ಆಂಗ್ಲರಿಗೆ ಬೈರ್‌ಸ್ಟೋವ್-ವೋಕ್ಸ್ ಆಸರೆ
ದ್ವಿತೀಯ ಟೆಸ್ಟ್: ಇಂಗ್ಲೆಂಡ್ 357/6

ಲಾರ್ಡ್ಸ್, ಆ. 12: ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಪ್ರವಾಸಿ ಭಾರತವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದ್ದ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 357 ರನ್ ಗಳಿಸಿ ಮೇಲುಗೈ ಸಾಧಿಸಿದೆ.
ಟೆಸ್ಟ್‌ನ ಮೂರನೇ ದಿನವಾಗಿರುವ ಶನಿವಾರ ಮೊದಲ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಮುಹಮ್ಮದ್ ಶಮಿ ದಾಳಿಗೆ ಸಿಲುಕಿ ಅಗ್ರ ಸರದಿಯ ವಿಕೆಟ್‌ಗಳನ್ನು ಕೈ ಚೆಲ್ಲಿದರೂ ವಿಕೆಟ್ ಕೀಪರ್ ಬೈರ್‌ಸ್ಟೋವ್ ಮತ್ತು ಕ್ರಿಸ್ ವೋಕ್ಸ್ ಇಂಗ್ಲೆಂಡ್‌ನಬ್ಯಾಟಿಂಗ್‌ನ್ನು ಆಧರಿಸಿದರು.
ಮಂದ ಬೆಳಕಿನಿಂದ ಪಂದ್ಯ ನಿಂತಾಗ ವೋಕ್ಸ್ ಔಟಾಗದೆ 120 ಹಾಗೂ ಕರನ್ ಔಟಾಗದೆ 22 ರನ್ ಗಳಿಸಿದ್ದರು.
ಬೈರ್‌ಸ್ಟೋವ್ 93 ರನ್ ಗಳಿಸಿ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಅಲಿಸ್ಟರ್ ಕುಕ್(21), ಕೀಟನ್ ಜೆನ್ನಿಂಗ್ಸ್ (11), ಜೋ ರೂಟ್(19), ಪೋಪ್(28) ಔಟಾಗುವುದರೊಂದಿಗೆ ಇಂಗ್ಲೆಂಡ್ ಒಂದು ಹಂತದಲ್ಲಿ 24.4 ಓವರ್‌ಗಳಲ್ಲಿ 89 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತು. ಐದನೇ ವಿಕೆಟ್‌ಗೆ ಜೋಸ್ ಬಟ್ಲರ್ ಮತ್ತು ಬೈರ್‌ಸ್ಟೋವ್ ಜೊತೆಯಾಟದಲ್ಲಿ 42 ರನ್ ಸೇರಿಸಿದರು. 24 ರನ್ ಗಳಿಸಿದ ಬಟ್ಲರ್ ಅವರನ್ನು ಶಮಿ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಬಳಿಕ ಬೈರ್‌ಸ್ಟೋವ್ ಮತ್ತು ವೋಕ್ಸ್ 6ನೇ ವಿಕೆಟ್‌ಗೆ 189 ರನ್ ಜೊತೆಯಾಟ ನಡೆಸಿ ತಂಡದ ಮುನ್ನಡೆಯನ್ನು ಹೆಚ್ಚಿಸಿದರು.
►ಮಳೆಗೆ ಕೊಚ್ಚಿ ಹೋದ ಭಾರತದ ಬ್ಯಾಟಿಂಗ್: ಪಂದ್ಯದ ಎರಡನೇ ದಿನ ಭಾರತದ ಬ್ಯಾಟಿಂಗ್‌ಗೆ ಮಳೆ ಅಡ್ಡಿಪಡಿಸಿತ್ತು. ಟೀಮ್ ಇಂಡಿಯಾ ಆ್ಯಂಡರ್ಸನ್ (20ಕ್ಕೆ 5) ದಾಳಿಗೆ ಸಿಲುಕಿ 35.2 ಓವರ್‌ಗಳಲ್ಲಿ 107 ರನ್‌ಗಳಿಗೆ ಆಲೌಟಾಗಿದೆ. ಮೊದಲ ದಿನದ ಆಟ ಮಳೆಯಿಂದಾಗಿ ಕೊಚ್ಚಿ ಹೋಗಿತ್ತು. ಎರಡನೇ ದಿನವೂ ಮಳೆ ಅಡ್ಡಿಪಡಿಸಿತ್ತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಟೀಮ್ ಇಂಡಿಯಾದ ಬ್ಯಾಟಿಂಗ್ ಆರಂಭದಲ್ಲೇ ಕಳಪೆಯಾಗಿತ್ತು. ಆರ್ ಅಶ್ವಿನ್(29) ಗರಿಷ್ಠ ವೈಯಕ್ತಿಕ ಕೊಡುಗೆ ನೀಡಿದರು.
ಭಾರತ ಆರಂಭದ ಎರಡು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಆರಂಭಿಕ ದಾಂಡಿಗರಾದ ಮುರಳಿ ವಿಜಯ್ (0) ಮತ್ತು ಲೋಕೇಶ್ ರಾಹುಲ್ 8 ರನ್ ಗಳಿಸಿ ಜೇಮ್ಸ್ ಆ್ಯಂಡರ್ಸನ್‌ಗೆ ವಿಕೆಟ್ ಒಪ್ಪಿಸಿದರು. ತಂಡದ ಸ್ಕೋರ್ 6.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 10 ರನ್ ಆಗಿದ್ದಾಗ ಮಳೆ ಕಾಣಿಸಿಕೊಂಡು ಆಟ ಸ್ಥಗಿತಗೊಂಡಿತು. ಮತ್ತೆ ಆಟ ಆರಂಭಗೊಂಡಾಗ ತಂಡದ ಇನ್ನೊಂದು ವಿಕೆಟ್ ಉರುಳಿತು. 8.3ನೇ ಓವರ್‌ನಲ್ಲಿ ಅನಗತ್ಯವಾಗಿ ರನ್ ಕದಿಯಲು ಹೋಗಿ ಪೂಜಾರ ರನೌಟಾದರು. 25 ಎಸೆತಗಳನ್ನು ಎದುರಿಸಿದರೂ ಪೂಜಾರ 1 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಮತ್ತೆ ಮಳೆ ಕಾಣಿಸಿಕೊಂಡು ಆಟ ಸ್ಥಗಿತಗೊಂಡಿತು.
ಬಳಿಕ ಆಟ ಆರಂಭಗೊಂಡಾಗ ನಾಯಕ ವಿರಾಟ್ ಕೊಹ್ಲಿ 23 ರನ್ ಗಳಿಸಿ ವೋಕ್ಸ್‌ಗೆ ವಿಕೆಟ್ ಒಪ್ಪಿಸಿದರು. ಹಾರ್ದಿಕ್ ಪಾಂಡ್ಯ 11 ರನ್ ಮತ್ತು ದಿನೇಶ್ ಕಾರ್ತಿಕ್ 1 ಮತ್ತು ಅಜಿಂಕ್ಯ ರಹಾನೆ 18 ರನ್ , ಕುಲ್‌ದೀಪ್ ಯಾದವ್ ಮತ್ತು ಇಶಾಂತ್ ಶರ್ಮಾ ಖಾತೆ ತೆರೆಯದೆ ನಿರ್ಗಮಿಸಿದರು. ಮುಹಮ್ಮದ್ ಶಮಿ 10 ರನ್ ಗಳಿಸಿ ಔಟಾಗದೆ ಉಳಿದರು.
ಇಂಗ್ಲೆಂಡ್‌ನ ಆ್ಯಂಡರ್ಸನ್ 20ಕ್ಕೆ 5 ವಿಕೆಟ್, ವೋಕ್ಸ್ 2, ಬ್ರಾಡ್ ಮತ್ತು ಕರನ್ ತಲಾ 1 ವಿಕೆಟ್ ಪಡೆದರು.







