ಕೊಪ್ಪ: ನಕಲಿ ಸಾಗುವಳಿ ಚೀಟಿ ನೀಡಿ ವಂಚನೆ: ಆರೋಪಿ ಬಂಧನ
ಕೊಪ್ಪ, ಆ.11: ತಹಶೀಲ್ದಾರರ ನಕಲಿ ಸೀಲು ಮತ್ತು ಸಹಿ ಹಾಕಿ ಸಾಗುವಳಿ ಚೀಟಿ ನೀಡಿ ವಂಚಿಸುತ್ತಿರುವ ಆರೋಪದ ಮೇಲೆ ಪಟ್ಟಣದ ಮೇಲಿನ ಪೇಟೆಯ ಕೆ. ಅಹ್ಮದ್ ಎಂಬವರನ್ನು ಕೊಪ್ಪ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಪಟ್ಟಣದ ಬೇಲಿಹಳ್ಳಿಯ ಅರುಂಧತಿ ಎಂಬವರು ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆಂದು ತಿಳಿದು ಬಂದಿದೆ.
ಇತ್ತೀಚೆಗೆ ತಮಗೆ ಸಂಬಂಧಪಟ್ಟ ಜಮೀನಿನ ಸಾಗುವಳಿ ಚೀಟಿ ಪಡೆಯಲು ತಾಲೂಕು ಕಚೇರಿಗೆ ಓಡಾಡುತ್ತಿದ್ದ ವೇಳೆ ಪರಿಚಯವಾದ ಕೆ.ಅಹ್ಮದ್ ಎಂಬವರು ಸಾಗುವಳಿ ಚೀಟಿಗಾಗಿ ನೀವು ಓಡಾಡುವುದು ಬೇಡ, ನಾನೇ ಅಧಿಕಾರಿಗಳನ್ನು ಮಾತನಾಡಿಸಿ ಕೊಡಿಸುತ್ತೇನೆ. ಇದಕ್ಕಾಗಿ 20,000 ರೂ. ಖರ್ಚಾಗುತ್ತದೆ ಎಂದು ತಿಳಿಸಿದ್ದರು. ಅವರು ತಿಳಿಸಿದಂತೆ ತಲಾ 10,000 ರೂ. ನಂತೆ ಎರಡು ಬಾರಿ ಚೆಕ್ ಮೂಲಕ ಹಣ ನೀಡಿದ್ದೇನೆ. ಇತ್ತೀಚೆಗೆ ಅವರು ನಮ್ಮ ಮನೆಗೆ ಬಂದು ಸಾಗುವಳಿ ಚೀಟಿಯೊಂದನ್ನು ನೀಡಿದ್ದು, ಇದನ್ನು ಯಾರಿಗೂ ತೋರಿಸಬೇಡಿ, ಶಾಸಕ ಟಿ.ಡಿ. ರಾಜೇಗೌಡರ ಬಳಿ ಮಾತನಾಡಿಸಿ ನಿಮಗೆ ಜಾಗ ಮಂಜೂರು ಮಾಡಿಸುತ್ತೇನೆ ಎಂದು ಹೇಳಿ ಹೋಗಿದ್ದರು. ಸಾಗುವಳಿ ಚೀಟಿ ಬಗ್ಗೆ ಅನುಮಾನಗೊಂಡು ತಾನು ಎರಡು ದಿನಗಳ ಹಿಂದೆ ತಹಶೀಲ್ದಾರ್ ಬಳಿ ವಿಚಾರಿಸಿದಾಗ ಇದು ನಮ್ಮಲ್ಲಿಂದ ಕೊಟ್ಟ ಸಾಗುವಳಿ ಚೀಟಿ ಅಲ್ಲ. ಇದರಲ್ಲಿರುವುದು ನನ್ನ ಸಹಿಯೂ ಅಲ್ಲ ಎಂದಿದ್ದರಿಂದ ಪೊಲೀಸರಿಗೆ ದೂರು ನೀಡಿದ್ದೇನೆಂದು ಅರುಂಧತಿ ತಿಳಿಸಿದ್ದಾರೆ.
ಈ ಬಗ್ಗೆ ಕೆ. ಅಹ್ಮದ್ ಬಳಿ ಕೇಳಿದಾಗ ನೀವು ಕೊಟ್ಟ 20,000 ಹಿಂದಕ್ಕೆ ಕೊಡುತ್ತೇನೆ, ಸಾಗುವಳಿ ಚೀಟಿ ವಾಪಸ್ಸು ಕೊಡಿ ನಿಮಗೆ ಬೇರೆ ಸಾಗುವಳಿ ಚೀಟಿ ಕೊಡುತ್ತೇನೆ ಎಂದಿದ್ದ. ಅದರಂತೆ ಶುಕ್ರವಾರ ಬೆಳಗ್ಗೆ ಮನೆಗೆ ಬಂದು ಹಣ ವಾಪಸ್ಸು ನೀಡಿ ಸಾಗುವಳಿ ಚೀಟಿ ಕೇಳಿದ್ದಾನೆ. ಇದೇ ರೀತಿ ಬೇರೆಯವರಿಗೂ ವಂಚನೆ ಮಾಡಿರುವ ಸಾಧ್ಯತೆಯಿದೆ. ಆದ್ದರಿಂದ ಕೆ. ಆಹ್ಮದ್‍ನನ್ನು ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದೇನೆಂದು ತಿಳಿಸಿದ್ದಾರೆ.
ಕೆ. ಆಹ್ಮದ್ ಈ ಹಿಂದೆಯೂ ಸಣ್ಣಕೆರೆಯ ಖತೀಜಾ ಎಂಬವರಿಗೆ ನಕಲಿ ಸಾಗುವಳಿ ಚೀಟಿ ನೀಡಿ ಆತನ ಬ್ಯಾಂಕ್ ಖಾತೆಗೆ ಆನ್‍ಲೈನ್ ಬ್ಯಾಂಕಿಂಗ್ ಮೂಲಕ ರೂ. 20,000 ಜಮಾ ಮಾಡಿಸಿಕೊಂಡಿದ್ದ. 2014ರಲ್ಲಿ ವ್ಯಕ್ತಿಯೊಬ್ಬರಿಗೆ ಕೃಷಿ ಜಮೀನು ಖರೀದಿಗೆ ಅನುಕೂಲವಾಗುವಂತೆ ನಕಲಿ ಕೃಷಿ ವ್ಯವಸಾಯಗಾರ ಕುಟುಂಬ ಪ್ರಮಾಣ ಪತ್ರ ಕೊಡಿಸಿದ್ದ ಎನ್ನಲಾಗಿದೆ.
ತಹಶೀಲ್ದಾರ್ ಸೀಲು, ಸಹಿ, ಸಾಗುವಳಿ ಚೀಟಿ ಎಲ್ಲವೂ ನಕಲಿ: ಕೆ.ಅಹ್ಮದ್ ನೀಡಿರುವ ಎರಡೂ ಸಾಗುವಳಿ ಚೀಟಿಯಲ್ಲಿ ತಹಶೀಲ್ದಾರ್, ಕೊಪ್ಪ ತಾಲೂಕು ಎಂಬ ಹೆಸರಿನಲ್ಲಿ ನಕಲಿ ರಬ್ಬರ್ ಸ್ಟಾಂಪ್ ಬಳಸಲಾಗಿದೆ. ತಹಶೀಲ್ದಾರರ ನಕಲಿ ಸಹಿಯನ್ನು ಹಸಿರು ಪೆನ್ನಿನಲ್ಲಿ ಹಾಕಲಾಗಿದೆ. ಸಾಮಾನ್ಯವಾಗಿ ಸಾಗುವಳಿ ಚೀಟಿಯ ಹಾಳೆ ಲೀಗಲ್ ಅಳತೆಯ ದಪ್ಪ ಕಾಗದ ಆಗಿರುತ್ತದೆ. ಕೆ. ಅಹ್ಮದ್ ನೀಡಿರುವ ಸಾಗುವಳಿ ಚೀಟಿಯ ಹಾಳೆ ಎ4 ಅಳತೆಯ ತೆಳು ಹಾಳೆಯಾಗಿದೆ. ಸಾಗುವಳಿ ಚೀಟಿ ಶುಲ್ಕ 1055 ರೂ. ಇರುತ್ತದೆ. ಆದರೆ ಈತ ನೀಡಿದ ಸಾಗುವಳಿ ಚೀಟಿಯಲ್ಲಿ 1800 ರೂ. ಎಂದು ಮುದ್ರಿಸಲಾಗಿದೆ. ಶುಲ್ಕವನ್ನು ಆನ್‍ಲೈನ್ ಚಲನ್ ಮೂಲಕ ಬ್ಯಾಂಕ್‍ಗೆ ಪಾವತಿಸಬೇಕಾಗುತ್ತದೆ. ಆದರೆ ಈತ ಮ್ಯಾನ್ಯುವಲ್ ಚಲನ್‍ನಲ್ಲಿ ಹಣ ಪಾವತಿಸಿರುವ ರಶೀದಿ ನೀಡಿದ್ದಾನೆ. ಬ್ಯಾಂಕ್ ಚಲನ್ ಸಹ ನಕಲಿಯಾಗಿದೆ ಎಂದು ತಿಳಿದು ಬಂದಿದೆ.
ಅರುಂಧತಿಯವರಿಗೆ ನೀಡಿರುವ ಸಾಗುವಳಿ ಚೀಟಿ ಕೊಪ್ಪ ಗ್ರಾಮಾಂತರ ಪಂಚಾಯತ್‍ನ ಸ.ನಂ. 130ರಲ್ಲಿ ಎಂದಿದೆ. ಅದೇ ರೀತಿ ಖತೀಜಾರವರಿಗೆ ನೀಡಿದ ಸಾಗುವಳಿ ಚೀಟಿಯಲ್ಲಿ ಹರಂದೂರು ಗ್ರಾಮ ಪಂಚಾಯತ್‍ನ ಸ.ನಂ. 65 ಎಂದು ನಮೂದಿಸಲಾಗಿದೆ. ಆದರೆ ಈ ಎರಡೂ ಸ.ನಂ.ನ ಜಾಗಗಳು ಸೊಪ್ಪಿನ ಬೆಟ್ಟದಡಿ ಬರುತ್ತದೆ. ಇಲ್ಲಿ ಸಾಗುವಳಿ ಚೀಟಿ ನೀಡಲು ಸರಕಾರದ ಆದೇಶವಿಲ್ಲ. ಪೊಲೀಸರು ಈತನನ್ನು ಕೂಲಂಕುಷವಾಗಿ ತನಿಖೆಗೊಳಪಡಿಸಿದರೆ ಇನ್ನಷ್ಟು ವಂಚನೆ ಪ್ರಕರಣಗಳು ಹೊರಬೀಳಬಹುದು ಎಂದು ವಂಚಿತರು ಅಭಿಪ್ರಾಯಿಸಿದಾರೆ.