ಮೋದಿಯ ಸರ್ವಾಧಿಕಾರಿ ಧೋರಣೆಗೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್

ಮೈಸೂರು,ಆ.12: ಪ್ರಧಾನಿ ನರೇಂದ್ರ ಮೋದಿ ಅವರ ಸರ್ವಾಧಿಕಾರಿ ಧೋರಣೆಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆ ಕೋಮುವಾದ ಮತ್ತು ಜಾತ್ಯಾತೀತವಾದದ ನಡುವೆ ನಡೆಯಲಿದೆ. ಕೋಮುವಾದ ಹೆಚ್ಚುದಿನ ಉಳಿಯುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಮಾತನಾಡಿ ಕಾಲಕಳೆಯುತ್ತಿದ್ದಾರೆ. ಇವರ ಆಟ ಇನ್ನು ನಡೆಯುವುದಿಲ್ಲ ಎಂದು ಟೀಕಿಸಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಎದುರು ಪ್ರಧಾನಿ ಅಭ್ಯರ್ಥಿ ಎಚ್.ಡಿ.ದೇವೇಗೌಡರೇ ಆಗಬಹುದು. ಪ್ರಧಾನಿ ಮೋದಿ ಅವರನ್ನು ಎದುರಿಸುವ ಶಕ್ತಿ ದೇವೇಗೌಡ ಅವರಿಗಿದೆ. ದೇವೇಗೌಡರು ರಾಜಕೀಯ ಮುತ್ಸದ್ದಿ. ದೇಶದಲ್ಲಿ ಅವರಿಗೆ ಗೌರವವಿದೆ. ಮುಂದಿನ ದಿನಗಳಲ್ಲಿ ಮೋದಿ ವರ್ಸಸ್ ಎಚ್.ಡಿ.ದೇವೇಗೌಡರೇ ಆಗಬಹುದು ಎಂದು ಹೇಳಿದರು.
ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪದಗ್ರಹಣ ಮಾಡುವಾಗ ದೇಶ-ವಿದೇಶದಿಂದ ಗಣ್ಯಾತಿಗಣ್ಯರನ್ನು ಕರೆಸಿದ್ದರು. ಆ ಸಮಾರಂಭಕ್ಕೆ ಖರ್ಚು ವೆಚ್ಚವನ್ನು ಬಿಜೆಪಿ ಬರಿಸಿತ್ತೇ? ಅಥವಾ ಮೋದಿ ತಮ್ಮ ಪಾಕೆಟ್‍ನಿಂದ ಹಾಕಿದ್ದಾರೆಯೇ? ಯಾರ ದುಡ್ಡಿನಿಂದ ಮೋದಿ ಖರ್ಚು ಮಾಡಿದ್ದರು ಎಂಬುದಕ್ಕೆ ಯಡಿಯೂರಪ್ಪ ಮತ್ತು ಈಶ್ವರಪ್ಪ ಲೆಕ್ಕ ಕೊಡುತ್ತಾರಾ ಎಂದು ಪ್ರಶ್ನಿಸಿದರು.
ಇದೇ ವೇಳೆ ನೂತನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರನ್ನು ಮೈಸೂರು ಜಿಲ್ಲಾ ಜೆಡಿಎಸ್ ವತಿಯಿಂದ ಸನ್ಮಾನಿಸಲಾಯಿತು. ಜೆಡಿಎಸ್ ಜಿಲ್ಲಾಧ್ಯಕ್ಷ ಎನ್.ನರಸಿಂಹಸ್ವಾಮಿ, ನಗರಾಧ್ಯಕ್ಷ ಕೆ.ಟಿ.ಚಲುವೇಗೌಡ, ಎಸ್.ಬಿ.ಎಂ. ಮಂಜು, ರವಿಚಂದ್ರೇಗೌಡ ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







