ಮೋದಿ ಸರಕಾರದ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನ: 7 ಪಕ್ಷಗಳ ಯುವಮೋರ್ಚಾ ನಿರ್ಧಾರ

ಹೊಸದಿಲ್ಲಿ, ಆ.12: ಅಪರೂಪದ ಒಗ್ಗಟ್ಟು ಪ್ರದರ್ಶಿಸಿರುವ 7 ವಿಪಕ್ಷಗಳ ಯುವಮೋರ್ಛಾಗಳು ನರೇಂದ್ರ ಮೋದಿ ಸರಕಾರದ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನ ನಡೆಸಲು ನಿರ್ಧರಿಸಿವೆ.
ನಿರುದ್ಯೋಗದ ಸಮಸ್ಯೆ, ಬೆಲೆ ಏರಿಕೆ, ಕೃಷಿ ಕ್ಷೇತ್ರದ ಸಮಸ್ಯೆಗಳು ಹಾಗೂ ಯುವಜನತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಕೇಂದ್ರ ಸರಕಾರದ ವೈಫಲ್ಯವನ್ನು ದೇಶದ ಜನತೆಯ ಮುಂದಿಡುವುದು ಆಂದೋಲನದ ಪ್ರಮುಖ ಉದ್ದೇಶವಾಗಿದೆ. ಈ ಕುರಿತು ಶುಕ್ರವಾರ ನಡೆದ ಸಭೆಯಲ್ಲಿ ಯುವ ಕಾಂಗ್ರೆಸ್, ಭಾರತೀಯ ಪ್ರಜಾಸತ್ತಾತ್ಮಕ ಯುವ ಒಕ್ಕೂಟ(ಡಿವೈಎಫ್‌ಐ), ಅಖಿಲ ಭಾರತ ಯುವ ಒಕ್ಕೂಟ(ಎಐವೈಎಫ್), ಅಖಿಲ ಭಾರತ ಯುವ ಲೀಗ್(ಎಐವೈಎಲ್), ಎನ್‌ಸಿಪಿ, ಎಸ್ಪಿ(ಸಮಾಜವಾದಿ ಪಕ್ಷ), ಭಾರತೀಯ ಮುಸ್ಲಿಂ ಲೀಗ್‌ನ ಯುವಮೋರ್ಛಾಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಡಿವೈಎಫ್‌ಐ, ಎಐವೈಎಫ್ ಮತ್ತು ಎಐವೈಎಲ್ ಕ್ರಮವಾಗಿ ಸಿಪಿಐ(ಎಂ), ಸಿಪಿಐ ಹಾಗೂ ಫಾರ್ವರ್ಡ್ ಬ್ಲಾಕ್ ಪಕ್ಷಗಳ ಯುವಸಂಘಟನೆಯಾಗಿದೆ. ಇಂದಿನ ದಿನದಲ್ಲಿ ಸರಕಾರದ ಸುಳ್ಳು ಭರವಸೆಯಿಂದ ದೇಶದಲ್ಲಿ ಧಾರ್ಮಿಕ ಅಭದ್ರತೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿವೆ. ವಿದ್ಯಾವಂತ ಯುವಕರಿಗೆ ಉದ್ಯೋಗ ದೊರೆಯುತ್ತಿಲ್ಲ, ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಿದೆ. ಜಾತಿ, ಧರ್ಮ ಆಧರಿತ ಹಿಂಸಾಚಾರ ಹೆಚ್ಚಾಗುತ್ತಿದೆ. ಈ ದೇಶವಿರೋಧಿ ಹಾಗೂ ಮಾನವೀಯತೆಯ ವಿರೋಧಿಯಾಗಿರುವ ಸರಕಾರದ ವಿರುದ್ಧ ಒಗ್ಗೂಡಿ ಹೋರಾಡುವ ಅಗತ್ಯವಿದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಕೇಶವಚಂದ್ ಯಾದವ್ ಹೇಳಿದ್ದಾರೆ.
ಕೋಮುಹಿಂಸಾಚಾರವನ್ನು ತಡೆಗಟ್ಟಿ ಸಮಾಜಕ್ಕೆ ಶಾಂತಿ ಮತ್ತು ಸೌಹಾರ್ದತೆಯನ್ನು ಮರಳಿ ತರುವ , ಬಲಪಂಥೀಯ ಶಕ್ತಿಗಳನ್ನು ಸಮರ್ಥವಾಗಿ ಎದುರಿಸಿ ದೇಶವನ್ನು ರಕ್ಷಿಸುವ ಉದ್ದೇಶ ನಮ್ಮದು ಎಂದು ಯುವಕಾಂಗ್ರೆಸ್ ವಕ್ತಾರ ಅಮ್ರೀಶ್ ರಂಜನ್ ಪಾಂಡೆ ಹೇಳಿದ್ದಾರೆ. ರಫೇಲ್ ಒಪ್ಪಂದ ಹಗರಣ, ಬ್ಯಾಂಕ್ ವಂಚನೆ ಹಾಗೂ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ದೇಶಬಿಟ್ಟು ಪಲಾಯನ ಮಾಡಿರುವ ವಿಷಯವನ್ನು ಮುಂದಿಟ್ಟು ಯುವಮೋರ್ಛಾ ಬೀದಿಗಿಳಿದು ಪ್ರತಿಭಟನೆ ನಡೆಸುತ್ತದೆ ಎಂದವರು ತಿಳಿಸಿದ್ದಾರೆ. ಕೇವಲ ಶ್ಲಾಘನೆ ಪಡೆಯುವುದು ನಮ್ಮ ಉದ್ದೇಶವಲ್ಲ, ಒಂದು ಸಿದ್ಧಾಂತವನ್ನು ಮುಂದಿರಿಸಿಕೊಂಡು ಹೋರಾಟ ನಡೆಸುತ್ತೇವೆ. 2019ರ ಲೋಕಸಭಾ ಚುನಾವಣೆಯಲ್ಲಿ ಯುವಜನರ ಶಕ್ತಿಯನ್ನು ನಾವು ತೋರಿಸಿಕೊಡುತ್ತೇವೆ ಎಂದು ಎನ್‌ಸಿಪಿ ಯುವಮೋರ್ಛಾದ ಅಧ್ಯಕ್ಷ ಧೀರಜ್ ಶರ್ಮ ಹೇಳಿದ್ದಾರೆ.
ಮೋದಿ ಸರಕಾರದ ವಿರುದ್ಧ ನಡೆಸಲುದ್ದೇಶಿಸಿರುವ ಜಂಟಿ ಕ್ರಿಯಾಯೋಜನೆಗೆ ಅಂತಿಮ ರೂಪ ನೀಡಲು ಮುಂದಿನ ಸೆಪ್ಟೆಂಬರ್ 3ರಂದು ಸಭೆ ಸೇರಲು ಯುವ ನಾಯಕರು ನಿರ್ಧರಿಸಿದರು. ಈ ಯುವಮೋರ್ಛಾಗಳ ಮಾತೃಪಕ್ಷಗಳು ಈಗಾಗಲೇ ಕೇಂದ್ರ ಸರಕಾರದ ವಿರುದ್ಧ ಕೈಜೋಡಿಸಿವೆ. ಆದರೆ ಯುವಮೋರ್ಛಾಗಳು ತಮ್ಮಲ್ಲಿರುವ ಸ್ಥಳೀಯ ಭಿನ್ನಾಭಿಪ್ರಾಯಗಳನ್ನು ನಿವಾರಿಸಿಕೊಂಡು ಸಾಮಾನ್ಯ ಕನಿಷ್ಟ ಕಾರ್ಯಕ್ರಮ ರೂಪಿಸಿಕೊಂಡರೆ ಮಾತ್ರ ಅಭಿಯಾನ ಯಶಸ್ವಿಯಾಗಲು ಸಾಧ್ಯ ಎಂದು ರಾಜಕೀಯ ವಿಶ್ಲೇಷಕ ಆಶಿಷ್ ರಂಜನ್ ಹೇಳಿದ್ದಾರೆ.







