ಶ್ರೀನಗರ: ಗುಂಡಿನ ಚಕಮಕಿಯಲ್ಲಿ ಪೊಲೀಸ್ ಸಿಬ್ಬಂದಿ ಬಲಿ, ಮೂವರಿಗೆ ಗಾಯ

ಶ್ರೀನಗರ, ಆ.12: ಜಮ್ಮು ಕಾಶ್ಮೀರದ ಬಟ್ಮಾಲು ಪ್ರದೇಶದಲ್ಲಿ ರವಿವಾರ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದು ಭದ್ರತಾ ಪಡೆಯ ಮೂವರು ಯೋಧರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ಶ್ರೀನಗರ ಬಟ್ಮಾಲು ಪ್ರದೇಶದಲ್ಲಿ ಉಗ್ರರು ಅವಿತುಕೊಂಡಿರುವ ಬಗ್ಗೆ ದೊರೆತ ಮಾಹಿತಿಯನ್ವಯ ಆ ಪ್ರದೇಶಕ್ಕೆ ಧಾವಿಸಿದ ಜಮ್ಮುಕಾಶ್ಮೀರ ಪೊಲೀಸ್ ಪಡೆ, ವಿಶೇಷ ಕಾರ್ಯಾಚರಣೆ ತಂಡ(ಎಸ್‌ಒಜಿ) ಹಾಗೂ ಸಿಆರ್‌ಪಿಎಫ್ ಯೋಧರ ತಂಡ ಆ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ಆರಂಭಿಸಿದೆ. ಆ ಸಂದರ್ಭ ಭಯೋತ್ಪಾದಕರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು ಎಸ್‌ಒಜಿಯ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದು ಜಮ್ಮುಕಾಶ್ಮೀರ ಪೊಲೀಸ್ ಪಡೆಯ ಓರ್ವ, ಸಿಆರ್‌ಪಿಎಫ್‌ನ ಇಬ್ಬರು ಯೋಧರು ಗಾಯಗೊಂಡಿದ್ದಾರೆ . ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಜಮ್ಮು-ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ಎಸ್‌ಪಿ ವೈದ್ ತಿಳಿಸಿದ್ದಾರೆ.
ಶ್ರೀನಗರದಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ . ಜಮ್ಮು-ಕಾಶ್ಮೀರದಲ್ಲಿ ಆಗಸ್ಟ್ ತಿಂಗಳಿನಲ್ಲಿ ಇದುವರೆಗೆ ನಡೆದಿರುವ ಆರು ಎನ್‌ಕೌಂಟರ್ ಪ್ರಕರಣಗಳಲ್ಲಿ 16 ಭಯೋತ್ಪಾದಕರು, ಐವರು ಯೋಧರು ಹಾಗೂ ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 23 ಮಂದಿ ಹತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ





