ವಿಯೆಟ್ನಾಂ ಓಪನ್ : ಅಜಯ್ ಜಯರಾಮ್ ರನ್ನರ್ಸ್ ಅಪ್

ಹೊ ಚಿ ಮಿನ್ ಸಿಟಿ, ಆ.12: ಭಾರತದ ಅಜಯ್ ಜಯರಾಮ್ ಅವರು ವಿಯೆಟ್ನಾಂ ಓಪನ್ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್‌ನ ಫೈನಲ್‌ನಲ್ಲಿ ಸೋಲುವುದರೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
30ರ ಹರೆಯದ ಜಯರಾಮ್ ಅವರು ರವಿವಾರ ಫೈನಲ್‌ನಲ್ಲಿ ಇಂಡೊನೇಷ್ಯಾದ ಶೆಸರ್ ಹಿರೇನ್ ರುಸ್ಟಾವಿಟೊ ವಿರುದ್ಧ 14-21, 10-21 ಅಂತರದಲ್ಲಿ ಸೋಲು ಅನುಭವಿಸಿ ಪ್ರಶಸ್ತಿಯನ್ನು ಮುಡಿಗೇರಿಸುವ ಅವಕಾಶ ಕಳೆದುಕೊಂಡರು.
ಜಯರಾಮ್ ವಿರುದ್ಧ ಶೆಸರ್ ಸುಲಭವಾಗಿ ಜಯ ದಾಖಲಿಸಿದರು. ಕೇವಲ 28 ನಿಮಿಷಗಳಲ್ಲಿ ಫೈನಲ್ ಪಂದ್ಯ ಮುಗಿಯಿತು. ಜಯರಾಮ್ ಸತತ ಎರಡು ಟೂರ್ನಮೆಂಟ್‌ಗಳಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಕಳೆದ ತಿಂಗಳು ವೈಟ್ ನೈಟ್ಸ್ ಇಂಟರ್‌ನ್ಯಾಶನಲ್ ಚಾಲೆಂಜ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದರು.
ಕಳೆದ ವರ್ಷ ಜಯರಾಮ್ ಗಾಯದ ಸಮಸ್ಯೆ ಎದುರಿಸಿದ್ದರು. ಗಾಯದಿಂದ ಚೇತರಿಕೊಂಡು ಮತ್ತೆ ಸ್ಪರ್ಧಾತ್ಮಕ ಬ್ಯಾಡ್ಮಿಂಟನ್‌ಗೆ ಅವರು ವಾಪಸಾಗಿದ್ದರು.
ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಅಜಯ್ ಜಯರಾಮ್ ಅವರು ಜಪಾನ್‌ನ ಏಳನೇ ಶ್ರೇಯಾಂಕದ ಯು ಇಗರಾಶಿ ವಿರುದ್ಧ 21-14, 21-19 ಅಂತರದಲ್ಲಿ ಜಯ ದಾಖಲಿಸಿ ಪ್ರಶಸ್ತಿಯ ಸುತ್ತು ತಲುಪಿದರು.
34 ನಿಮಿಷಗಳ ಹಣಾಹಣಿಯಲ್ಲಿ ಅಜಯ್ ಜಯರಾಮ್ ಅವರು ಇಗರಾಶಿಗೆ ಸೋಲುಣಿಸಿದ್ದರು.
4 ಬಾರಿ ಇಂಡೊನೇಷ್ಯಾ ಇಂಟರ್‌ನ್ಯಾಶನಲ್ ಟೂರ್ನಮೆಂಟ್ ಚಾಂಪಿಯನ್ ಆಗಿರುವ ಶೇಸರ್ ಸೆಮಿಫೈನಲ್‌ನಲ್ಲಿ ಭಾರತದ ಮಿಥುನ್ ಮಂಜುನಾಥ್‌ರನ್ನು 21-17, 19-21, 21-14 ಅಂತರದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದರು.
ರಶ್ಯಾ ಓಪನ್‌ನಲ್ಲಿ ಭಾರತದ ಸೌರಭ್ ವರ್ಮಾ ಅವರು ಪುರುಷರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು.







