ಹನೂರು: ಯಡವರಹಳ್ಳಿಯಲ್ಲಿ ವಿಶ್ವ ಆನೆಗಳ ದಿನಾಚರಣೆ
ಹನೂರು,ಆ.12: ಮನುಷ್ಯನ ಲಾಲಸೆಯ ಕಾರಣದಿಂದಾಗಿ ವನ್ಯಜೀವಿಗಳು ಮತ್ತು ಮಾನವ ನಡುವಿನ ಸಂಘರ್ಷ ಹೆಚ್ಚುತ್ತಿದೆಎಂದು ಪಿ.ಜಿ ಪಾಳ್ಯ ಗ್ರಾಪಂ ಸದಸ್ಯರಾದ ಕೃಷ್ಣಮೂರ್ತಿ ತಿಳಿಸಿದರು.
ಹನೂರು ಕ್ಷೇತ್ರ ವ್ಯಾಪ್ತಿಯ ಮಲೈಮಹದೇಶ್ವರ ವನ್ಯಜೀವಿ ವಲಯ ಬಿಆರ್‍ಟಿ ಹುಲಿ ಸಂರಕ್ಷಿತ ವಲಯ ಬೈಲೂರು ಸಮೀಪ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮದ ಯಡವರಹಳ್ಳಿ ಆನೆ ಕಾಂಡರ್ ನಲ್ಲಿ ವಿಶ್ವ ಆನೆಗಳ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭ ಈ ಭಾಗದ ಅರಣ್ಯ ಪ್ರದೇಶದಲ್ಲಿ ವಾಚರ್ ಗಳಾಗಿ 20 ವರ್ಷಕ್ಕಿಂತ ಅಧಿಕ ಕಾಲ ನಿರಂತರವಾಗಿ ಸೇವೆ ಮಾಡಿಕೊಂಡಿರುವ ನಂಜುಂಡ, ರಂಗಸ್ವಾಮಿ, ಸಮೀಉಲ್ಲಾಖಾನ್ ರವರಿಗೆ ಪರಿಸರ ಪ್ರೇಮಿ ಕೃಷ್ಣಮೂರ್ತಿ ತಂಡದವರು ಗೌರವಿಸಿ ಅಭಿನಂದಿಸಿದರು .
ನಂತರ ಮಾತನಾಡಿದ ಕೃಷ್ಣಮೂರ್ತಿ, ನಮ್ಮ ಕರ್ನಾಟಕದಲ್ಲಿ 6 ಸಾವಿರಕ್ಕೂ ಹೆಚ್ಚು ಆನೆಗಳಿದ್ದು, ಚಾಮರಾಜನಗರ ಜಿಲ್ಲೆಯು ವಿಶಾಲವಾದ ಅರಣ್ಯ ಸಂಪತ್ತನ್ನು ಹೂಂದಿದೆ. ಈ ಭಾಗದಲ್ಲಿ 1000 ರಿಂದ 1800 ಅಧಿಕ ಆನೆಗಳು ಇವೆ ಎಂದು ಅಂಕಿ ಆಂಶಗಳ ಪ್ರಕಾರ ಹೇಳಲಾಗಿದೆ. ವನ್ಯಜೀವಿಗಳಿಗೂ ಸಹ ಬದುಕುವ ಹಕ್ಕಿದ್ದು, ಅರಣ್ಯ ಸಂರಕ್ಷಣೆ ಮೂಲಕ ವನ್ಯಜೀವಿಗಳನ್ನು ರಕ್ಷಿಸುವ ಕಾರ್ಯ ನಡೆಯಬೇಕಿದೆ ಎಂದರು.
ಈ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ಸಿಹಿ ವಿತರಣೆ ಮಾಡಲಾಯಿತು.