಕಾರಗಳು ತಪ್ಪುಗಳಿಗಳಿಂದಲೇ ಆಗಿವೆ. ವಿದ್ಯಾರ್ಥಿಗಳು ಹೊಸ ಹೊಸ ವಿಷಯವನ್ನು ಹುಡುಕಿ ವಿಭಿನ್ನವಾದ ಫಲಿತಾಂಶವನ್ನು ಪಡೆಯುವುದರಿಂದ ಹೊಸ ಹೊಸ ಸಂಶೋಧನೆಯು ಸಾಧ್ಯವಾಗುತ್ತದೆ. ಈ ನಿಟ್ಟಿ ನಲ್ಲಿ ಡಾ.ದಿನೇಶ್ ಶೆಟ್ಟಿಯವರ ಸಂಶೋಧನಾ ಪಯಣವು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಜ್ಞಾನ ವಿಭಾಗದ ಡೀನ್ ರಮ್ಯ ರೈ ಹಾಗೂ ಬಯೋಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥೆ ಡಾ.ಉಷಾ. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ತೃತೀಯ ಬಿ.ಎಸ್ಸಿ ವಿಭಾಗದ ಆಯಾನ ನಿರೂಪಿಸಿ, ತೃಪ್ತಿ ಸ್ವಾಗತಿಸಿ, ದೇವಿಕಾ ಧನ್ಯವಾದ ಸರ್ಮಪಿಸಿದರು.







