ಅಂತರ್ಜಲ ಮಟ್ಟ ಏರಿಕೆಯಿಂದ ಮನೆಗಳಿಗೆ ಹಾನಿ: ಕೊಡಗಿನಲ್ಲಿ ಮುಗಿಯದ ಸಂಕಷ್ಟ

ಮಡಿಕೇರಿ ಆ.11: ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ಸುರಿದ ಮಹಾಮಳೆಗೆ ನಲುಗಿರುವ ಕೊಡಗು ಜಿಲ್ಲೆ ಕಳೆದ 24 ಗಂಟೆಗಳಿಂದ ಸಾಧಾರಣ ಮಳೆಗೆ ಮೈಯೊಡ್ಡಿದೆಯಾದರೂ ಕಷ್ಟ, ನಷ್ಟಗಳ ಪ್ರಮಾಣ ಹೆಚ್ಚಾಗುತ್ತಲೇ ಇದೆ.
ಭಾಗಮಂಡಲ, ತಲಕಾವೇರಿ ವ್ಯಾಪ್ತಿಯಲ್ಲಿ 250 ಇಂಚಿಗೂ ಹೆಚ್ಚಿನ ಮಳೆ ಕಳೆ ಒಂದು ತಿಂಗಳಿನಲ್ಲೇ ಸುರಿದಿದ್ದು, ಮಡಿಕೇರಿ ತಾಲೂಕಿನಲ್ಲಿ ದಾಖಲೆಯ 160 ಇಂಚಿಗೂ ಅಧಿಕ ಮಳೆಯಾಗಿದೆ. ಅತ್ಯಂತ ಸೂಕ್ಷ್ಮ ಪರಿಸರ ವಲಯವನ್ನು ಹೊಂದಿರುವ ಕೊಡಗು ಇತ್ತೀಚಿನ ವರ್ಷಗಳಲ್ಲಿ ಇಷ್ಟು ಪ್ರಮಾಣದ ಮಳೆಯ ದಾಳಿಯನ್ನು ತಡೆದುಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದೆ. ಬೆಟ್ಟಗುಡ್ಡಗಳಲ್ಲಿ ನಿರ್ಮಾಣಗೊಂಡಿರುವ ಕಾಂಕ್ರಿಟ್ ಕಟ್ಟಡಗಳು ಹಾಗೂ ಪರಿಸರ ಅಸಮತೋಲನದಿಂದ ಮಳೆಯ ಪ್ರಮಾಣದಲ್ಲಿ ಏರುಪೇರಾಗುತ್ತಿದ್ದು, ಕಳೆದ ವರ್ಷ ಬರಗಾಲದ ಪರಿಸ್ಥಿತಿಯಲ್ಲಿದ್ದ ಜಿಲ್ಲೆ ಇಂದು ಅತಿವೃಷ್ಟಿಯಿಂದ ನಲುಗಿ ಹೋಗಿದೆ.
ಎಡೆಬಿಡದೆ ಸುರಿದ ಮಳೆಯಿಂದಾಗಿ ಅಂತರ್ಜಲ ಮಟ್ಟ ಹೆಚ್ಚಾಗಿ ಗ್ರಾಮೀಣ ಭಾಗದ ಬೆಟ್ಡಗುಡ್ಡಗಳ ಮೇಲೆ ಮತ್ತು ತಗ್ಗು ಪ್ರದೇಶದ ಮನೆಗಳು ಆತಂಕವನ್ನು ಎದುರಿಸುತ್ತಿವೆ. ಅನೇಕ ಮನೆಗಳು ಬಿರುಕು ಬಿಟ್ಟಿದ್ದರೆ ಕೆಲವು ಮನೆಗಳ ಗೋಡೆಗಳು ಬಿದ್ದಿವೆ. ಬರೆ ಕುಸಿತದ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿದ್ದು, ಮನೆಗಳ ಹಾನಿಗೆ ಇದೂ ಒಂದು ಕಾರಣವಾಗಿದೆ.
ಕುಸಿದ ಮನೆಗೋಡೆ
ಕಾಟಕೇರಿಯ ಯಮುನಾ ಎಂಬುವವರ ಮನೆಯ ಆವರಣವನ್ನು ಜಲ ಆವರಿಸಿದ್ದು, ಅತಿಯಾದ ಶೀತದಿಂದ ಮನೆಯ ಗೋಡೆಗಳು ಬಿದ್ದಿವೆ. ವಾಸ ಮಾಡಲಾಗದಷ್ಟು ಮನೆ ಹಾನಿಗೀಡಾಗಿದ್ದು, ಮನೆಮಂದಿ ಪಕ್ಕದ ಮನೆಯವರ ಆಶ್ರಯ ಪಡೆದಿದ್ದಾರೆ.
ಮಕ್ಕಂದೂರಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ ಮಂಜುನಾಥ್ ಎಂಬುವವರ ಮನೆ ಅಪಾಯಕಾರಿ ಸ್ಥಿತಿಯಲ್ಲಿ ಬಿರುಕು ಬಿಟ್ಟಿತ್ತು. ಮನೆ ಮಂದಿ ಸ್ಥಳಾಂತರಗೊಂಡು ಹತ್ತು ದಿನಗಳಾಗಿದ್ದು, ಇದೀಗ ಮನೆಯ ಗೋಡೆಗಳು ಕುಸಿಯತೊಡಗಿವೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆಯೇ ಹೊರತು ಯಾವುದೇ ಪರ್ಯಾಯ ವ್ಯವಸ್ಥೆ ಅಥವಾ ಪರಿಹಾರದ ಭರವಸೆ ದೊರೆತ್ತಿಲ್ಲ.
ಇದೇ ರೀತಿ ಇನ್ನೂ ಕೆಲವು ಮನೆಗಳು ಅಪಾಯದಂಚಿನಲ್ಲಿದ್ದು, ನಿವಾಸಿಗಳು ನೆರವಿನ ನಿರೀಕ್ಷೆಯಲ್ಲಿದ್ದಾರೆ. ಮಡಿಕೇರಿ ನಗರದ ಬೆಟ್ಟದ ಮನೆಗಳು ಆತಂಕವನ್ನು ಎದುರಿಸುತ್ತಿದ್ದು, ಬರೆ ಕುಸಿತ ಮುಂದುವರೆದಿದೆ. ಗದ್ದೆ ಭಾಗದಲ್ಲಿರುವ ಮನೆಗಳಲ್ಲಿ ಜಲ ನೀರು ಚಿಮ್ಮುತ್ತಿದೆ. ಕೊಳವೆ ಬಾವಿಗಳಲ್ಲಿ ಕೂಡ ನೀರು ಚಿಮ್ಮುತ್ತಿದ್ದು, ಅಂತರ್ಜಲದ ಏರಿಕೆಗೆ ಜನ ತಲ್ಲಣಗೊಂಡಿದ್ದಾರೆ.
ಮಂಜು, ಶೀತಗಾಳಿ
ಮಡಿಕೇರಿ ನಗರ ವ್ಯಾಪ್ತಿಯಲ್ಲಿ ದಟ್ಟ ಮಂಜು ಮುಸುಕಿದ ವಾತಾವರಣವಿದ್ದು, ಶೀತ ಗಾಳಿ ಬೀಸುತ್ತಿದೆ. ಅತಿಯಾದ ಚಳಿಯಿಂದ ಜನ ಕಂಗೆಟ್ಟಿದ್ದಾರೆ. ಬಟ್ಟೆಗಳನ್ನು ಒಣಗಿಸಲಾಗದೆ ಪರಿತಪಿಸುತ್ತಿದ್ದಾರೆ. ಬೆಲೆ ಬಾಳುವ ವಸ್ತುಗಳು ಅತಿಯಾದ ಮಳೆಯಿಂದ ತಾಂತ್ರಿಕವಾಗಿ ದುರಸ್ತಿಗೀಡಾಗುತ್ತಿವೆ. ಮಹಾಮಳೆಯಿಂದ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ನಿರಂತರವಾಗಿ ಕಷ್ಟ, ನಷ್ಟಗಳು ಸಂಭವಿಸುತ್ತಿದ್ದು, ಜನರ ನೆಮ್ಮದಿ ಭಂಗವಾಗಿದೆ. ನಗರದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಚಾಲನೆ ಅಪಾಯಕಾರಿಯಾಗಿದೆ. ಮಂಜುಮುಸುಕಿದ ವಾತಾವರಣ ಅಪಾಯವನ್ನು ತಂದೊಡ್ಡುತ್ತಿದೆ.
ನಾಲ್ಕೂ ಕ್ರಸ್ಟ್ ಗೇಟ್‍ಗಳಿಂದ ನೀರು ಹೊರಕ್ಕೆ
ವಾರದ ಹಿಂದೆ ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆ ಹಾರಂಗಿ ಜಲಾಶಯದ ಮೂರು ಕ್ರಸ್ಟ್ ಗೇಟ್‍ಗಳನ್ನು ಬಂದ್ ಮಾಡಿ ಒಂದು ಗೇಟ್‍ನಿಂದ ಮಾತ್ರ ನೀರು ಹೊರ ಬಿಡಲಾಗುತ್ತಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ. ಈ ಕಾರಣದಿಂದ ಜಲಾಶಯದ ನಾಲ್ಕೂ ಕ್ರಸ್ಟ್ ಗೇಟ್‍ಗಳಿಂದ ನೀರನ್ನು ಹೊರ ಬಿಡಲಾಗುತ್ತಿದೆ.
ಮಳೆ ವಿವರ
ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 30.23 ಮಿ.ಮೀ. ಕಳೆದ ವರ್ಷ ಇದೇ ದಿನ 0.15 ಮಿ.ಮೀ. ಆಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 2839.32 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1344.55 ಮಿ.ಮೀ ಮಳೆಯಾಗಿತ್ತು.







