ಏಶ್ಯನ್ ಗೇಮ್ಸ್: 804 ಸದಸ್ಯರ ಭಾರತದ ನಿಯೋಗಕ್ಕೆ ಕ್ರೀಡಾ ಸಚಿವಾಲಯ ಅನುಮತಿ

ಹೊಸದಿಲ್ಲಿ, ಆ.11: ಏಶ್ಯನ್ ಗೇಮ್ಸ್‌ಗೆ 572 ಅಥ್ಲೀಟ್‌ಗಳು ಸೇರಿದಂತೆ 804 ಸದಸ್ಯರನ್ನು ಒಳಗೊಂಡ ಭಾರತದ ನಿಯೋಗಕ್ಕೆ ಕೇಂದ್ರ ಕ್ರೀಡಾ ಸಚಿವಾಲಯ ಹಸಿರು ನಿಶಾನೆ ತೋರಿದೆ. ಆದರೆ 755 ಸದಸ್ಯರುಗಳ ಖರ್ಚನ್ನು ಮಾತ್ರ ತಾನು ಭರಿಸುವುದಾಗಿ ಸ್ಪಷ್ಟಪಡಿಸಿದೆ. 232 ಅಧಿಕಾರಿಗಳಲ್ಲಿ 49 ಮಂದಿಯ ಖರ್ಚನ್ನು ಸರಕಾರ ಭರಿಸುವುದಿಲ್ಲ ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.
ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಶಿಫಾರಸು ಮಾಡಿರುವ ಎಲ್ಲ ಅಥ್ಲೀಟ್‌ಗಳು ಹಾಗೂ ಅಧಿಕಾರಿಗಳನ್ನು ಕ್ರೀಡಾ ಸಚಿವಾಲಯ ಒಪ್ಪಿಕೊಂಡಿದೆ. ಭಾರತದ ನಿಯೋಗದಲ್ಲಿರುವ 49 ಅಧಿಕಾರಿಗಳ ಖರ್ಚು-ವೆಚ್ಚವನ್ನು ಆಯಾ ಫೆಡರೇಶನ್‌ಗಳು ನೋಡಿಕೊಳ್ಳಬೇಕಾಗಿದೆ.ಸರಕಾರ 572 ಅಥ್ಲೀಟ್‌ಗಳು, 183 ಅಧಿಕಾರಿಗಳು, 119 ಕೋಚ್‌ಗಳು, 21 ವೈದ್ಯರು ಹಾಗೂ ಫಿಜಿಯೋಗಳು, 43 ಇತರ ಅಧಿಕಾರಿಗಳ ಖರ್ಚು-ವೆಚ್ಚವನ್ನು ಸರಕಾರ ಭರಿಸಲು ನಿರ್ಧರಿಸಿದೆ. 36 ಕ್ರೀಡೆಗಳಲ್ಲಿ 572 ಅಥ್ಲೀಟ್‌ಗಳು ಭಾಗವಹಿಸಲಿದ್ದು ಈ ಪೈಕಿ 312 ಪುರುಷರು ಹಾಗೂ 260 ಮಹಿಳಾ ಅಥ್ಲೀಟ್‌ಗಳಿದ್ದಾರೆ.
ಐಒಎ ಸಲ್ಲಿಸಿರುವ ಪಟ್ಟಿಯಲ್ಲಿರುವ ಎಲ್ಲ 26 ಮ್ಯಾನೇಜರ್‌ಗಳ ಖರ್ಚು-ವೆಚ್ಚಗಳನ್ನು ಭರಿಸಲು ಸರಕಾರ ನಿರಾಕರಿಸಿದೆ. ಮೂರು ಕೋಚ್‌ಗಳು ಹಾಗೂ 20 ಇತರ ಹೆಚ್ಚುವರಿ ಅಧಿಕಾರಿಗಳ ಖರ್ಚು-ವೆಚ್ಚವನ್ನು ಸರಕಾರ ನೋಡಿಕೊಳ್ಳುವುದಿಲ್ಲ. ಕ್ರೀಡಾ ಸಚಿವಾಲಯ ಅನುಮತಿ ನೀಡಿರುವ 12 ಸದಸ್ಯರ ಐಒಎ ನಿಯೋಗದಲ್ಲಿ ಚೀಫ್ ಡಿ ಮಿಶನ್ ಹಾಗೂ ಅವರ ನಾಲ್ವರು ಸಹಾಯಕರೂ ಇದ್ದಾರೆ. ಹೀಗಾಗಿ ಇದು ಸರಕಾರದ ಅಚ್ಚರಿಯ ನಡೆಯಾಗಿದೆ.
ತನ್ನ 12 ಸದಸ್ಯರ ನಿಯೋಗದಲ್ಲಿ ಕಚೇರಿ ಸಿಬ್ಬಂದಿ ಹಾಗೂ ವೈದ್ಯಕೀಯ ತಂಡವಿದೆ. ಇವರಿಗೆ ಸರಕಾರದ ಅನುಮತಿ ಬೇಕಾಗಿಲ್ಲ. ಇವರೆಲ್ಲರೂ ಸ್ವಂತ ಖರ್ಚಿನಲ್ಲೇ ತೆರಳಲಿದ್ದಾರೆ ಎಂದು ಐಒಎ ತಿಳಿಸಿದೆ.
ವಿವಾದಿತ ವ್ಯಕ್ತಿ ರಾಜ್‌ಕುಮಾರ್ ಸಚೇಟಿ ಚೀಫ್ ಡಿ ಮಿಶನ್‌ನ ನಾಲ್ವರು ಸಹಾಯಕರ ಪೈಕಿ ಒಬ್ಬರಾಗಿದ್ದು ರಾಜ್‌ಕುಮಾರ್ ಆಯ್ಕೆ ಕುರಿತು ಈ ಹಿಂದೆ ಆಕ್ಷೇಪಣೆ ವ್ಯಕ್ತವಾಗಿದೆ.
2014ರ ಆವೃತ್ತಿಯ ಏಶ್ಯನ್ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು ಗರಿಷ್ಠ ಪ್ರಮಾಣದ(13)ಪದಕಗಳನ್ನು ಜಯಿಸಿದ್ದರು. ಕಳೆದ ಆವೃತ್ತಿಯಲ್ಲಿ ಭಾರತ ಶೂಟಿಂಗ್‌ನಲ್ಲಿ ಎರಡನೇ ಗರಿಷ್ಠ(9)ಸಂಖ್ಯೆಯ ಪದಕಗಳನ್ನು ಜಯಿಸಿತ್ತು.







